ಸಾರಾಂಶ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 2024-25ನೇ ಸಾಲಿನಲ್ಲಿ ₹12.71 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದೆ. ಬಜೆಟ್ ಗಾತ್ರ ₹1573.48 ಕೋಟಿಯಾಗಿದ್ದು, ಕಳೆದ ಸಾಲಿಗಿಂತ ಶೇ. 38ರಷ್ಟು ಹೆಚ್ಚಾಗಿದೆ. ಆದರೆ, ಇದು ಬೋಗಸ್ ಬಜೆಟ್ ಎಂದು ವಿರೋಧ ಪಕ್ಷ ಟೀಕಿಸಿದರೆ, ಅತ್ಯುತ್ತಮ ಬಜೆಟ್ ಎಂದು ಆಡಳಿತ ಪಕ್ಷ ಸಮರ್ಥಿಸಿಕೊಂಡಿದೆ.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ತೆರಿಗೆ ನಿರ್ಧಾರಣೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದರು. ಇವನಾರವ ಇವನಾರವ ಎಂದು ವಿಶ್ವಗುರು ಬಸವಣ್ಣನ ವಚನ ಸ್ಮರಿಸುತ್ತಾ ಬಜೆಟ್ ಮಂಡನೆ ಶುರು ಮಾಡಿದ ಗುಂಡೂರ, ಬರೋಬ್ಬರಿ ಒಂದುಗಂಟೆ ಕಾಲ ಆಯವ್ಯಯ ಮಂಡಿಸಿದರು.ಬಜೆಟ್‌ನಲ್ಲಿ ಏನಿದೆ?
ಪಾಲಿಕೆ ಸದಸ್ಯರ ನಿಧಿ ಪರಿಷ್ಕರಣೆ, ಮೇಯರ್- ಉಪಮೇಯರ್ ವಾಹನ ಖರೀದಿಗೆ ಅಸ್ತು, ತೆರಿಗೆ ಸಂಗ್ರಹಿಸುವ ಅತ್ಯುತ್ತಮ ಅಧಿಕಾರಿ, ನೌಕರರಿಗೆ ಪುರಸ್ಕಾರ, ಆಸ್ತಿಕರ ₹250 ಕೋಟಿಯ ಗುರಿ. ಮೂಲಸೌಲಭ್ಯಕ್ಕೆ ₹1037 ಕೋಟಿ ಮೀಸಲು, ಹೀಗೆ ನಾನಾ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಹಾಕಿಕೊಂಡಿದೆ. ಇನ್ನು ಕಸ ಕೊಡಿ ಹಣ ಪಡಿ ಎಂಬ ಹೊಸ ಯೋಜನೆಯನ್ನು ಘೋಷಿಸಿರುವುದು ಈ ಬಜೆಟ್‌ನ ವಿಶೇಷ.ಆದಾಯ ಎಷ್ಟು?
ಪಾಲಿಕೆಯ ಆರಂಭಿಕ ಶಿಲ್ಕು ₹61.63 ಕೋಟಿ ಇದ್ದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನಗಳನ್ನು ಒಳಗೊಂಡಂತೆ ₹643.20 ಕೋಟಿ ನಿರೀಕ್ಷಿಸಲಾಗಿದೆ. ತೆರಿಗೆ ರಾಜಸ್ವವೂ ₹294.66 ಕೋಟಿಯಾಗಿದೆ. ತೆರಿಗೆಯೇತರ ಆದಾಯ ₹308.52 ಕೋಟಿ. ಪಾಲಿಕೆ ಆಸ್ತಿಗಳಿಂದ ಬಂದ ಬಾಡಿಗೆ ₹22.95 ಕೋಟಿ. ಸ್ವತ್ತುಗಳ ಮಾರಾಟದಿಂದ ಬರುವ ಆದಾಯ ₹128 ಕೋಟಿ ನಿರೀಕ್ಷಿಸಲಾಗಿದೆ. ಇತರೆ ₹114.51 ಕೋಟಿ ಸೇರಿದಂತೆ ₹1573.48 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ವೆಚ್ಚ ಎಷ್ಟು?
