ಸಾರಾಂಶ
ಕೊಪ್ಪಳ ತಾಲೂಕಿನ ಏತ ನೀರಾವರಿ ಯೋಜನೆಗಳ ಮೂಲಕ ಬರೋಬ್ಬರಿ ೭೭ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ಸಾಕಷ್ಟು ಅನುಕೂಲವಾಗಿದ್ದು, ರೈತರು ಅಭಿವೃದ್ಧಿಯಾಗುವುದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದಾರೆ. ಅವರು ಸರ್ಕಾರಿಯಾ ಆಯೋಗ ಮತ್ತು ಗಾಡ್ಲಿಲ್ ಆಯೋಗದ ವರದಿ ಓದಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಕೊಪ್ಪಳ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಪದೇ ಪದೇ ರಾಜ್ಯಗಳಿಗೆ ಕೇಂದ್ರದಿಂದ ಅನ್ಯಾಯವಾಗುತ್ತಲೇ ಇದೆ. ಅದರಲ್ಲೂ ಜಿಎಸ್‌ಟಿ ಹಂಚಿಕೆ ಮತ್ತು 15ನೇ ಹಣಕಾಸು ಆಯೋಗದ ಹಂಚಿಕೆಯಿಂದ ಅನ್ಯಾಯವಾಗುತ್ತಿದ್ದರೂ ಕೇಂದ್ರ ಸರಿಪಡಿಸುತ್ತಿಲ್ಲ. ಕೇಂದ್ರ ಸರ್ಕಾರವೇ ಒಪ್ಪಿಕೊಂಡಿರುವ ಸರ್ಕಾರಿಯಾ ಆಯೋಗದ ವರದಿ ಸಹ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಈ ರಾಷ್ಟ್ರಕಂಡ ಜನಪರ ಹಾಗೂ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತದ ಶಿಸ್ತು ಇತರರಿಗೆ ಮಾದರಿಯಾಗಿದೆ. ಅತ್ಯಂತ ಆರ್ಥಿಕ ಶಿಸ್ತಿನಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ರಾಜ್ಯದಲ್ಲಿ 3 ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಅನುಕೂಲವಾಗಿದೆ. ಇದುವರೆಗೆ 559 ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿರುವುದು ಗೋಲ್ಡನ್ ರೆಕಾರ್ಡ್ ಆಗಿದೆ. 1.24 ಕೋಟಿಗೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ₹2000 ಸಹಾಯಧನ ತಲುಪುತ್ತಿದೆ. 4.57 ಲಕ್ಷ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಕೊಡುತ್ತಿದ್ದೇವೆ. ರಾಜ್ಯದ 1.68 ಕೋಟಿ ಮನೆಗಳಿಗೆ ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳ ಅನುಕೂಲ ದೊರೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಮುಖ್ಯಮಂತ್ರಿ ₹83 ಸಾವಿರ ಕೋಟಿಯ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ ಎಂದು ಅವರು ಹೇಳಿದರು.ರಾಜ್ಯದಲ್ಲಿನ 36 ಲಕ್ಷ ರೈತರಿಗೆ ಪಂಪ್‌ಸೆಟ್, ಇನ್ನಿತರ ಸೌಕರ್ಯ ಒದಗಿಸಲಾಗಿದೆ. ಇದೇ ರೀತಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ರಾಜ್ಯ ಸರ್ಕಾರ ವಾರ್ಷಿಕವಾಗಿ ಜನರಿಗೆ ಸಾವಿರಾರು ಕೋಟಿ ರು.ಗಳನ್ನು ವ್ಯಯಿಸುತ್ತಿದೆ ಎಂದು ಹೇಳಿದರು.
ಯಲಬುರ್ಗಾ ತಾಲೂಕಿನಲ್ಲಿ ಯಾವುದೇ ನೀರಿನ ಮೂಲಗಳು ಇಲ್ಲ, ನದಿಯೂ ಇಲ್ಲ. ಹೀಗಾಗಿ, ಇಲ್ಲಿ ₹650 ಕೋಟಿಯ ಕೆರೆ ನಿರ್ಮಾಣ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಸಿದ್ದರಾಮಯ್ಯ ಅಸ್ತು ಎಂದರು.