ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.

ಕಾರ್ಯಕ್ರಮ ಉದ್ಘಾಟನೆ ವೇಳೆ ಗ್ಯಾರಂಟಿ ಫಲಾನುಭವಿಗಳು, ರೈತರು, ವಿದ್ಯಾರ್ಥಿಗಳು, ಪೌರಕಾರ್ಮಿಕರನ್ನು ವೇದಿಕೆಗೆ ಕರೆದು ಅವರೊಂದಿಗೆ ದೀಪಬೆಳಗಿಸಲಾಯಿತು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಅವರು ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ತೆರೆದಿದ್ದ ಅಕ್ಕಾ ಕೆಫೆ, ಅರಿವು ಕೇಂದ್ರಗಳಿಗೆ ಭೇಟಿ ಕೊಟ್ಟು, ಅಲ್ಲಿನ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಿದರು. ನಂತರ ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳ ಬಳಿಗೆ ಮುಖ್ಯಮಂತ್ರಿ ಅವರು ತಾವೇ ತೆರಳಿ ಉಭಯ ಕುಶಲೋಪರಿ ವಿಚಾರಿಸಿದರು. ಗೃಹಲಕ್ಷ್ಮೀ ಹಣ ಬಳಸಿ ಸ್ವ ಉದ್ಯೋಗ ಆರಂಭಿಸಿದ ಮಹಿಳೆಯರು ತಾವು ತಯಾರಿಸಿದ್ದ ಖಾದ್ಯವನ್ನು ಸಮಾರಂಭಕ್ಕೆ ತಂದು ಸಿಎಂ, ಸಚಿವರು, ಶಾಸಕರಿಗೆ ಸವಿಯುವಂತೆ ಮನವಿ ಮಾಡಿದ್ದು ಗಮನ ಸೆಳೆಯಿತು.

ಸಮಾರಂಭ ಪೂರ್ಣಗೊಂಡ ನಂತರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ರೈತರು, ವಿದ್ಯಾರ್ಥಿಗಳೊಂದಿಗೆ ಕುಳಿತು ಸಿಎಂ ಬಾಳೆ‌ ಎಲೆ‌ ಭೋಜನ ಸೇವಿಸಿದರು. ಈ ವೇಳೆ, ಪಕ್ಕದಲ್ಲಿ ಕುಳಿತ ರೈತನೊಂದಿಗೆ, ‘ಯಾವೂರು, ಏನು ಬೇಳೆ ಹಾಕಿದ್ಯಾ, ಮಳೆ ಏನಾದ್ರು ಬಿತ್ತಾ, ಏನು ಭಯ ಬೀಳಬೇಡ, ನಮ್ಮ ಸರ್ಕಾರ ಇದೆ ’ ಎಂದು ಧೈರ್ಯ ತುಂಬಿದರು.

-ಬಾಕ್ಸ್‌-

ರೈತ ಚೈತನ್ಯ ಸೇರಿ ವಿವಿಧ ಯೋಜನೆಗಳ

ಪೋರ್ಟಲ್‌, ಆ್ಯಪ್‌ಗಳಿಗೆ ಸಿಎಂ ಚಾಲನೆ

ಕಾರ್ಯಕ್ರಮದಲ್ಲಿ ಕೆಲ ಹೊಸ ಯೋಜನೆ, ವೆಬ್‌ಪೋರ್ಟಲ್‌ ಮತ್ತು ಆ್ಯಪ್‌ಗಳಿಗೆ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು. ವಿವಿಧ ಬೆಳೆಗಳ ವಿಸ್ತೀರ್ಣ, ಮಾರುಕಟ್ಟೆ ಪರಿಸ್ಥಿತಿ ಹಾಗೂ ಕೀಟ ಮತ್ತು ರೋಗಬಾಧೆಗಳ ಬಗ್ಗೆ ರೈತರಿಗೆ ನಿಖರ ಮಾಹಿತಿ ಒದಗಿಸಲು ಡಿಜಿಟಲ್‌ ಕೃಷಿ-ತಂತ್ರಜ್ಞಾನ ಅಭಿಯಾನ ಜಾರಿಗೊಳಿಸಲು ರೂಪಿಸಿರುವ ರೈತ ಚೈತನ್ಯ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯಡಿ ಡ್ರೋನ್‌ ಮತ್ತು ಉಪಗ್ರಹ ಚಿತ್ರ ಬಳಸಿ ಬೆಳೆ ಸಮೀಕ್ಷೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರಿಂದ ಸಕಾಲದಲ್ಲಿ ಸರ್ಕಾರಕ್ಕೆ ದತ್ತಾಂಶ ಸಂಗ್ರಹವಾಗುತ್ತದೆ.

ರಾಜ್ಯದಲ್ಲಿನ ನಿವೇಶನ ರಹಿತರಿಗಾಗಿ ಸೂರು ಒದಗಿಸಲು 5 ಲಕ್ಷ ನಿವೇಶನ ಹಂಚಿಕೆ ಯೋಜನೆ ಹಾಗೂ ಸೈನಿಕ ಸಮ್ಮಾನ್ ಯೋಜನೆ ಆದೇಶಕ್ಕೆ ಇದೇ ವೇಳೆ ಮುಖ್ಯಮಂತ್ರಿ ಅವರು ಸಹಿ ಮಾಡಿದರು. ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸಲಾಯಿತು.

ಅದೇ ರೀತಿ ವಾಹನಗಳ ಮಾಲಿನ್ಯ ನಿಯಂತ್ರಣ ಸುಧಾರಿತ ಸಾಧನ ಅಳವಡಿಕೆ(ರೆಟ್ರಾಫಿಟ್‌ ಎಮಿಶನ್‌ ಕಂಟ್ರೋಲ್‌ ಡಿವೈಸ್‌) ಯೋಜನೆಗೆ ಚಾಲನೆ, ಶಾಲೆಗಳ ಸಿಎಸ್‌ಆರ್‌ ಪೋರ್ಟಲ್‌ ಅನಾವರಣ, ಸೇವಾ ಒನ್‌, ಒನ್‌ ಕರ್ನಾಟಕ ಮೊಬಿಲಿಟಿ ಆ್ಯಪ್‌ ಅವತಾ 2.0, ಬಿಎಂಟಿಸಿ ಬಸ್ಸುಗಳ ಸಂಚಾರ ಮಾಹಿತಿ ಲಭ್ಯವಿರುವ ‘ಬಿಎಂಟಿಸಿ 2.0 ಆ್ಯಪ್‌’ಗಳನ್ನು ಮುಖ್ಯಮಂತ್ರಿ ಅವರು ಲೋಕಾರ್ಪಣೆ ಮಾಡಿದರು.