ಮಾನವ ಸಂಪನ್ಮೂಲ ವೆಚ್ಚ ₹206.99 ಕೋಟಿ, ಆಡಳಿತ ನಿರ್ವಹಣೆಗಾಗಿಯೇ ₹155.86 ಕೋಟಿ, ಎಸ್ಸಿಎಸ್ಟಿ ಮತ್ತು ಹಿಂದುಳಿದ ಕಲ್ಯಾಣ ವೆಚ್ಚಗಳು ₹24.31 ಕೋಟಿ, ಕಾಯ್ದಿಟ್ಟ ನಿಧಿ ಹಾಗೂ ಇತರೆ ನಿಧಿ ಮತ್ತು ವಂತಿಗೆಗಾಗಿಯೇ ₹42 ಕೋಟಿ ಮೀಸಲಿಟ್ಟಿದೆ. ಮೂಲಸೌಲಭ್ಯ, ಆಸ್ತಿಗಳ ಸೃಜನೆಗಾಗಿ ₹1037.96 ಕೋಟಿ ಮೀಸಲಿಟ್ಟಿದೆ. ಇತರೆ ಖರ್ಚಿಗಾಗಿ ₹106.23 ಕೋಟಿ ವಿನಿಯೋಗಿಸಲಾಗಿದೆ. ಇದರಿಂದ ಒಟ್ಟು ₹1573.35 ಕೋಟಿ ಖರ್ಚಾಗಲಿದೆ. ಇದರಿಂದಾಗಿ ₹12.72 ಲಕ್ಷ ಉಳಿತಾಯದ ಬಜೆಟ್ ಅನ್ನು ಪಾಲಿಕೆ ಮಂಡಿಸಿದೆ.ನಮ್ಮ ನಡೆ ಸುಸ್ಥಿರ ಅಭಿವೃದ್ಧಿಯ ಕಡೆ ಎಂಬ ಘೋಷವಾಕ್ಯದೊಂದಿಗೆ ಮಂಡಿಸಿದ ಬಜೆಟ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂಗವಾಗಿ 75 ಅಡಿ ಎತ್ತರದ ಧ್ವಜ ಸ್ಥಂಭ ನಿರ್ಮಿಸಿದ್ದನ್ನು ಸ್ಮರಿಸಿಕೊಳ್ಳಲಾಗಿದೆ.
ವ್ಯಾಪಾರ ವಹಿವಾಟು:ಇನ್ಮೇಲೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ವ್ಯಾಪಾರ ವಹಿವಾಟುಗಳಿಗೆ ಪರವಾನಗಿ ಕೊಡುವುದನ್ನು ಬಿಟ್ಟು ವಲಯ ಕಚೇರಿಗಳಲ್ಲೇ ಪರವಾನಗಿ ಕೊಡಲು ತೀರ್ಮಾನಿಸಲಾಗಿದ್ದು, ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು ವಿಶೇಷ. ಇದು ಕೇಂದ್ರ ಕಚೇರಿಗೆ ಜನರು ಅಲೆಯುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ. ಈ ಮೂಲಕ ಹೆಚ್ಚಿನ ಸಂಪನ್ಮೂಲ ಕ್ರೂಢೀಕರಣಕ್ಕೆ ಒತ್ತು ನೀಡಿದಂತಾಗುತ್ತದೆ ಎಂದು ಗುಂಡೂರ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಸದಸ್ಯರ ನಿಧಿ ಪರಿಷ್ಕರಣೆ:ಇನ್ನು ದಿನ ಪ್ರತಿ ಸದಸ್ಯರಿಗೆ ₹75 ಲಕ್ಷ ನಿಧಿ ನೀಡಲಾಗುತ್ತಿತ್ತು. ಇದನ್ನು ₹90 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹75 ಕೋಟಿ ಮೀಸಲಿರಿಸಲಾಗಿದೆ.
