ಮಂಡ್ಯ ಜಿಲ್ಲೆಯ 10 ಗ್ರಾಮಗಳು ಮಾದರಿ ಸೌರ ಗ್ರಾಮ ಸ್ಪರ್ಧೆಗೆ ಆಯ್ಕೆ

| Published : Aug 31 2025, 01:08 AM IST

ಮಂಡ್ಯ ಜಿಲ್ಲೆಯ 10 ಗ್ರಾಮಗಳು ಮಾದರಿ ಸೌರ ಗ್ರಾಮ ಸ್ಪರ್ಧೆಗೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ 10 ಗ್ರಾಮಗಳಾದ ಪಾಂಡವಪುರ ತಾಲೂಕಿನ ಕೆನ್ನಾಳು, ಗುಮ್ಮನಹಳ್ಳಿ, ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಅರಕೆರೆ, ಮಂಡ್ಯ ತಾಲೂಕಿನ ಕೀಲಾರ, ಸಂತೆಕಸಲಗೆರೆ, ಮದ್ದೂರು ತಾಲೂಕಿನ ಬೆಸಗರಹಳ್ಳಿ, ಕೆಸ್ತೂರು, ಮಳವಳ್ಳಿ ತಾಲೂಕಿನ ಬೆಳಕವಾಡಿ, ಕಿರುಗಾವಲು ಪಿ.ಎಂ.ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯಡಿ ಮಾದರಿ ಸೋಲಾರ್ ಗ್ರಾಮ ಸ್ಪರ್ಧೆಗೆ ಆಯ್ಕೆ.

ಕನ್ನಡಪ್ರಭ ವಾರ್ತೆ ಮಂಡ್ಯ

2011ರ ಜನಗಣತಿ ಪ್ರಕಾರ 5000ಕ್ಕಿಂತ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ಮಂಡ್ಯ ಜಿಲ್ಲೆಯ 10 ಗ್ರಾಮಗಳಾದ ಪಾಂಡವಪುರ ತಾಲೂಕಿನ ಕೆನ್ನಾಳು, ಗುಮ್ಮನಹಳ್ಳಿ, ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಅರಕೆರೆ, ಮಂಡ್ಯ ತಾಲೂಕಿನ ಕೀಲಾರ, ಸಂತೆಕಸಲಗೆರೆ, ಮದ್ದೂರು ತಾಲೂಕಿನ ಬೆಸಗರಹಳ್ಳಿ, ಕೆಸ್ತೂರು, ಮಳವಳ್ಳಿ ತಾಲೂಕಿನ ಬೆಳಕವಾಡಿ, ಕಿರುಗಾವಲು ಪಿ.ಎಂ.ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯಡಿ ಮಾದರಿ ಸೋಲಾರ್ ಗ್ರಾಮ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.

ಮಾದರಿ ಸೋಲಾರ್ ಗ್ರಾಮ ಸ್ಪರ್ಧೆಗೆ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುವುದು ಹಾಗೂ ಸ್ಪರ್ಧೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಅನುಕೂಲವಾಗುವಂತೆ ಹಲವು ಉತ್ತೇಜನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.

ಆಯ್ಕೆಯಾದ ಗ್ರಾಮ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿಯಡಿ ಹಾಗೂ ಇತರೆ ಜಕಾತಿಯ ಸ್ಥಾವರಗಳಿಗೆ ಗ್ರಾಹಕರಿಗೆ ಸೋಲಾರ್ ರೂಫ್ ಟಾಪ್‌ನ್ನು ಅಳವಡಿಸಲು ಪ್ರೋತ್ಸಾಹಿಸಲಾಗುವುದು.

ರೈತ ಗ್ರಾಹಕರ ಕೃಷಿ ಪಂಪ್‌ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಲು ಜನಜಾಗೃತಿ ಮೂಡಿಸುವುದು ಮತ್ತು ಕುಸುಮ್-ಸಿ ಯೋಜನೆಯಡಿಯಲ್ಲಿ ಸರ್ಕಾರಿ-ಖಾಸಗಿ ಜಾಗವನ್ನು ಪಡೆಯಲು ಸಹಾಯ ಮಾಡಲಾಗುವ್ಯದು. ಸರ್ಕಾರಿ ಕಚೇರಿ-ಕಟ್ಟಡಗಳ ಮೇಲೆ ಕುಡಿಯುವ ನೀರು ಮತ್ತು ಬೀದಿ ದೀಪಗಳಿಗೆ ಸೌರಶಕ್ತಿ ಅಳವಡಿಸುವುದು.

ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂ,ಎನ್,ಆರ್,ಇ) ಆದೇಶದನ್ವಯ ಜುಲೈ-2025 ರಿಂದ 6 ತಿಂಗಳವರೆಗೆ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಅವಧಿಯ ನಂತರ ಯಾವ ಗ್ರಾಮವು ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಬಳಕೆ ಅಳವಡಿಸಿಕೊಂಡಿರುತ್ತದೆಯೋ ಆ ಗ್ರಾಮವನ್ನು ಮಾದರಿ ಸೌರ ಗ್ರಾಮ ಎಂದು ಆಯ್ಕೆ ಮಾಡಲಾಗುತ್ತದೆ ಹಾಗೂ ಈ ಗ್ರಾಮಕ್ಕೆ ಎಂಎನ್‌ಆರ್‌ಇ ವತಿಯಿಂದ ಒಂದು ಕೋಟಿ ರು. ಪ್ರೋತ್ಸಾಹಧನ ನೀಡಲಾಗುವುದು.

ಜಿಲ್ಲೆಯ ವ್ಯಾಪ್ತಿಯಲ್ಲಿ ಪಿಎಂ ಸೂರ್ಯ ಘರ್ ಮುಪ್ತ್ ಬಿಜಿಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾಧಿಕಾರಿ ಅವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯತ್ ಸಿಇಒ, ತಹಸೀಲ್ದಾರರು, ಸೆಸ್ಕ್ ಎಂಜಿನಿಯರ್‌ಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.