ಲಕ್ಷಾಂತರ ರು.ಗಳ ಹಣ ದುರುಪಯೋಗ : ಆರೋಪ

| Published : Aug 25 2024, 02:01 AM IST

ಸಾರಾಂಶ

Misappropriation of lakhs of rupees: Accused

-ರಾಜನಕೋಳುರು ಗ್ರಾ.ಪಂ ಅಧ್ಯಕ್ಷೆ-ಉಪಾಧ್ಯಕ್ಷರು, ಸದಸ್ಯರಿಂದ ಸುದ್ದಿಗೋಷ್ಠಿ

-----

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ರಾಜನಕೋಳೂರು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋತಿಬಾಯಿ ಲಕ್ಷ್ಮಣ ರಾಠೋಡ, ಉಪಾಧ್ಯಕ್ಷ ಪ್ರಭುಗೌಡ ಮಾಲಿ ಪಾಟೀಲ್ ಹಾಗೂ ಸದಸ್ಯರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಕುರಿತು ಹುಣಸಗಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜನ ಕೋಳೂರು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ಮಂಜೂರಾಗಿರುವ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ.

ಈ ದುರುಪಯೋಗದಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗಿಯಾಗಿದ್ದಾರೆ. ತಮ್ಮ ಗಮನಕ್ಕೂ ತರದೆ ವಿವಿಧ ಕಾಮಗಾರಿ ನಿರ್ವಹಿಸದೆ, ಒಂದೇ ಏಜೆನ್ಸಿಗೆ ಮೂರು ಬಾರಿ 3 ಲಕ್ಷ ರು.ಗಳವರೆಗೆ ಹಣ ಪಾವತಿ ಮಾಡಿದ್ದಾರೆ ಎಂದು ದಾಖಲೆಗಳೊಂದಿಗೆ ಆರೋಪಿಸಿದರು.

ಗ್ರಾಮ ಪಂಚಾಯಿತಿಯ ರಾಜನಕೋಳೂರು ಗ್ರಾಮದ ಸಿ.ಆರ್.ಸಿ. ಕಟ್ಟಡ ದುರಸ್ತಿ ಹಾಗೂ ರಾಜನ ಕೋಳೂರು ತಾಂಡಾದಲ್ಲಿ ಅಂಗನವಾಡಿ ಕಟ್ಟಡ ದುರಸ್ತಿ ಹಾಗೂ ಪೇಂಟಿಂಗ್ ಹೆಸರಿನಲ್ಲಿ ಒಂದೇ ಬಾರಿಗೆ, ಮೂರು ಬಾರಿ ಒಂದೇ ಏಜೆನ್ಸಿಗೆ ಹಣ ಸಂದಾಯ ಮಾಡಿದ್ದಾರೆ.

ಇದಕ್ಕೆ ನನ್ನ ಡೊಂಗಲ್ 15 ದಿನಗಳ ವರೆಗೆ ತಮ್ಮಲ್ಲಿಯೇ ಇರಿಸಿಕೊಂಡು, ಚುನಾಯಿತ ಜನಪ್ರತಿನಿಧಿಯಾಗಿರುವ ನನ್ನ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆಯ ಕುರಿತು ನನ್ನ ಮೊಬೈಲ್ ಗೆ ಯಾವುದೇ ಮೆಸೇಜ್ ಕೂಡ ಬರದಂತೆ ತಂತ್ರಗಾರಿಕೆ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ಮಾತನಾಡಿ, ಹಲವಾರು ಚೆಕ್‌ಗಳಿಗೆ ಹಣ ಮಾತ್ರ ನಮೂದಿಸಿ ಯಾವುದೇ ಏಜೆನ್ಸಿಗಳ ಹೆಸರು ಬರೆಯದೆ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರ ಸಹಿಗಾಗಿ ನೀಡಿದ್ದನ್ನು ಸುದ್ದಿಗೋಷ್ಠಿಯಲ್ಲಿ (ಚೆಕ್)ಪ್ರದರ್ಶಿಸಿದರು. ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೆ ನೈರ್ಮಲ್ಯ ಕಾಪಾಡದೆ ಎಲ್ಲದಕ್ಕೂ ಉಡಾಫೆಯಿಂದ ಉತ್ತರಿಸುವುದು, ದೂರವಾಣಿಗೆ ಪ್ರತಿಕ್ರಿಯಿಸದೆ ಇರುವ ವರ್ತನೆ ಅಸಹನೀಯ ಉಂಟಾಗಿದೆ ಎಂದು ಲೋಕಾನಾಯಕ ಪವಾರ ತಿಳಿಸಿದರು.

ಈ ಕುರಿತು ಕಳೆದ ಆ. 13ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಜಿಲ್ಲೆಯಿಂದಲೂ ಕೂಡ ಸಮರ್ಪಕ ನಡೆ ಕಂಡು ಬಂದಿಲ್ಲ. ಇದು ತಮಗೆ ದಿಗ್ಭ್ರಮೆ ಮೂಡಿಸಿದೆ. ಅಂದರೆ ತಾಲೂಕಿನಿಂದ ಜಿಲ್ಲೆಯವರೆಗೆ ಎಲ್ಲ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿ ಮಾಡಿರುವುದಿಲ್ಲ. ಕೂಲಿ ಕಾರ್ಮಿಕರು ಕೆಲಸಕ್ಕೆ ಬಾರದಿದ್ದರೂ ಅವರಿಗೆ ಹಣ ಪಾವತಿಸಿದ್ದಾರೆ ಎಂದು ಸದಸ್ಯ ಶಿವಲಿಂಗಪ್ಪ ದೊಡ್ಡಮನಿ ಹೇಳಿದರು.

18 ರಿಂದ 20 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹುಣಸಗಿ ತಾಲೂಕು ಪಂಚಾಯಿತಿ ಹಾಗೂ ಯಾದಗಿರಿ ಜಿಲ್ಲಾ ಪಂಚಾಯಿತಿ ಎದುರು ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಸದಸ್ಯರಾದ ಅಮರೇಗೌಡ ಪೊಲೀಸ್ ಪಾಟೀಲ್, ಲೋಕುನಾಯಕ ಪವಾರ, ಬಸವರಾಜ ಎಚ್ಚರಿಸಿದ್ದಾರೆ.

-----

24ವೈಡಿಆರ್11: ಹುಣಸಗಿ ತಾಲೂಕಿನ ರಾಜನಕೋಳುರು ಗ್ರಾಮ ಪಂಚಾಯಿತಿಯಲ್ಲಿ ಅನುದಾನ ದುರುಪಯೋಗ ಪಡಿಸಿಕೊಂಡಿರುವದ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷರು ಹಾಗೂ ಸದಸ್ಯರು ಹುಣಸಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.