ಸಿಬ್ಬಂದಿಗೆ ತರಬೇತಿ:ಸಮನ್ವಯದ ಸುಸ್ಥಿರ ಅಭಿವೃದ್ಧಿ ಹಾಗೂ ದಕ್ಷ ಆಡಳಿತ ನೀಡಲು ಪಾಲಿಕೆಯು ಮೂಲಸೌಲಭ್ಯ ಕಲ್ಪಿಸಲು ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದಕ್ಕಾಗಿ ಸಿಬ್ಬಂದಿಗೆ ಜನಸ್ನೇಹಿಯಾಗಲು, ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗಲೆಂದು ತರಬೇತಿ ನೀಡಲು ಯೋಜಿಸಲಾಗಿದೆ. ಇದಕ್ಕಾಗಿ ಪಾಲಿಕೆ ಪ್ರತ್ಯೇಕ ಸಮಿತಿ ರಚಿಸಲಿದೆ. ಜತೆಗೆ ಪಾಲಿಕೆಯ ಆಂತರಿಕ ವರ್ಗಾವಣೆ ನೀತಿ ಜಾರಿಗೊಳಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಯೋಜಿಸಿದೆ. ದಕ್ಷ ಸಿಬ್ಬಂದಿಗೆ ಪುರಸ್ಕಾರ ನೀಡಲಾಗುವುದು.
ಮೇಯರ್- ಉಪಮೇಯರ್‌ಗೆ ಹೊಸ ವಾಹನ:ಮೇಯರ್- ಉಪಮೇಯರ್‌ಗಳು ಈ ವರೆಗೆ ಬಾಡಿಗೆ ವಾಹನದಲ್ಲಿ ಓಡಾಡುತ್ತಿದ್ದರು. ಅದಕ್ಕಾಗಿ ಪಾಲಿಕೆಯಿಂದಲೇ ಹೊಸ ವಾಹನ ಖರೀದಿಸಲು ನಿರ್ಧರಿಸಿದೆ. ಇದಕ್ಕಾಗಿ ₹40 ಲಕ್ಷ ಮೀಸಲಿಟ್ಟಿದೆ. ಕಂದಾಯ ವಿಭಾಗದಲ್ಲಿ ತೆರಿಗೆ ಸಂಗ್ರಹವನ್ನು ನಿಗದಿತ ಸಮಯದಲ್ಲಿ ಗುರಿ ಮುಟ್ಟಿದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ಪುರಸ್ಕಾರ ನೀಡಲು ₹2 ಲಕ್ಷ ಮೀಸಲಿರಿಸಲಾಗಿದೆ.
ತೆರಿಗೆ ಸುಧಾರಣೆ:ತೆರಿಗೆ ಸುಧಾರಣೆಗೆ ಈಗಾಗಲೇ ಮೊಬೈಲ್ ಆ್ಯಪ್ , ಹೊಸ ತಂತ್ರಾಂಶದ ಮೂಲಕ ತೆರಿಗೆ ಆಕರಿಸಲಾಗುತ್ತಿದೆ. ಇನ್ಮುಂದೆ ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ತೆರಿಗೆದಾರರಿಗೆ ಎಸ್‌ಎಂಎಸ್ ಮೂಲಕ ಅವರ ಮೊಬೈಲ್‌ಗಳಿಗೆ ಕಳುಹಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಜಿಐಎಸ್ ಸಮೀಕ್ಷೆ:ಪಾಲಿಕೆಯ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳನ್ನು ಜಿಐಎಸ್ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹5 ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯಿಂದ ಪಾಲಿಕೆಯ ಆದಾಯ ಪ್ರತಿ ವರ್ಷ ₹100 ಕೋಟಿ ಹೆಚ್ಚಾಗುವ ನಿರೀಕ್ಷೆ ಪಾಲಿಕೆಯದ್ದು.
