ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ರಾಜ್ಯ ಸರ್ಕಾರ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ 24005 ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿದೆ.
ಇದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 1001 ಜನ ಪೌರಕಾರ್ಮಿಕರಿಗೆ ಕಾಯಂ ಆಗುವ ಭಾಗ್ಯ ದೊರೆಯಲಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಿವೆ. ಇದರಲ್ಲಿ 2165 ಜನ ಪೌರಕಾರ್ಮಿಕರಿದ್ದಾರೆ. ಈ ಪೈಕಿ 1001 ನೇರ ಪಾವತಿ ವೇತನ ಪಡೆಯುವ ಕಾರ್ಮಿಕರಿದ್ದರೆ, 365 ಜನ ಪೌರಕಾರ್ಮಿಕರು ಕಾಯಂ ಪೌರಕಾರ್ಮಿಕರಿದ್ದಾರೆ. ಇನ್ನು 799 ಪೌರಕಾರ್ಮಿಕರು ಗುತ್ತಿಗೆ ಆಧಾರದ ಪೌರಕಾರ್ಮಿಕರಿದ್ದಾರೆ.
ನೇರ ಪಾವತಿ ಏನಿದು?
ಹಾಗೆ ನೋಡಿದರೆ ಪಾಲಿಕೆಯಲ್ಲಿ ಕಳೆದ ಮೂರ್‍ನಾಲ್ಕು ದಶಕಗಳಿಂದ ಗುತ್ತಿಗೆ ಆಧಾರದ ಪೌರಕಾರ್ಮಿಕರೇ ಇದ್ದರು. ಪೌರಕಾರ್ಮಿಕರು ಇದಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದರು.
ಒಂದು ಬಾರಿಯಂತೂ ಮಲವನ್ನೇ ಮೈ ಮೇಲೆ ಸುರುವಿಕೊಂಡು ಪ್ರತಿಭಟನೆ ನಡೆಸಿರುವುದುಂಟು. ಗುತ್ತಿಗೆ ಆಧಾರದ ಪೌರಕಾರ್ಮಿಕ ಪದ್ಧತಿಯಲ್ಲಿ ಸಾಕಷ್ಟು ಗೋಲ್ ಮಾಲ್ ಕೂಡ ಆಗುತ್ತಿದ್ದವು.
ಕೆಲಸ ಮಾಡುವವರ ಪೌರಕಾರ್ಮಿಕರ ಪಟ್ಟಿಯಲ್ಲಿ ನಕಲಿ ಪೌರಕಾರ್ಮಿಕರು ಸೇರಿದ್ದುಂಟು. ಇವರನ್ನು ತೆಗೆದುಹಾಕಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸಿದ್ದುಂಟು.
ಇದೆಲ್ಲ ಹೋರಾಟಕ್ಕೆ ಮಣಿದು ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಅಂದರೆ 2017ರಲ್ಲಿ ಗುತ್ತಿಗೆ ಆಧಾರದ ಪೌರಕಾರ್ಮಿಕರು ಬೇಡವೇ ಬೇಡ ಎಂದುಕೊಂಡು 700 ಜನಸಂಖ್ಯೆಗೆ ಒಬ್ಬರಂತೆ ಪೌರಕಾರ್ಮಿಕರನ್ನು ನೇರ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು.
ಆಗಿನಿಂದ 1001 ಜನ ಪೌರಕಾರ್ಮಿಕರಿಗೆ ಮಹಾನಗರ ಪಾಲಿಕೆಯೇ ನೇರ ವೇತನ ಪಾವತಿ ಮಾಡಿ ಕೆಲಸಕ್ಕೆ ತೆಗೆದುಕೊಂಡಿತ್ತು. ಆದರೆ ಕಾಯಂ ಹಾಗೂ ನೇರ ವೇತನ ಪಾವತಿ ಪೌರಕಾರ್ಮಿಕರಷ್ಟೇ ನಗರ ಸ್ವಚ್ಛತೆಗೆ ಸಾಕಾಗುತ್ತಿರಲಿಲ್ಲ.
ಹೀಗಾಗಿ, ಗುತ್ತಿಗೆ ಆಧಾರದ ಮೇಲೂ ಕೆಲ ಪೌರಕಾರ್ಮಿಕರನ್ನು ಪಾಲಿಕೆ ಕೆಲಸಕ್ಕೆ ತೆಗೆದುಕೊಂಡಿತ್ತು. ಅಂಥವರು ಪಾಲಿಕೆಯಲ್ಲಿ 799 ಜನರಿದ್ದಾರೆ. ಅವರೆಲ್ಲ ಗುತ್ತಿಗೆ ಆಧಾರದ ಮೇಲೆ ಈಗಲೂ ಕೆಲಸ ನಿರ್ವಹಿಸುತ್ತಿದ್ದಾರೆ.
ಇದೀಗ ನೇರ ವೇತನ ಪಡೆಯುವ ಪೌರಕಾರ್ಮಿಕರನ್ನು ಕಾಯಂ ಗೊಳಿಸುವ ಕುರಿತು ಬಜೆಟ್‌ನಲ್ಲಿ ಘೋಷಿಸಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ 1001 ಪೌರಕಾರ್ಮಿಕರು ಇದೀಗ ಕಾಯಂ ಆಗಲಿದ್ದಾರೆ. ಇದು ಪೌರಕಾರ್ಮಿಕರಲ್ಲಿ ಸಂತಸವನ್ನುಂಟು ಮಾಡಿದೆ.
ನೇರ ವೇತನಕ್ಕಾಗಿ ಹೋರಾಟ: ಇದೀಗ 799 ಜನ ಗುತ್ತಿಗೆ ಆಧಾರದಲ್ಲಿದ್ದಾರೆ. ಇವರನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ಬರಲ್ಲ. ಹೀಗಾಗಿ ನೇರ ವೇತನ ಪಾವತಿಯಡಿ ನೇಮಕ ಮಾಡಿಕೊಳ್ಳಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಬರೋಬ್ಬರಿ 15 ದಿನಗಳಿಗೂ ಹೆಚ್ಚು ಕಾಲ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಗುತ್ತಿಗೆ ಪದ್ಧತಿ ರದ್ದು ಮಾಡಿ ನೇರ ವೇತನ ಪಾವತಿಯಡಿ ನೇಮಕ ಮಾಡಿಕೊಳ್ಳಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ತೆಗೆದುಕೊಳ್ಳಲಾಗಿದೆ.
ಅದರ ಶಿಫಾರಸ್ಸು ಇದೀಗ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಳಿ ಹೋಗಿದೆ. ಅಲ್ಲಿಂದ ಒಪ್ಪಿಗೆ ಬಂದ ಬಳಿಕ ಗುತ್ತಿಗೆ ಆಧಾರದ ಪೌರಕಾರ್ಮಿಕ ಪದ್ಧತಿಯೇ ರದ್ದಾಗಲಿದೆ.
)
;Resize=(128,128))
;Resize=(128,128))
;Resize=(128,128))