2ನೇ ಹಂತ: 109 ನಾಮಪತ್ರ ತಿರಸ್ಕೃತ

| Published : Apr 21 2024, 02:15 AM IST

ಸಾರಾಂಶ

ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, 272 ಅಭ್ಯರ್ಥಿಗಳ 394 ನಾಮಪತ್ರಗಳು ಕ್ರಮಬದ್ಧವಾಗಿವೆ. 109 ನಾಮಪತ್ರಗಳು ತಿರಸ್ಕೃತಗೊಂಡಿವೆ.

- ನಾಮಪತ್ರ ಪರಿಶೀಲನೆ ಮುಕ್ತಾಯ । ವಾಪಸಾತಿಗೆ ನಾಳೆ ಕಡೇ ದಿನಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, 272 ಅಭ್ಯರ್ಥಿಗಳ 394 ನಾಮಪತ್ರಗಳು ಕ್ರಮಬದ್ಧವಾಗಿವೆ. 109 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಒಟ್ಟು 335 ಅಭ್ಯರ್ಥಿಗಳು ಸಲ್ಲಿಸಿದ್ದ 503 ನಾಮಪತ್ರಗಳನ್ನು ಶನಿವಾರ ಪರಿಶೀಲನೆ ಮಾಡಲಾಯಿತು.

ಈ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿಗಳು ಇಡೀ ದಿನ ನಾಮಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಅಂತಿಮವಾಗಿ 503 ನಾಮಪತ್ರಗಳ ಪೈಕಿ 394 ನಾಮಪತ್ರಗಳು ಪುರಸ್ಕೃತಗೊಂಡಿವೆ. ಸದ್ಯಕ್ಕೆ 272 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಸೋಮವಾರ (ಏ.22ರಂದು) ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದು, ಸೋಮವಾರದ ಬಳಿಕ ಅಂತಿಮವಾಗಿ ಚುನಾವಣಾ ಕಣದಲ್ಲಿ ಎಷ್ಟು ಮಂದಿ ರಣಕಲಿಗಳು ಉಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ನಾಮಪತ್ರ ತಿರಸ್ಕೃತ?

ಚಿಕ್ಕೋಡಿ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿರುವ 27 ನಾಮಪತ್ರಗಳು ಕ್ರಮಬದ್ಧವಾಗಿವೆ. ಬೆಳಗಾವಿ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳು ಸಲ್ಲಿಸಿದ್ದ 30 ನಾಮಪತ್ರಗಳು ಕ್ರಮಬದ್ಧವಾಗಿವೆ. ಬಾಗಲಕೋಟೆ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು ಸಲ್ಲಿಸಿದ್ದ 35 ನಾಮಪತ್ರಗಳ ಪೈಕಿ 2, ವಿಜಯಪುರ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳು ಸಲ್ಲಿಸಿದ್ದ 35 ನಾಮಪತ್ರಗಳ ಪೈಕಿ 16, ಕಲಬುರಗಿ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಸಲ್ಲಿಸಿದ್ದ 36 ನಾಮಪತ್ರಗಳ ಪೈಕಿ 10 ತಿರಸ್ಕೃತಗೊಂಡಿವೆ.

ರಾಯಚೂರು ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸಲ್ಲಿಸಿದ್ದ 21 ನಾಮಪತ್ರಗಳ ಪೈಕಿ 3, ಬೀದರ್‌ ಕ್ಷೇತ್ರದಲ್ಲಿ 34 ಅಭ್ಯರ್ಥಿಗಳು ಸಲ್ಲಿಸಿದ್ದ 41 ನಾಮಪತ್ರಗಳ ಪೈಕಿ 14, ಕೊಪ್ಪಳ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳು ಸಲ್ಲಿಸಿದ್ದ 40 ನಾಮಪತ್ರಗಳ ಪೈಕಿ 6 ತಿರಸ್ಕೃತಗೊಂಡಿವೆ. ಬಳ್ಳಾರಿ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸಲ್ಲಿಸಿದ್ದ 19 ನಾಮಪತ್ರಗಳು ಕ್ರಮ ಬದ್ಧವಾಗಿವೆ.

ಹಾವೇರಿ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು ಸಲ್ಲಿಸಿದ್ದ 47 ನಾಮಪತ್ರಗಳ ಪೈಕಿ 19, ಧಾರವಾಡ ಕ್ಷೇತ್ರದಲ್ಲಿ 29 ಅಭ್ಯರ್ಥಿಗಳು ಸಲ್ಲಿಸಿದ್ದ 44 ನಾಮಪತ್ರಗಳ ಪೈಕಿ 9, ಉತ್ತರ ಕನ್ನಡ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಸಲ್ಲಿಸಿದ್ದ 36 ನಾಮಪತ್ರಗಳ ಪೈಕಿ 17, ದಾವಣಗೆರೆ ಕ್ಷೇತ್ರದಲ್ಲಿ 40 ಅಭ್ಯರ್ಥಿಗಳು ಸಲ್ಲಿಸಿದ್ದ 54 ನಾಮಪತ್ರಗಳ ಪೈಕಿ 12 ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳು ಸಲ್ಲಿಸಿದ್ದ 38 ನಾಮಪತ್ರಗಳ ಪೈಕಿ 1 ತಿರಸ್ಕೃತಗೊಂಡಿದೆ.