ಇನ್ನು ಕಳೆದ ಸಾಲಿನಲ್ಲಿ ₹100ಕೋಟಿ ಅಧಿಕ ಆಸ್ತಿಕರವನ್ನು ಸಂಗ್ರಹಿಸಲಾಗಿದೆ. ಈ ಸಲ ₹250 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ ಇಷ್ಟೊಂದು ಸಾಧ್ಯವೇ ಎಂಬುದು ಸದಸ್ಯರ ಪ್ರಶ್ನೆ. ಪಾಲಿಕೆಯಲ್ಲಿ ಅಕ್ರಮ ಕಟ್ಟಡಗಳ ಪತ್ತೆ ಹಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದ್ದು, ಇದಕ್ಕೆ ₹20 ಲಕ್ಷ ಮೀಸಲಿಡಲಾಗಿದೆ.ಹೊಸ ಯೋಜನೆ:
ಸ್ವಚ್ಛತೆಯನ್ನು ಇನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ "ಕಸ ಕೊಡಿ ಹಣ ಪಡಿ " ಎಂಬ ಹೊಸ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಾರಿಗೊಳಿಸುತ್ತಿದೆ. ಏನಿದು ಯೋಜನೆಯೆಂದರೆ ಒಣ ಕಸ, ಹಸಿ ಕಸ ಎಂದು ಬೇರ್ಪಡಿಸುವುದು ಪಾಲಿಕೆಯವರು ಮನೆ ಬಾಗಿಲಿಗೆ ಬಂದಾಗ ಅದನ್ನು ನೀಡುವುದು. ಆ ಕಸವನ್ನು ಖಾಸಗಿ ಸಂಸ್ಥೆಯವರು ಪಡೆದು ಮರುಬಳಕೆ ಮಾಡಲಿದ್ದಾರೆ. ಹೀಗೆ ಮರುಬಳಕೆಯಿಂದ ಬರುವ ಆದಾಯವನ್ನು ಜನರಿಗೆ ನೀಡುವ ಯೋಜನೆ ಇದಾಗಿದೆ. ಇದರಿಂದ ಪಾಲಿಕೆಗೂ ಆದಾಯ ಬರಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ ಆದರೂ ಅದ್ಹೇಗೆ ಎಂಬುದರ ಮಾಹಿತಿ ಇನ್ನು ಲಭ್ಯವಾಗಿಲ್ಲ. ಪಾಲಿಕೆಗೆ ₹75 ಲಕ್ಷ ಆದಾಯ ಬರಲಿದೆ ಎಂಬ ಲೆಕ್ಕಾಚಾರ ಪಾಲಿಕೆಯದ್ದು.ಹಳ್ಳಿಗಳಿಗೆ ₹7 ಕೋಟಿ
ಪಾಲಿಕೆ ವ್ಯಾಪ್ತಿಯಲ್ಲಿ 42 ಹಳ್ಳಿಗಳು ಬರುತ್ತಿವೆ. ಈ ಹಳ್ಳಿಗಳ ಅಭಿವೃದ್ಧಿಗಾಗಿ ₹7 ಕೋಟಿ ಮೀಸಲಿಡಲಾಗಿದೆ. ಈ ಅನುದಾನವನ್ನು ಹಂತ ಹಂತವಾಗಿ ಬಳಸಲಿದೆ. ಒಳಚರಂಡಿ ವ್ಯವಸ್ಥೆ ನಿರ್ಮಾಣ ಕಾಮಗಾರಿಗಾಗಿ ₹65 ಕೋಟಿ ಹಾಗೂ ಅಮೃತ- 2 ಯೋಜನೆಯಡಿ ₹20 ಕೋಟಿ, ಹಾಗೂ ಇತರೆ ಯೋಜನೆ ಹಾಗೂ ಮೂಲಗಳಿಂದ ₹544 ಕೋಟಿ ಬಂಡವಾಳ ಪಾಲಿಕೆಗೆ ಬರುವ ನಿರೀಕ್ಷೆಯಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಆದರೆ ಇದೆಲ್ಲವೂ ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಅನುದಾನ ನಿರೀಕ್ಷಿಸಲಾಗಿದೆ.ತರಕಾರಿ ಮಾರುಕಟ್ಟೆಗೆ ₹1.5 ಕೋಟಿ ನವನಗರದಲ್ಲಿರುವ ಸುಸಜ್ಜಿತ ತರಕಾರಿ ಮಾರುಕಟ್ಟೆದಂತೆ ಉಳಿದ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲು ₹1.5 ಕೋಟಿ ಮೀಸಲಿಡಲಾಗಿದೆ.
