ಬಸವ ಮಂದಿರ ಸೇರಿ 101 ಮನೆಗಳು ಈಗ ವಕ್ಪ್‌ ಆಸ್ತಿ: ಆರ್.ಅಶೋಕ್

| Published : Dec 03 2024, 12:30 AM IST

ಸಾರಾಂಶ

ವಕ್ಪ್ ಬೋರ್ಡ್ ತೀರ್ಮಾನವನ್ನು ಸುಪ್ರಿಂ ಕೋರ್ಟ್ ಕೂಡ ಪ್ರಶ್ನಿಸುವಂತಿಲ್ಲ ಎಂಬ ಕಾನೂನು ರೂಪಿಸಿದ್ದಾರೆ. ಆದ್ದರಿಂದ 2013ರ ವಕ್ಫ್‌ ತಿದ್ದುಪಡಿ ಹಿಂದಕ್ಕೆ ಪಡೆದು, ವಕ್ಫ್ ಬೋರ್ಡ್ ರದ್ದುಪಡಿಸಬೇಕು .

ಕನ್ನಡಪ್ರಭ ವಾರ್ತೆ ಮೈಸೂರು

ಕಾಂಗ್ರೆಸ್‌ ಅನುಕೂಲ ಸಿಂಧು ರಾಜಕಾರಣದಲ್ಲಿ ತೊಡಗಿದೆ. ಜವಹರಲಾಲ್‌ ನೆಹರು ಮತ್ತು ಮನಮೋಹನ್‌ ಸಿಂಗ್‌ ಮಾಡಿದ ಕಾನೂನುಗಳಿಂದಾಗಿ ಮೈಸೂರಿನ ಮುನೇಶ್ವರನಗರದ ಬಸವ ಮಂದಿರ ಸೇರಿ 101 ಮನೆಗಳು ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನೇಶ್ವರನಗರದ ಸರ್ವೇ ನಂ. 153 ರಲ್ಲಿರುವ 101 ಮನೆಗಳು ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಇದರಲ್ಲಿ ಬಸವೇಶ್ವರ ಮಠವೂ ಸೇರಿದೆ. ಅಲ್ಲಿನ ಮಾತೆ ಬಸವಾಂಜಲಿ ಅವರು ಈ ಬಗ್ಗೆ ಪತ್ರ ಬರೆದಿದ್ದರಿಂದ ನಾವು ಭೇಟಿ ನೀಡಿದ್ದೇವೆ. ಈಗ ಅಲ್ಲಿನ ನಿವಾಸಿಗಳೆಲ್ಲ ಒಕ್ಕಲೆಬ್ಬುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಅಲ್ಲಿನ ನಿವಾಸಿಗಳು ಬಸ್‌ ಮಾಡಿಕೊಂಡು ಬೆಂಗಳೂರಿಗೆ ಹೋಗಿ ವಕ್ಫ್‌ ಬೋರ್ಡ್‌ ಮುಂದೆ ಸಾಲುಗಟ್ಟಿ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ಇದೇ ಬಸವ ಮಂದಿರಕ್ಕೆ ನಮ್ಮ ಸರ್ಕಾರ ಇದ್ದಾಗ 60 ಲಕ್ಷ ಅನುದಾನ ನೀಡಲಾಗಿತ್ತು. ಈಗ ಮಠ ಕೂಡ ಈದ್ಗಾ ಆಗುತ್ತಿದೆ. ಮಠದಲ್ಲಿ ಗುಮ್ಮಟ ಯಾವಾಗ ಕಟ್ಟುತ್ತಾರೋ ಗೊತ್ತಿಲ್ಲ. ಮುನೇಶ್ವರನಗರ ಹೋಗಿ ಮುಲ್ಲಾ ನಗರವಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳೇ ಆರೋಪಿಸುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದರು.

ಇಷ್ಟಕ್ಕೆಲ್ಲಾ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಾರಣ. ವಕ್ಫ್‌ ಕಾಯ್ದೆ ಜಾರಿಗೊಳಿಸಿದ್ದು ಮತ್ತು ಅದನ್ನು ತಿದ್ದುಪಡಿ ಮಾಡಿದ್ದರಿಂದ ಹಿಂದೂಗಳು ಈ ದೇಶದಲ್ಲಿ ಎರಡನೇ ದರ್ಜೆ ನಾಗರೀಕರಾಗಿ ಉಳಿಯುವಂತಾಗಿದೆ ಎಂದರು.

ಕಾಂಗ್ರೆಸ್‌ ವೋಟಿಗಾಗಿ ಅನೇಕ ರೀತಿಯಲ್ಲಿ ಅನುಕೂಲ ಸಿಂಧು ರಾಜಕೀಯ ಮಾಡಿದೆ. ಕಾನೂನು ರೂಪಿಸುವಾಗ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಷರೀಯವನ್ನು ಒಪ್ಪಿಕೊಂಡ ಮುಸ್ಲಿಮರು, ಕ್ರಿಮಿನಲ್‌ ಪ್ರಕರಣಗಳಿಗೆ ಷರೀಯ ಒಪ್ಪಲಿಲ್ಲ. ಏಕೆಂದರೆ ಷರೀಯದಲ್ಲಿ ಅತ್ಯಾಚಾರಿಗಳನ್ನು ಕಲ್ಲು ಹೊಡೆದು ಕೊಲ್ಲುವುದು, ಕೊಲೆಗೆ ಸಾರ್ವಜನಿಕವಾಗಿ ಕೊಲೆ ಮಾಡುವುದು ಮುಂತಾದ ಕಟ್ಟುಪಾಡುಗಳಿವೆ. ಆದ್ದರಿಂದ ಅದನ್ನು ಒಪ್ಪಲಿಲ್ಲ ಎಂದರು.

ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ಬದಲಿಸಲು ಜಮೀರ್‌ ಅಹಮದ್‌ ಆದೇಶಿಸಿದ ಬಳಿಕ ಹಾಗೂ ರೈತರಿಗೆ ನೊಟೀಸ್‌ ನೀಡಿದ ಬಳಿಕ ಈ ಹೋರಾಟ ಆರಂಭವಾಗಿದೆ. ಕಾಂಗ್ರೆಸ್ ನವರು ಮುಸಲ್ಮಾನರನ್ನು ಓಲೈಸುತ್ತಿದ್ದಾರೆ. ಹಿಂದೂಗಳಿಗೆ ನೋವಾದರೆ ಅವರಿಗೆ ಏನು ಆಗೋದಿಲ್ಲ. ಮುಸ್ಲೀಮರಿಗೆ ತೊಂದರೆ ಆದ ಕೂಡಲೇ ಕ್ರಮ ಕೈಗೊಳ್ಳುತ್ತಾರೆ ಎಂದರು.

ವಕ್ಫ್ ಬೋರ್ಡ್ ಕ್ಯಾನ್ಸರ್ ರೀತಿ ರೈತರ ಜಮೀನನ್ನು ಕಬಳಿಕೆ‌ ಮಾಡಲು ಮುಂದಾಗಿದೆ. ಇದೇ ಕಾಂಗ್ರೆಸ್ ಪಕ್ಷ ಈ ಹಿಂದೆ ಉಳುವವನೇ ಭೂಮಿ ಒಡೆಯ ಎಂದಿತ್ತು. ಆದರೀಗ ರೈತರ ಜಮೀನನ್ನು ‌ವಕ್ಫ್ ಬೋರ್ಡ್ ಆಸ್ತಿ ಎಂದು‌‌ ಹೇಳುತ್ತಿದೆ. ಮೈಸೂರಿನಲ್ಲಿ ‌ಕ್ಕೂ ಹೆಚ್ಚು ಎಕರೆ ಭೂಮಿಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿದೆ. ಸುಮಾರು 30-40 ವರ್ಷಗಳಿಂದ ವಾಸಿಸುತ್ತಿರುವ ಜನರು ಖಾತೆ ಕಂದಾಯ ಕಟ್ಟುತ್ತಾ ಬಂದಿದ್ದಾರೆ. ಈಗ ಮನೆಹಾಳ ವಕ್ಫ್ ಬೋರ್ಡ್ ಆ ಜಾಗವನ್ನು ತಮ್ಮದೆಂದು ಹೇಳುತ್ತಿದೆ. ಮುಸ್ಲಿಂ ಕುಟುಂಬವೇ ಇಲ್ಲದ ಸ್ಥಳವನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಲಾಗಿದೆ ಎಂದು ಅವರು ಕಿಡಿಕಾರಿದರು.

ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾದರೆ, ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ನೀವೇ ಕಾರಣರಾಗುತ್ತೀರಿ. ರೈತರನ್ನು ವಕ್ಫ್ ಬೋರ್ಡ್ ಮುಂದೆ ನಿಲ್ಲಿಸುವ ಕೆಲಸ ಬಿಡಬೇಕು. ಮಠ ಮಾನ್ಯಗಳ ಆಸ್ತಿ ಕಬಳಿಕೆ ಕೈ ಬಿಡಬೇಕು. ವಕ್ಫ್ ಬೋರ್ಡ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ವಕ್ಫ್ ಬೋರ್ಡ್ ಕಾಯ್ದೆಯ ತಿದ್ದುಪಡಿ ಮಾಡೇ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಎಷ್ಟೇ ವಿರೋಧಿಸಿದರೂ ತಿದ್ದುಪಡಿ ಮಾಡುವುದಾಗಿ ಅವರು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್ ಪಕ್ಷ ಮತಾಂಧರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ವ್ಯಾಕರಣ ಗೊತ್ತಾ, ಸಂಧಿ ಗೊತ್ತಾ, ಸಮಾಸ ಗೊತ್ತ ಅಂದು ಕೇಳುವ ಸಿಎಂ ಸಿದ್ದರಾಮಯ್ಯ ಅವರು ಕಾನೂನು ಪಂಡಿತರು. ಈಗ ವಕ್ಫ್ ಬೋರ್ಡ್ ಕಾಯ್ದೆ ಬಗ್ಗೆ ಏನು ಹೇಳುತ್ತಾರೆ? ಬಿಜೆಪಿ ವಕ್ಫ್ ಕಾಯ್ದೆಗೆ ವಿರುದ್ಧವಿದೆ. ಈಗ ನಿಮ್ಮ ನಿಲುವೇನು ತಿಳಿಸಿ ಎಂದು ಸವಾಲು ಹಾಕಿದರು.

ಸಿಎಂ ಸಿದ್ದರಾಮಯ್ಯನವರಿಗೆ ಮೈಸೂರಿನ ಜನರ ನೋವೇ ಕಾಣಿಸುತ್ತಿಲ್ಲ. ಮತಾಂಧರಿಗೆ ಕಾಯ್ದೆ ಮೂಲಕ ಬಲ ಕೊಡುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇದನ್ನು ಮಾಡಿದ್ದಾರೆ. ವಕ್ಫ್ ಬೋರ್ಡ್ ಗೆ ದಾನ ಕೊಟ್ಟಿರುವ ಜಾಗ ಮಾತ್ರ ವಕ್ಫ್ ಗೆ ಸೇರಿದ್ದು. ಈ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂಬುದನ್ನು ತಿಳಿಸಿ. ಮೈಸೂರಿನ ಮುನೇಶ್ವರನಗರದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮೈಸೂರಿನ ಜನತೆಗೆ ಸಿಎಂ ಸಿದ್ದರಾಮಯ್ಯ ನ್ಯಾಯ ಕೊಡಿಸಬೇಕು. ಎರಡು ಬಾರಿ ನಿಮ್ಮನ್ನು ಸಿಎಂ ಮಾಡಿದ ಮೈಸೂರಿನ ಜನತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ಅವರು ಹೇಳಿದರು.

ಕೇಂದ್ರದ ಮಾಜಿ ಸಚಿವ ಎ. ನಾರಾಯಣ ಸ್ವಾಮಿ ಮಾತನಾಡಿ, ವಕ್ಪ್ ಬೋರ್ಡ್ ತೀರ್ಮಾನವನ್ನು ಸುಪ್ರಿಂ ಕೋರ್ಟ್ ಕೂಡ ಪ್ರಶ್ನಿಸುವಂತಿಲ್ಲ ಎಂಬ ಕಾನೂನು ರೂಪಿಸಿದ್ದಾರೆ. ಆದ್ದರಿಂದ 2013ರ ವಕ್ಫ್‌ ತಿದ್ದುಪಡಿ ಹಿಂದಕ್ಕೆ ಪಡೆದು, ವಕ್ಫ್ ಬೋರ್ಡ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್‌, ಮಾಜಿ ಶಾಸಕ ಪ್ರೀತಂ ಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಮೇಯರ್‌ ಗಳಾದ ಸಂದೇಶ್‌ ಸ್ವಾಮಿ, ಶಿವಕುಮಾರ್‌, ನಗರ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಎಸ್‌. ಮಹದೇವಯ್ಯ, ಪ್ರಧಾನ ಕಾರ್ಯದರ್ಶಿಗಳಾದ ರಘು, ಕೇಬಲ್‌ ಮಹೇಶ್‌, ಜೋಗಿ ಮಂಜು, ಮಹೇಶ್‌ರಾಜೇ ಅರಸ್‌ ಮೊದಲಾದವರು ಇದ್ದರು.