ಕನ್ನಡಪ್ರಭ ವಾರ್ತೆ ಬೆಂಗಳೂರು

ಮೊಬೈಲ್ ಕಳ್ಳತನ ಕೃತ್ಯಗಳು ನಡೆದ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಳ ಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕಿಳಿದಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಸುಪ್ರಿಯಾ ಫಡ್ಕೆ, ಇವರ ಸ್ನೇಹಿತ ನಿತಿನ್‌, ಮೋಹನ್‌ ಗೌಡ, ಯಾದಗಿರಿಯ ಮಂಜುನಾಥ, ಪೀಣ್ಯದ ಪುನೀತ್‌, ಲಿಖಿತ್‌, ನೆಲಮಂಗಲದ ಹರ್ಷಾ ರವಿ, ವಿನಯ್‌ಗೌಡ, ಜಗದೀಶ್‌, ಸತ್ಯನಾರಾಯಣ, ದಿನೇಶ್‌ರಾವ್‌ ಬಂಧಿತರು.

ಕಳೆದ ಭಾನುವಾರ ನಡೆದ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳ ಪಂದ್ಯದ ವೇಳೆ ಅಕ್ರಮವಾಗಿ ದುಬಾರಿ ಬಲೆಗೆ ಟಿಕೆಟ್ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 28 ಟಿಕೆಟ್‌ಗಳು ಹಾಗೂ 8 ಮೊಬೈಲ್ ಸೇರಿದಂತೆ ₹4.53 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಪಂದ್ಯದ ವೇಳೆ 75 ಮೊಬೈಲ್‌ಗಳನ್ನು ಕಳವು ಮಾಡಿದ್ದ ಜಾರ್ಖಂಡ್ ತಂಡವನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಈಗ ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟಗಾರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.


ಟಿಕೆಟ್ ಮಾರಾಟ ಹೇಗೆ:

ಆನ್‌ಲೈನ್‌ನಲ್ಲಿ 4 ಟಿಕೆಟ್‌ಗಳನ್ನು ಒಬ್ಬರು ಖರೀದಿಸಬಹುದು. ಹೀಗೆ ಕೊಂಡ ಟಿಕೆಟ್‌ಗಳನ್ನು ಬೇರೆಯವರಿಗೆ ವರ್ಗಾಯಿಸಲು ಒಂದು ಬಾರಿಗೆ ಅವಕಾಶವಿದೆ. ಲಿಂಕ್ ಶೇರ್ ಮಾಡಿ ಓಟಿಪಿ ಹಾಕಿದರೆ ಬೇರೆಯವರ ಹೆಸರಿನಲ್ಲಿ ಖರೀದಿಸಿದ್ದ ಟಿಕೆಟ್ ಅನ್ನು ಪಡೆಯಬಹುದು. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಆರೋಪಿಗಳು ಹಣ ಸಂಪಾದನೆಗೆ ಯತ್ನಿಸಿದ್ದರು.

ತಮ್ಮ ಹೆಸರಿನಲ್ಲಿ 4 ಟಿಕೆಟ್‌ಗಳನ್ನು ಖರೀದಿಸಿದ್ದರು. ಪಂದ್ಯ ವೀಕ್ಷಣೆಗೆ ಕ್ರೀಡಾಂಗಣ ಬಳಿ ಬಂದು ಟಿಕೆಟ್ ಸಿಗದೆ ನಿಂತಿದ್ದವರ ಬಳಿ ತೆರಳಿ ಆರೋಪಿಗಳು ಟಿಕೆಟ್ ಮಾರಾಟ ಮಾಡುತ್ತಿದ್ದರು. ತಲಾ ಟಿಕೆಟ್ ₹10 ರಿಂದ 20 ಸಾವಿರಕ್ಕೆ ಮಾರುತ್ತಿದ್ದರು. ಈ ಆರೋಪಿಗಳ ಪೈಕಿ ಬಹುತೇಕರು ಖಾಸಗಿ ಕಂಪನಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಸುಲಭವಾಗಿ ಹಣ ಸಂಪಾದನೆಗೆ ಈ ದಂಧೆಗಿಳಿದು ಈಗ ಜೈಲು ಸೇರುವಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.