ಮೂಲಸೌಲಭ್ಯಕ್ಕೆ ₹1037 ಕೋಟಿರಾಜ್ಯದ ಎರಡನೆಯ ದೊಡ್ಡ ಪಾಲಿಕೆಯೆನಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೂಲಸೌಲಭ್ಯಕ್ಕಾಗಿಯೇ ₹1037 ಕೋಟಿ ಮೀಸಲಿಡಲಾಗಿದೆ. ಮೂಲಸೌಲಭ್ಯ ಎಂದರೆ ಚರಂಡಿ, ರಸ್ತೆ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಮೀಸಲಿಡಲಾಗಿದೆ.
ಜಿಪ್ ಲೈನ್ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆ ವರೆಗೆ ಜಿಪ್ ಲೈನ್ ಮಾಡಲು ಪಾಲಿಕೆ ನಿರ್ಧರಿಸಿದೆ. ಆದರೆ ಇದನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಜೊತೆಗೂಡಿ ಮಾಡಲು ನಿರ್ಧರಿಸಿದೆ. ಜತೆಗೆ ಉಣಕಲ್ ಕೆರೆಯಲ್ಲಿ ಸಾಹಸ ಕ್ರೀಡೆಗಳನ್ನು ನಡೆಸುವುದಕ್ಕಾಗಿ ₹5 ಕೋಟಿ ಮೀಸಲಿಡಲಾಗಿದೆ. ಪ್ರಾಕೃತಿಕ ಸಂಪನ್ಮೂಲ ಬಳಸಿ ಈ ಯೋಜನೆ ಕೈಗೆತ್ತಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.
ಸಭಾಭವನಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ನೂತನ ಸಭಾಭವನ ಮತ್ತು ಕಚೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ₹35 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಅದಿನ್ನು ಪ್ರಾರಂಭವಾಗಿಲ್ಲ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹10 ಕೋಟಿ ಮೀಸಲಿಡಲಾಗಿದೆ.
ಮಠಕ್ಕೂ ದುಡ್ಡು:ಇದೇ ಮೊದಲ ಬಾರಿಗೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಪಾಲಿಕೆ ಹಣವನ್ನು ಮೀಸಲಿಟ್ಟಿದೆ. ಸಿದ್ಧಾರೂಢ ಮಠ, ಶಿವಾನಂದ ಮಠಗಳ ಅಭಿವೃದ್ಧಿಗಾಗಿ ₹1 ಕೋಟಿ ಮೀಸಲಿಡಲಾಗಿದೆ.
