ಸಾರಾಂಶ
ಮಂಡ್ಯ : ಆದಾಯ ತೆರಿಗೆ ಇಲಾಖೆ ಟಿಡಿಎಸ್ ಅಡಿ ಅಸಲು, ಬಡ್ಡಿ, ದಂಡ ಸೇರಿ ಮೈಸೂರು ಸಕ್ಕರೆ ಕಾರ್ಖಾನೆಗೆ ೧೧೧.೫೦ ಕೋಟಿ ರು. ಹಣ ಪಾವತಿ ಆದೇಶದ ನೋಟಿಸ್‌ನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದರಿಂದ ಕಾರ್ಖಾನೆಗೆ ಆರ್ಥಿಕ ಹೊರೆ ತಪ್ಪಿರುವುದಾಗಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
೧೯೯೫-೯೬ರಿಂದ ೨೦೦೦-೦೧ರವರೆಗೆ ಒಟ್ಟು ೪೦.೬೨ ಕೋಟಿ ರು. ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಡಿಮ್ಯಾಂಡ್ ನೋಟಿಸ್ ನೀಡಿತ್ತು. ಅಲ್ಲದೇ, ೩೧ ಆಗಸ್ಟ್ ೨೦೨೩ರಂದು ಕಾರಣ ಕೇಳಿ ನೋಟಿಸ್ ನೀಡಿ ಅದರಲ್ಲಿ ಅಸಲು, ಬಡ್ಡಿ, ದಂಡ ಸೇರಿ ೧೧೧.೫೦ ಕೋಟಿ ರು. ಪಾವತಿಸುವಂತೆ ಸೂಚಿಸಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸಿದ ಪರಿಣಾಮ ಕಂಪನಿ ಹಣ ಪಾವತಿಸುವ ಬಗ್ಗೆ ಆದಾಯ ತೆರಿಗೆ ನೀಡಿದ್ದ ಆದೇಶದ ನೋಟಿಸ್, ಪತ್ರಗಳನ್ನು ವಜಾಗೊಳಿಸಿ ಆದೇಶ ನೀಡಿರುವುದಾಗಿ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿರುವ ಮೈಸೂರು ಸಕ್ಕರೆ ಕಂಪನಿ ಕಚೇರಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದು, ೨೦೦೩-೨೦೨೩-೨೪ನೇ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಬೇಕಾದ ಒಟ್ಟು ಮೊತ್ತ ೫.೮೨ ಕೋಟಿ ರು.ಗಳಾಗಿತ್ತು. ಕಂಪನಿ ಒಟಿಎಸ್ ಯೋಜನೆಯಡಿ ೨.೦೧ ಕೋಟಿ ರು.ಆಸ್ತಿ ತೆರಿಗೆಯನ್ನು ಜುಲೈ ೩೦ರೊಳಗೆ ಪಾವತಿಸಿರುವುದರಿಂದ ಕಾರ್ಖಾನೆಗೆ ೩.೮೧ ಕೋಟಿ ರು. ಉಳಿತಾಯವಾಗಿರುವುದಾಗಿ ತಿಳಿಸಿದರು.
ಹದಿನಾರು ವರ್ಷಗಳ ಹಿಂದೆ ಕೆಎಸ್‌ಐಐಡಿಸಿಯಿಂದ ೩.೭೪ ಕೋಟಿ ರು. ಸಾಲ ಪಡೆದುಕೊಂಡಿದ್ದು, ಅಸಲು, ಬಡ್ಡಿ, ದಂಡ ಸೇರಿ ಈಗ ೬೪.೫ ಕೋಟಿ ರು.ಗಳಾಗಿದೆ. ಆ ಸಂಸ್ಥೆಯೊಂದಿಗೂ ಒಟಿಎಸ್ ಕುರಿತು ಮಾತುಕತೆ ನಡೆಸಲಾಗಿದೆ. ಸಂಸ್ಥೆಯವರು ೮ ರಿಂದ ೯ ಕೋಟಿ ರು. ಪಾವತಿಗೆ ಬೇಡಿಕೆ ಇಟ್ಟಿದ್ದಾರೆ. ಆ ಹಣ ಪಾವತಿ ಕಷ್ಟವಾಗಿರುವುದರಿಂದ ಅದರಲ್ಲಿ ಇನ್ನೂ ಕಡಿಮೆ ಮಾಡುವಂತೆ ಪ್ರಯತ್ನ ಮುಂದುವರೆಸಿದ್ದೇವೆ. ಒಮ್ಮತಕ್ಕೆ ಬಂದಲ್ಲಿ ಅದರಿಂದಲೂ ಕಾರ್ಖಾನೆಗೆ ಉಳಿತಾಯವಾಗಲಿದೆ ಎಂದರು.
ಮೈಷುಗರ್ ವಿದ್ಯುಚ್ಛಕ್ತಿ ಬಿಲ್ ೫೨ ಕೋಟಿ ರು.ಗಳಿದ್ದು, ಅದನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿದೆ. ಬಿಲ್ ಮನ್ನಾ ಮಾಡುವ ಕುರಿತಂತೆ ಭರವಸೆಯೂ ಸಿಕ್ಕಿದೆ. ಇದರಿಂದ ಕಾರ್ಖಾನೆ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಕಡಿಮೆಯಾಗಲಿದೆ.
