ಸಾರಾಂಶ
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಉನ್ನತೀಕರಣ ಮತ್ತು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಪಬ್ಲಿಕ್ ಶಾಲೆಗಳಿಗೆ ಸಿಎಸ್‌ಆರ್ ಅಡಿಯಲ್ಲಿ ಅನುದಾನ ಬಿಡುಗಡೆಯಾಗಿದೆ.
ಮಂಡ್ಯ : ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಈ ವರ್ಷ ಸರ್ಕಾರದಿಂದ 100 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಉನ್ನತೀಕರಣ ಮತ್ತು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಪಬ್ಲಿಕ್ ಶಾಲೆಗಳಿಗೆ ಸಿಎಸ್‌ಆರ್ ಅಡಿಯಲ್ಲಿ ಅನುದಾನ ಬಿಡುಗಡೆಯಾಗಿದೆ. ಆ ಮೂಲಕ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಪ್ರಯೋಗಾಲಯವನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.
ವಿಶ್ವೇಶ್ವರಯ್ಯ ನಾಲೆಯ ಅಚ್ಚುಕಟ್ಟಿನಲ್ಲಿ ಬರುವ ಸಂಪರ್ಕ ನಾಲೆ, ತುರುಗನೂರು, ಹೆಬ್ಬಕವಾಡಿ, ನಿಡಘಟ್ಟಶಾಖಾ ನಾಲೆಗಳ ಆಧುನೀಕರಣಕ್ಕೆ 400 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರವನ್ನು 63 ಲಕ್ಷ ರು. ವೆಚ್ಚದಲ್ಲಿ ದುರಸ್ತಿ ಕಾರ್ಯ ಮುಕ್ತಾಯಗೊಂಡಿದೆ. ಆಸನಗಳನ್ನು ಬದಲಾಯಿಸಬೇಕೆಂಬ ಬೇಡಿಕೆ ಮೇರೆಗೆ ಹೆಚ್ಚುವರಿಯಾಗಿ 50 ಲಕ್ಷ ರು. ಹಣವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಳದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಶಾಸಕ ಪಿ.ರವಿಕುಮಾರ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಉಪವಿಭಾಗಾಧಿಕಾರಿ ಶಿವಮೂರ್ತಿ ಇತರರಿದ್ದರು.
ಪಥ ಸಂಚಲನ ವಿಜೇತರು:
78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ 30 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ವಿಜೇತರಾದವರ ಪಟ್ಟಿ ಹೀಗಿದೆ.
ಪಥ ಸಂಚಲನದಲ್ಲಿ ಅಗ್ನಿ ಶಾಮಕ ದಳ ಪ್ರಥಮ, ಅಬಕಾರಿ ದಳ ದ್ವಿತೀಯ, ಗೃಹ ರಕ್ಷಕ ದಳ ತೃತೀಯ. ಎನ್‌ಸಿಸಿ ವಿಭಾಗದಲ್ಲಿ ಪಿಇಎಸ್ ಬಾಲಕಿಯರ ಕಾಲೇಜು ಪ್ರಥಮ, ಅನಿಕೇತನ ಪದವಿ ಪೂರ್ವ ಕಾಲೇಜು ದ್ವಿತೀಯ, ಮಂಡ್ಯ ವಿಶ್ವ ವಿದ್ಯಾಲಯ ಎಸ್ ಡಿ- 1 ತಂಡವು ತೃತೀಯ. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ರೋಟರಿ ಬಾಲಕಿಯರ ಪ್ರೌಢಶಾಲೆ ಪ್ರಥಮ, ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢ ಶಾಲೆ ದ್ವಿತೀಯ, ಆದರ್ಶ ಪ್ರೌಢ ಶಾಲೆ ಬಾಲಕಿಯರ ತಂಡ ತೃತೀಯ.
ಪ್ರೌಢಶಾಲಾ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ, ಪಿಇಎಸ್ ಪ್ರೌಢ ಶಾಲೆ ಬಾಲಕರ ತಂಡ ದ್ವಿತೀಯ, ಸೆಂಟ್ ಜೋಸೆಫ್ ಪ್ರೌಢಶಾಲೆಯ ಬಾಲಕಿಯರ ತಂಡ ತೃತೀಯ. ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ತಂಡ ದ್ವಿತೀಯ, ಪಿ ಇ ಎಸ್ ಬಾಲಕರ ಕಾಲೇಜು ಎನ್ ಸಿ ಸಿ ತಂಡ ತೃತೀಯ.
ಲ್ಯಾಪ್‌ಟಾಪ್ ವಿತರಣೆ:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಾದ ಎಸ್.ಎಸ್.ಜ್ಯೋತಿ, ಜಯಲಕ್ಷ್ಮಿ, ಎಂ.ಒ.ಕಿರಣ್, ಎಚ್.ಎಸ್.ವಸುಧಾ ಎಚ್.ಎಸ್ ಅವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಎಂ.ಕೆ.ಫಾತಿಮಾ, ಅಫ್ರೀನ್ ಖಾನಂ (ಎಸ್.ಎಸ್.ಎಲ್.ಸಿ) ಅವರಿಗೆ 8,000 ರು. ಹಾಗೂ ಜುನೈದ್ ಅಲಿ (ಪಿಯುಸಿ) ಎಂಬ ವಿದ್ಯಾರ್ಥಿಗೆ 12,000 ರು.ಗಳನ್ನು ಮೌಲಾನಾ ಅಬ್ದುಲ್ ಕಲಂ ಆಜಾದ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಂಗಾಂಗ ದಾನ ಮಾಡಿದವರಿಗೆ ಪ್ರಶಂಸಾ ಪತ್ರ:
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಂಗಾಂಗ ದಾನ ಮಾಡಿದ ಕೆ.ಆರ್.ಪೇಟೆ ತಾಲೂಕು ಲೋಕಸರ ಗ್ರಾಮದ ಎಲ್.ಜಿ.ಬೊಮ್ಮರಾಜು, ಸೋಮನಾಥಪುರ ಗ್ರಾಮದ ಬಸವಣ್ಣ, ಕ್ಯಾತಗನಹಳ್ಳಿ ಗ್ರಾಮದ ಕೆ.ಕೆ.ರಾಜೇಶ್, ಮಂಡ್ಯ ತಾಲೂಕು ಗೋಪಾಲಪುರದ ಸಿ.ಎಸ್.ಗಿರೀಶ್ ಸೇರಿದಂತೆ 12 ಮಂದಿಯ ಕುಟುಂಬ ಸದಸ್ಯರಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು.