ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರುಸುತ್ತೂರು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 109ನೇ ಜಯಂತಿ ಮಹೋತ್ಸವ ಹಾಗೂ ಶಿಕ್ಷಕರ ದಿನವನ್ನು ಆಚರಿಸಲಾಯಿತು. ನಿವೃತ್ತ ಪ್ರಾಂಶುಪಾಲ ಹಾಗೂ ಸುಗಮ ಸಂಗೀತ ಕಲಾವಿದ ಪ್ರೊ.ಎಸ್. ಮಲ್ಲಣ್ಣ ಮಾತನಾಡಿ, ರಾಜೇಂದ್ರ ಶ್ರೀಗಳವರು ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಚೆಲ್ಲಿದವರು. ಸಮಾಜದ ದೀನ, ದುರ್ಬಲರ ಬಾಳಿಗೆ ಆಸರೆಯಾದವರು. ದಾಸೋಹ ಸಂಸ್ಕೃತಿಯನ್ನು ಸಮಾಜಕ್ಕೆ ಪರಿಚಯಿಸಿ ಜ್ಞಾನ, ದಾಸೋಹವನ್ನು ಉಣಬಡಿಸಿದವರು. ಮನುಷ್ಯನಿಗೆ ಅರಿವು ಮತ್ತು ಆಚಾರ ಎರಡೂ ಸಹ ಮುಖ್ಯ ಎಂದು ತಿಳಿದು ಒಬ್ಬ ವ್ಯಕ್ತಿ ಸುಧಾರಿತ ಸುಸಂಸ್ಕೃತ ವ್ಯಕ್ತಿಯಾಗಿ ಬದುಕಲು ಬೇಕಾದ ಎಲ್ಲ ನೆರವನ್ನು ಸಮಾಜಕ್ಕೆ ನೀಡಿದವರು ಎಂದರು.ಮುಖ್ಯಅತಿಥಿಯಾಗಿದ್ದ ಬೆಂಗಳೂರಿನ ಡಿ.ಎಸ್.ಇ.ಆರ್.ಟಿ ಉಪ ನಿರ್ದೇಶಕ ಎಸ್. ಸ್ವಾಮಿ ಮಾತನಾಡಿ, ಹಸಿದವರಿಗೆ ಅನ್ನ, ಬಾಯಾರಿಕೆಗೆ ನೀರು, ಜೀವನಕ್ಕೆ ಜ್ಞಾನ ನೀಡಿದ ಕಾಯಕ ಯೋಗಿಗಳು ಶ್ರೀ ರಾಜೇಂದ್ರ ಸ್ವಾಮೀಜಿ ಅವರ ತಪ-ಫಲವಾಗಿ ಸುತ್ತೂರು ಇಂದು ಒಂದು ಧಾರ್ಮಿಕ ಶ್ರದ್ಧಾ ಶಕ್ತಿ ಕೇಂದ್ರವಾಗಿ ಬೆಳೆದಿದೆ ಎಂದು ತಿಳಿಸಿದರು.ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿ, ಶ್ರೇಷ್ಠ ತತ್ವಜ್ಞಾನಿ, ಶಿಕ್ಷಣ ತಜ್ಞರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ತಾತ್ವಿಕ ಜ್ಞಾನವನ್ನು ಪ್ರಪಂಚಕ್ಕೆ ಪರಿಚಯಿಸಿದರು. ಜ್ಞಾನದಿಂದ ಮಾತ್ರ ಶಕ್ತಿಯುತವಾಗಿ ನಿಲ್ಲಲು ಸಾಧ್ಯ ಎಂದು ಹೇಳಿದರು.ಪ್ರಾತಃಕಾಲ ಶ್ರೀಗದ್ದುಗೆಯಲ್ಲಿ ಪೂಜೆ ಕಾರ್ಯ ನೆರವೇರಿಸಿ ರೋಬೋಟಿಕ್ ಆನೆಯಲ್ಲಿ ರಾಜೇಂದ್ರಶ್ರೀಗಳ ಮೂರ್ತಿಯನ್ನು ಇರಿಸಿ ಶಾಲಾ ಆವರಣದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನೆರವೇರಿತು. ಆಡಳಿತಾಧಿಕಾರಿಗಳು, ಸಂಯೋಜನಾಧಿಕಾರಿಗಳು ಹಾಗೂ ಎಲ್ಲ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಶ್ರದ್ದಾಭಕ್ತಿ, ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಸ್ಥೆಯ ವತಿಯಿಂದ ಮುಖ್ಯಸ್ಥರಿಗೆ ಹಾಗೂ ಶಿಕ್ಷಕರಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಉತ್ತಮ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ದತ್ತಿಗಳ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ಸಂಸ್ಥೆಗಳ ಮುಖ್ಯಸ್ಥರಾದ ಜಿ.ಎಲ್. ತ್ರಿಪುರಾಂತಕ, ಸಂಪತ್ತು, ವೀರಭದ್ರಯ್ಯ, ಡಾ. ಜ್ಞಾನೇಶ್, ಡಾ. ಎಚ್.ಎಂ. ಮಹೇಶ್, ಎಸ್. ಶಿವಸ್ವಾಮಿ, ಜಿ. ಶಿವಮಲ್ಲು, ಜಿ.ಎಂ. ಷಡಕ್ಷರಿ, ಜಿ. ಶಿವಸ್ವಾಮಿ, ಮಹದೇವಪ್ರಸಾದ್, ಸುಶೀಲಾ ಇದ್ದರು.ಉಪನ್ಯಾಸಕ ಎಂ. ರಾಜಶೇಖರ ಪ್ರತಿಜ್ಞಾವಿಧಿ ಬೋಧಿಸಿದರು. ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿದರು, ಡಿ.ಎಸ್. ವೀಣಾ ಸ್ವಾಗತಿಸಿದರು. ಎಂ.ಬಿ. ಶ್ರೀಧರ್ ವಂದಿಸಿದರು. ಜಿ. ಎನ್. ಮಂಜುನಾಥ್ ನಿರೂಪಿಸಿದರು.