ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲಿಂಗಾಯತರು ಇಡೀ ಜಗತ್ತನ್ನು ಆಳುವ ಶಕ್ತಿ ಹೊಂದಿದ್ದಾರೆ. ಆದರೆ, ಅವರಲ್ಲಿ ಒಗ್ಗಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಶನಿವಾರ ನಗರದ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಮಾಜಿ ರಾಷ್ಟ್ರಪತಿ ‘ಡಾ। ಬಿ.ಡಿ.ಜತ್ತಿ ಅವರ 112ನೇ ಜನ್ಮದಿನಾಚರಣೆ’ ಮತ್ತು ‘ಬಸವ ಸಮಿತಿ ವಜ್ರಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಳ ಪಂಗಡಗಳ ವೈಮನಸ್ಸು ಮತ್ತು ರಾಜಕಾರಣ ದೂರವಿಟ್ಟು ಸಮಾಜದ ಹಿತ ಬಯಸಿದರೆ ಬಸವಾದಿ ಶರಣರು, ಅನುಭವ ಮಂಟಪದ ಕೀರ್ತಿ ಹರಡುತ್ತದೆ. ಅಲ್ಲಮಪ್ರಭು, ಬಸವಣ್ಣನವರು ಜಗತ್ತಿಗೆ ಜಾತ್ಯತೀತ, ಶೋಷಣೆ ರಹಿತ ಹಾಗೂ ಕಾಯಕ ದಾಸೋಹದ ಕ್ರಾಂತಿಕಾರಿ ತತ್ವ ಆದರ್ಶ ಸಾರಿದ್ದಾರೆ ಎಂದರು.
ಇಂತಹ ಮಹಾನ್ ವ್ಯಕ್ತಿಗಳು ರಾಜ್ಯಕ್ಕೆ ದೊಡ್ಡ ಗೌರವ. ಬಿ.ಡಿ.ಜತ್ತಿ ಅವರು, ಬಸವಾದಿ ಶರಣರ ಬದುಕು ಬೋಧನೆಗಳನ್ನು ಸಮಾಜದ ಮುಂದಿಟ್ಟಿದ್ದಾರೆ. ಶರಣರ ಬದುಕಿನ ಮಾರ್ಗವೇ ಜತ್ತಿ ಅವರ ಜೀವನ ಮಾರ್ಗವಾಗಿತ್ತು. ಬಸವಣ್ಣನವರ ತತ್ವ, ಆದರ್ಶಗಳನ್ನು ದೇಶಕ್ಕೆ ಹಾಗೂ ಜಗತ್ತಿಗೆ ಪ್ರಚಾರವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಆರಂಭಿಸಬೇಕು. ಬಸವಣ್ಣನವರು ಸಾರಿದ ಅಚಾರ, ವಿಚಾರ, ಸಂಸ್ಕಾರಗಳು ಮಕ್ಕಳಿಗೆ ಕಲಿಸಬೇಕು ಎಂದರು.ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಬಿ.ಡಿ.ಜತ್ತಿ ಅವರ ವ್ಯಕ್ತಿತ್ವ ಎಲ್ಲರೂ ಗುರುತಿಸುವಂತದ್ದು. ಸಮಾಜಕ್ಕೆ ಅವರು ನೀಡಿದ ಕೊಡುಗೆ ಹಾಗೂ ಸಾಧನೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ. ಸಣ್ಣ ಹುದ್ದೆಯಿಂದ ಹಿಡಿದು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. 1964 ರಲ್ಲಿ ಬಸವ ಸಮಿತಿ ಸ್ಥಾಪಿಸುವ ಮೂಲಕ ಬಸವ ತತ್ವಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಬೇಲಿಮಠ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷ ಡಾ। ಅರವಿಂದ ಜತ್ತಿ, ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರುಬಸವ ಸಮಿತಿ ವತಿಯಿಂದ ಧರ್ಮಪ್ರಕಾಶ ಮುರಿಗಪ್ಪ ಚಿಗಟೇರಿ ಮನೆತನ - ದಾಸೋಹ ರತ್ನ ಪುರಸ್ಕಾರ, ಡಾ। ಸಿ.ಎಂ.ಕುಂದಗೋಳ - ಬಸವ ವಿಭೂಷಣ ಪುರಸ್ಕಾರ, ಹರೀಶ್ ಆರ್. ಹಿರೇಮಠ, ಶಂಕರ್ ಬಿ. ಗುಡಸ್ ಕುಟುಂಬ ಮತ್ತು ವಚನ ಕುಮಾರಸ್ವಾಮಿ ದಂಪತಿ - ಬಸವ ಭೂಷಣ ಪ್ರಶಸ್ತಿ, ಡಾ। ಜಿ.ವಿ.ಜಯರಾಜಶೇಖರ್ ಮತ್ತು ವೀರೇಂದ್ರ ಮಂಗಳಗೆ - ಬಸವಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.