೨೦೨೩-೨೪ನೇ ಸಾಲಿನಲ್ಲಿ ಕಬ್ಬು ಅರೆಯುವಿಕೆ, ರೈತರ ಬಾಕಿ ಪಾವತಿ ಎಲ್ಲ ಕಳೆದು ೧೪ ಕೊಟಿ ರು. ಉಳಿದಿದೆ. ಸಕ್ಕರೆ ಮಾರಾಟದಿಂದ ೮ ಕೋಟಿ ರು., ಕಾಕಂಬಿ ಮಾರಾಟದಿಂದ ೩.೫ ಕೋಟಿ ರು. ಮತ್ತು ಆದಾಯ ತೆರಿಗೆ ಇಲಾಖೆಗೆ ೨ ಕೋಟಿ ರು.ಗಳನ್ನು ಪಾವತಿಸಲಾಗಿದೆ. ಇದರಿಂದ ಒಟ್ಟು ೨೭.೫ ಕೋಟಿ ರು. ಪ್ರಗತಿ ಸಾಧಿಸಿರುವುದಾಗಿ ತಿಳಿಸಿದರು.
೨೨ ಆಗಸ್ಟ್ ೨೦೨೪ರ ಅಂತ್ಯಕ್ಕೆ ೧೧೦೧೯ ಕ್ವಿಂಟಲ್ ಸಕ್ಕರೆಯನ್ನು ಹಾಗೂ ೧೦೬೦ ಮೆ.ಟನ್ ಕಾಕಂಬಿಯನ್ನು ಉತ್ಪಾದಿಸಲಾಗಿದೆ. ಸಹ ವಿದ್ಯುತ್ ಘಟಕದಿಂದ ೨೨,೨೭,೦೦೦ ಯೂನಿಟ್ ವಿದ್ಯುತ್ ಉತ್ಪಾದಿಸಿ ೧೨,೨೭,೪೦೦ ಯೂನಿಟ್‌ನ್ನು ಕಾರ್ಖಾನೆಗೆ ಬಳಕೆ ಮಾಡಿ ೯,೯೯,೬೦೦ ಯೂನಿಟ್ ವಿದ್ಯುತ್‌ನ್ನು ಚೆಸ್ಕಾಂಗೆ ರಫ್ತು ಮಾಡಲಾಗಿದೆ. ಕಳೆದ ಐದು ತಿಂಗಳಲ್ಲಿ ಕಾರ್ಖಾನೆಯನ್ನು ಸುಸ್ಥಿತಿಯಲ್ಲಿಡಲು ಹಲವಾರು ಕ್ರಮ ಕೈಗೊಂಡಿರುವುದಾಗಿ ವಿವರಿಸಿದರು.
೨೦೨೪-೨೫ನೇ ಸಾಲಿನಲ್ಲಿ ಕಾರ್ಖಾನೆ ಯಶಸ್ವಿಯಾಗಿ ಕಬ್ಬು ನುರಿಸುತ್ತಿದೆ. ಕಬ್ಬು ಕಟಾವು ಮಾಡುವ ಎಲ್ಲಾ ತಂಡಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿದೆ. ಕೆಲವು ತಂಡಗಳು ಮುಂಗಡ ಹಣವನ್ನು ಪಡೆದು ಕಬ್ಬು ಕಟಾವು ಮಾಡಲು ಬಂದಿರುವುದಿಲ್ಲ. ಆದರೆ, ಕಾರ್ಖಾನೆಯಿಂದ ನೀಡಿರುವ ಮುಂಗಡ ಹಣಕ್ಕೆ ಭದ್ರತೆ ಪಡೆಯಲಾಗಿರುತ್ತದೆ. ಅವರಿಂದ ಹಣ ವಸೂಲಿ ಮಾಡಲು ದಾವೆ ಹೂಡಲಾಗಿರುತ್ತದೆ ಎಂದರು.
ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯನ್ನು ಮಾರಾಟ ಮಾಡುವ ಹುನ್ನಾರವನ್ನು ತಪ್ಪಿಸಿ ದಕ್ಷತೆಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಕಬ್ಬು ಕಟಾವು ಮಾಡಲು ವಿಳಂಬವಾಗಿರುವುದು ಸತ್ಯ. ಕೆಲವು ಕಿಡಿಗೇಡಿಗಳು ಖಾಸಗಿ ಸಕ್ಕರೆ ಕಾರ್ಖಾನೆಯವರೊಂದಿಗೆ ಶಾಮೀಲಾಗಿ ಮೈಷುಗರ್ ಬಗ್ಗೆ ತಪ್ಪು ಮಾಹಿತಿ ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮೋಹನ್, ಮಂಜುನಾಥ್, ಯೋಗೇಶ್, ನಾಗರಾಜು ,ದ್ಯಾವಣ್ಣ, ಅಪ್ಪಾಜಿಗೌಡ ಉಪಸ್ಥಿತರಿದ್ದರು.