ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ, 40 ಸಾವಿರ ದಂಡ: ತೀರ್ಪು

| Published : Oct 25 2024, 12:48 AM IST

ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ, 40 ಸಾವಿರ ದಂಡ: ತೀರ್ಪು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೀತಿಸುವ ನೆಪದಲ್ಲಿ ಒತ್ತಾಯದಿಂದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯನ್ನು ಮನೆಗೆ ಕರೆದೊಯ್ದು, ತಾವಿಬ್ಬರೂ ಜತೆಗಿರುವ ಫೋಟೋ ಫೇಸ್ ಬುಕ್‌, ವಾಟ್ಸಪ್‌ಗೆ ಹಾಕುವುದಾಗಿ ಹೆದರಿಸಿ ಅತ್ಯಾಚಾರ ಎಸಗಿ, ಕೊಲೆ ಬೆದರಿಕೆ ಹಾಕಿದ್ದ ಅತ್ಯಾಚಾರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೂಲತಃ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬಳ್ಳಾರಿ ಕಲ್ಯಾಣ ಮಂಟಪ ಹಿಂಭಾಗದ ವಿನಾಯಕ ನಗರ 4ನೇ ಕ್ರಾಸ್ ವಾಸಿಯಾದ ಇಮ್ರಾನ್ ಖಾನ್‌ ದೇವಡಿ(19 ವರ್ಷ) ಶಿಕ್ಷೆಗೆ ಗುರಿಯಾದ ಪಾಪಿ. ಇಲ್ಲಿನ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್‌ ವಿದ್ಯಾಭ್ಯಾಸ ಮಾಡುತ್ತಿದ್ದ ಪಿರ್ಯಾದಿ ಎಂಬ ವಿದ್ಯಾರ್ಥಿನಿಯನ್ನು ಇಮ್ರಾನ್ ದೇವಡಿ ಪರಿಚಯ ಮಾಡಿಕೊಂಡಿದ್ದ. ನಂತರ ಆ ಪರಿಚಯ ಸ್ನೇಹಕ್ಕೆ ತಿರುಗಿತ್ತು. ನಂತರ ಆರೋಪಿ ಇಮ್ರಾನ್ ಖಾನ್ ತನ್ನನ್ನು ಮದುವೆಯಾಗುವಂತೆ ಯುವತಿಗೆ ಒತ್ತಾಯಿಸುತ್ತಿದ್ದ.

2-12-2018ರಂದು ನಮ್ಮ ಮನೆಯಲ್ಲಿ ಕಾರ್ಯಕ್ರಮವಿದೆಯೆಂದು ಬಿಐಇಟಿ ಹಾಸ್ಟೆಲ್ ಹಿಂಭಾಗದ ಆಂಜನೇಯ ಬಡಾವಣೆಯ ತನ್ನ ವಾಸದ ಮನೆಗೆ ಯುವತಿಯನ್ನು ಕರೆದೊಯ್ದಿದ್ದನು. ಅಲ್ಲಿ ಒತ್ತಾಯದಿಂದ ಆಕೆಯ ಮೇಲೆ ಅತ್ಯಾಚಾರ ಎಸಗಿ, ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ನಿನ್ನ ಜತೆಗಿರುವ ಫೋಟೋಗಳನ್ನು ಫೇಸ್‌ ಬುಕ್‌, ವಾಟ್ಸಪ್‌ಗೆ ಹಾಕಿ ಮಾನ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದನು.

ಕಡೆಗೆ ಯುವತಿಯು ತನ್ನ ತಾಯಿ ಬಳಿ ಈ ವಿಚಾರ ತಿಳಿಸಿದಾಗ ಮಹಿಳಾ ಪೊಲೀಸ್ ಠಾಣೆಗೆ ಆರೋಪಿ ಇಮ್ರಾನ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ತನಿಖಾಧಿಕಾರಿ ಕೆ. ನಾಗಮ್ಮ ನ್ಯಾಯಾಲಯಕ್ಕೆ ಆರೋಪಿ ಇಮ್ರಾನ್ ಖಾನ್ ವಿರುದ್ಧ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ಅವರು ಅತ್ಯಾಚಾರದ ಆರೋಪಿ ಇಮ್ರಾನ್ ಖಾನ್ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆ ಆತನಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹40 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದರು. ದಂಡದ ಮೊತ್ತ ₹40 ಸಾವಿರವನ್ನು ಸಂತ್ರಸ್ಥೆಗೆ ನೀಡುವಂತೆ ಆದೇಶಿಸಿ, ತೀರ್ಪು ನೀಡಿದರು.

ಪಿರ್ಯಾದಿ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ ನ್ಯಾಯ ಮಂಡಿಸಿದರು. ತನಿಖಾಧಿಕಾರಿ ಪೊಲೀಸ್ ನಿರೀಕ್ಷಕಿ ಕೆ. ನಾಗಮ್ಮ, ಪಿರ್ಯಾದಿ ಪರ ನ್ಯಾಯ ಮಂಡನೆ ಮಾಡಿದ ಸರ್ಕಾರಿ ಸುನಂದಾ ಮಡಿವಾಳರ್ ರನ್ನು ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ ಶ್ಲಾಘಿಸಿದ್ದಾರೆ.