ಉದ್ಯಾನವನಗಳನ್ನು ಹಸಿರು ಉಸಿರು ಎಂಬ ಘೋಷವಾಕ್ಯದೊಂದಿಗೆ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 5 ಕೋಟಿ ಕಾಯ್ದಿರಿಸಲಾಗಿದೆ. ಜತೆಗೆ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಹೊರಾಂಗಣ ಮತ್ತು ಒಳಾಂಗಣದ ವ್ಯಾಯಾಮ ಶಾಲೆ ತೆರೆಯಲು ₹2.5 ಕೋಟಿ ಮೀಸಲಿಡಲಾಗಿದೆ. ಜತೆಗೆ ಪಿಪಿಪಿ ಮಾದರಿಯಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಿ ಪಾಲಿಕೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲು ಯೋಜಿಸಿದೆ. ಕೆರೆಗಳ ಅಭಿವೃದ್ಧಿಗಾಗಿ ₹3.5 ಕೋಟಿ ಮೀಸಲಿಡಲಾಗಿದೆ. ಪೌರಕಾರ್ಮಿಕರಿಗೆ ₹45 ಲಕ್ಷ:ಪಾಲಿಕೆಯ ವ್ಯಾಪ್ತಿಯ ಚಿಟಗುಪ್ಪಿ ಆಸ್ಪತ್ರೆಗೆ ₹50 ಲಕ್ಷ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ₹9 ಕೋಟಿ ಮೀಸಲಿರಿಸಲಾಗಿದೆ. ಇನ್ನು ಎಸ್ಸಿ ಎಸ್‌ಪಿ ಘಟಕಕ್ಕೆ ₹2.27 ಕೋಟಿ ಮೀಸಲಿಡಲಾಗಿದ್ದು, ಇದರಲ್ಲಿ ಪೌರಕಾರ್ಮಿಕರಿಗಾಗಿ ₹45 ಲಕ್ಷ, ವ್ಯಕ್ತಿ ಸಂಬಂಧಿತ ಕಾರ್ಯಕ್ರಮಗಳಿಗೆ ₹72 ಲಕ್ಷ ಹಾಗೂ ಸಮುದಾಯ ಕಾಮಗಾರಿಗಳಿಗಾಗಿ ₹1.10 ಕೋಟಿ ಮೀಸಲಾಗಿದೆ.
ಶ್ರದ್ಧಾಂಜಲಿ:ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರ ಶವಸಂಸ್ಕಾರದ ಜವಾಬ್ದಾರಿ ಪಾಲಿಕೆ ಹೊತ್ತಿದೆ. ಇದಕ್ಕಾಗಿ ಶ್ರದ್ಧಾಂಜಲಿ ಎಂಬ ಯೋಜನೆಯನ್ನು ಘೋಷಿಸಿದ್ದು, ಇದಕ್ಕಾಗಿ ₹2 ಕೋಟಿ ಮೀಸಲಿರಿಸಲಾಗಿದೆ.
ವಿದ್ಯಾಶ್ರೀ, ಲ್ಯಾಪ್ಟ್ಯಾಪ್ಸೈನಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾಶ್ರೀ ಎಂಬ ಯೋಜನೆ ಮುಂದುವರಿಸಲಾಗಿದ್ದು, ಇದಕ್ಕಾಗಿ ₹25 ಲಕ್ಷ, ಕ್ರೀಡಾ ಚಟುವಟಿಕೆಗಳಿಗಾಗಿ ₹40 ಲಕ್ಷ ಹಾಗೂ ಪೌರಕಾರ್ಮಿಕರ ಹಾಗೂ ಡಿ ಗ್ರೂಪ್ ನೌಕರರ ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ವಿತರಿಸಲು ₹15 ಲಕ್ಷ ಮೀಸಲಿಡಲಾಗಿದೆ.
ಉದ್ಯಾನವ, ಸಾರ್ವಜನಿಕ ಕಟ್ಟಡ, ಮುಖ್ಯ ವೃತ್ತಗಳಲ್ಲಿ ಮಹಿಳೆಯರ ಹಿತರಕ್ಷಣೆಗಾಗಿ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಿದ್ದು, ಇದ್ಕಕಾಗಿ 1 ಕೋಟಿ ಮೀಸಲಿರಿಡಲಾಗಿದೆ ಎಂದು ಗುಂಡೂರ ತಿಳಿಸಿದ್ದಾರೆ.ಗಾತ್ರ ಹೆಚ್ಚಳ
ಮಹಾನಗರ ಪಾಲಿಕೆಯ ಬಜೆಟ್ ಗಾತ್ರ ಕಳೆದ ವರ್ಷ ₹1138.54 ಕೋಟಿ ಆಗಿತ್ತು. ಆದರೆ ಈ ವರ್ಷ ₹1573.48 ಕೋಟಿ ಆಗಿದೆ. ಅಂದರೆ ಬರೋಬ್ಬರಿ ಶೇ.38ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದೆ.