ಶರಣರ ಸಂರಕ್ಷಿಸಿದರೆ ಸಾರ್ಥಕ ಫಲ ಉಣಬಹುದು: ಸಾಣೇಹಳ್ಳಿ ಶ್ರೀ

| Published : Feb 18 2024, 01:31 AM IST

ಶರಣರ ಸಂರಕ್ಷಿಸಿದರೆ ಸಾರ್ಥಕ ಫಲ ಉಣಬಹುದು: ಸಾಣೇಹಳ್ಳಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆಯಲ್ಲಿ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾಮಠದಲ್ಲಿ ಕಾಯಕಯೋಗಿ ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರುಶರಣರನ್ನು ಬೀದಿಯಲ್ಲಿ ಬೆಳೆದ ಮಾವಿನ ಮರದಂತೆ ಭಾವಿಸದೆ ಭಕ್ತರ ಮನದಂಗಳದ ಮಾವಿನ ಮರದಂತೆ ಸಂರಕ್ಷಣೆ ಮಾಡಿದ್ದಲ್ಲಿ ಅದರಿಂದ ಫಲವನ್ನು ಉಣಬಹುದು ಎಂದು ಸಾಣೇಹಳ್ಳಿಯ ತರಳಬಾಳು ಮಠದ ಡಾ. ಪಂಡಿತರಾದ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.

ತಾಲೂಕಿನ ಸಿದ್ದಯ್ಯನ ಕೋಟೆಯಲ್ಲಿ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ನಡೆಯುತ್ತಿರುವ ಕಾಯಕಯೋಗಿ ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ಮಾತನಾಡಿದರು.

ನೊಂದವರಿಗೆ ನೆರಳು ನೀಡಿ ಕೈ ಹಿಡಿದು ದಾರಿ ತೋರಿಸಿದ್ದ ಬಸವಣ್ಣನವರು ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದರು. ಅವರ ಹಾದಿಯಲ್ಲಿಯೇ ಸಾಗಿದ ಇಳಕಲ್ ಮಹಾಂತ ಅಪ್ಪಗಳು ಜನರಲ್ಲಿರುವ ಅಜ್ಞಾನ , ಅಂಧಕಾರವನ್ನು ಹೋಗಲಾಡಿಸಿ ಸಮಾನತೆಯನ್ನು ಕಲ್ಪಿಸುವತ್ತ ತನ್ನ ನೆಲೆಯನ್ನೇ ದಿಕ್ಕರಿಸಿ ಸಾಗಿದರು. ಅವರ ಹಾದಿ ಯಲ್ಲಿಯೇ ಸಾಗುತ್ತಿರುವ ಶ್ರೀ ಮಠದ ಬಸವಲಿಂಗ ಶ್ರೀಗಳು ಈ ಭಾಗದ ಜನರಿಗೆ ಬಸವಣ್ಣನ ವಿಚಾರಗಳನ್ನು ಬಿತ್ತುತ್ತಿರುವುದು ಶ್ಲಾಘನೀಯ ಎಂದರು.

ಸಮಾಜದಲ್ಲಿ ದೊಡ್ಡ ಮಠಗಳಿಗೇ ಹೋಲಿಕೆ ಮಾಡಿಕೊಂಡಲ್ಲಿ ಚಿಕ್ಕಚಿಕ್ಕ ಮಠಗಳು ಸಮಾಜದ ಪರಿವರ್ತನೆಯಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿವೆ ಮಠಗಳನ್ನು ಕೇವಲ ಬೀದಿಯಲ್ಲಿ ಬೆಳೆದ ಮರಗಳಂತೆ ಕಾಣಬಾರದು. ಪ್ರತಿಯೊಬ್ಬರ ಭಕ್ತರ ಮನದಲ್ಲಿ ಜೋಪಾನ ಮಾಡುವಂತಾ ಗುಣಗಳನ್ನು ಬೆಳೆಸಿಕೊಂಡಲ್ಲಿ ಸ್ವಾಮೀಜಿಗಳಿಂದಲೂ ಉತ್ತಮ ಸೇವೆಯನ್ನು ನಿರೀಕ್ಷಿಸಿ ಹೊಸ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಬಲ್ಲವು ಎಂದರು.

ಶ್ರೀಮಠದ ಕಾರ್ಯದರ್ಶಿಪಿ.ಆರ್.ಕಾಂತರಾಜ್ ಮಾತನಾಡಿ, ಕಳೆದ 25 ವರ್ಷಗಳಿಂದ ಗಡಿ ಭಾಗದ ಜನರಿಗೆ ವಿಶ್ವ ಗುರು ಬಸವಣ್ಣನ ವಿಚಾರದಾರೆಗಳನ್ನು ತಿಳಿಸುತ್ತಾ ಇಳಕಲ್ ಮಹಾಂತ ಅಪ್ಪಗಳ ಹಾದಿಯಲ್ಲಿಯೇ ಸಾಗುತ್ತಾ ಮೌಡ್ಯ ಕಂದಚಾರಗಳನ್ನು ದೂರ ಸರಿಸಿ ಹಿಂದುಳಿದ ತಾಲೂಕಿನ ಶ್ರೀ ಮಠವನ್ನು ರಾಜ್ಯಕ್ಕೆ ಪರಿಚಯಿಸಿರುವ ಶ್ರೀ ಕಾಯಕ ಯೋಗಿ ಶ್ರೀ ಬಸವಲಿಂಗ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸಂದರ್ಭದಲ್ಲಿ ಇಳಕಲ್ ಮಠದ ಗುರು ಮಹಾಂತ ಸ್ವಾಮೀಜಿ, ಲಿಂಗಸೂರು ಸಿದ್ದಲಿಂಗ ಮಹಾ ಸ್ವಾಮೀಜಿ, ಮರೆಗುದ್ದಿ ಮಹಾಂತ ಮಠದ ಗುರು ಮಹಾಂತ ಸ್ವಾಮೀಜಿ, ಮರೆಗುದ್ದಿ ನೀಲ ವಿಜಯ ಮಹಂತಮ್ಮ, ಬಸವಲಿಂಗ ಸ್ವಾಮೀಜಿ, ಶ್ರೀ ಮಠದ ಕಾರ್ಯದರ್ಶಿ ಕಾಂತರಾಜ, ನಿವೃತ್ತ ಪ್ರಾಚಾರ್ಯ ನುಂಕಪ್ಪ ಇದ್ದರು.