ಸಾರಾಂಶ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಟಂಟಂ, ಆಟೋಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರ ಸಂಚಾರ, ದೋಷ ಪೂರಿತ ನಂಬರ್ ಪ್ಲೇಟ್ ಅಳವಡಿಕೆ, ನಂಬರ್ ಪ್ಲೇಟ್ ಗಳಲ್ಲಿ ಅಂಕಿ ಮರೆಮಾಚಿ ಸಂಚರಿಸುತ್ತಿದ್ದವರಿಗೆ ಶನಿವಾರ ಗದಗ ಪೊಲೀಸರು ಬಿಸಿ ಮುಟ್ಟಿಸಿದ್ದು, ನೂರಾರು ವಾಹನಗಳನ್ನು ತಪಾಸಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬೆಟಗೇರಿಯ ಹಾಕಿ ಗ್ರೌಂಡ್, ರೋಟರಿ ಸರ್ಕಲ್, ಹಳೆ ಜಿಲ್ಲಾಧಿಕಾರಿ ಕಚೇರಿ ಸರ್ಕಲ್, ಗ್ರೇನ್ ಮಾರುಕಟ್ಟೆ, ಪಾಲಾ-ಬದಾಮಿ ರಸ್ತೆ, ಮುಳಗುಂದ ನಾಕಾ ಸೇರಿದಂತೆ ನಗರದ ವಿವಿಧೆಡೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಗರ ಸಂಚಾರಿ ಠಾಣೆ ಪೊಲೀಸರು ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿ 40 ದ್ವಿಚಕ್ರ ವಾಹನ ಹಾಗೂ 20 ಕ್ಕೂ ಹೆಚ್ಚು ಟಂಟಂ, ಆಟೋ ಜಪ್ತ ಮಾಡಿದ್ದಾರೆ.ಗದಗ-ಬೆಟಗೇರಿ ಅವಳಿ ನಗರಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಿ ರಸ್ತೆ ಸಂಚಾರಿ ನಿಯಮ ಉಲ್ಲಂಘಿಸುವವರ ಮನೆಗೆ ನೊಟೀಸ್ ರವಾನೆಯಾಗುತ್ತಿದ್ದು. ಇದರಿಂದ ತಪ್ಪಿಸಿಕೊಳ್ಳಲು ಅವಳಿ ನಗರದ ಹಾಗೂ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ದ್ವಿಚಕ್ರ ವಾಹನ, ಟಂಟಂ ಮತ್ತು ಆಟೋಗಳಲ್ಲಿ ಉದ್ದೇಶ ಪೂರ್ವಕವಾಗಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿ, ನಂಬರ್ ಪ್ಲೇಟ್ ಮರೆಮಾಚಿ ಚಾಲನೆ, ಅತಿ ವೇಗದ ಚಾಲನೆ ಮಾಡುತ್ತಿರುವರ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶೇಷ ಡ್ರೈವ್ ಮಾದರಿಯಲ್ಲಿ ಕಾರ್ಯಾಚರಣೆ ನಡೆಯಿತು.
ಡಿಎಲ್, ಇನ್ಸೂರೆನ್ಸ್, ಪರ್ಮಿಟ್ ಇಲ್ಲದ ಹಾಗೂ ನಾನ್ ರೆಜಿಸ್ಟ್ರೇಶನ್ ಆಟೋಗಳನ್ನು ಸೀಜ್ ಮಾಡಲಾಗಿದೆ. ಆಟೋ ಚಾಲಕರು, ಮಾಲೀಕರು ವಾಹನಗಳನ್ನು ಸಾರಿಗೆ ಇಲಾಖೆ ನಿಯಮದಡಿ ಎಲ್ಲ ದಾಖಲಾತಿ ಹೊಂದಿರಬೇಕು. ಚಾಲನಾ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವ ಬಗ್ಗೆಯೂ ಪೊಲೀಸರು ತಿಳವಳಿಕೆ ನೀಡಿದರು.ಎಚ್ಚರಿಕೆ: ಅವಳಿ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಥರ್ಡ್-ಐ ಮೂಲಕ ನಗರದ ಪ್ರಮುಖ ರಸ್ತೆ, ಪ್ರದೇಶಗಳು ಹಾಗೂ ನಗರಕ್ಕೆ ಪ್ರವೇಶಿಸುವ ಮಾರ್ಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಹೆಲ್ಮೆಟ್, ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು, ಸೀಟ್ ಬೆಲ್ಟ್ ಧರಿಸದಿರುವ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿದೆ. ನಿಯಮ ಮೀರಿದ ವಾಹನ ಸವಾರರಿಗೆ ನೇರವಾಗಿ ರೆಜಿಸ್ಟ್ರೇಶನ್ ವಾಹನ ನಂಬರ್‌ನ ದಾಖಲಾತಿಯಲ್ಲಿರುವ ವಿಳಾಸಕ್ಕೆ ದಂಡದ ನೊಟೀಸ್ ರವಾನೆಯಾಗುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ವಿವಿಧ ಲೋಪ ದೋಷಗಳನ್ನು ಸಾರ್ವಜನಿಕರಿಗೆ ತಿಳಿಸಿ, ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದರು.
ನಿಗದಿಕ್ಕಿಂತ ಹೆಚ್ಚಿನ ಪ್ರಯಾಣಿಕರು: ಅವಳಿ ನಗರದಲ್ಲಿ ಡಿಎಲ್, ಇನ್ಸೂರೆನ್ಸ್, ಪರ್ಮಿಟ್ ಇಲ್ಲದ ಹಾಗೂ ನಾನ್ ರೆಜಿಸ್ಟ್ರೇಶನ್ ಆಟೋ ಸಂಚರಿಸುತ್ತಿದ್ದು. ಮುಖ್ಯವಾಗಿ 18 ವಯಸ್ಸು ತುಂಬದ ಬಾಲಕರು ಕೂಡಾ ಡಿಎಲ್ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದಾರೆ. ಅಲ್ಲದೇ, ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಘಟನೆಗಳು ನಡೆಯುತ್ತಿದೆ. ಆದ್ದರಿಂದ ಆಟೋ-ಟಂಟಂ ಚಾಲಕರಿಗೆ, ಮಾಲೀಕರು ವಾಹನಗಳ ದಾಖಲಾತಿ ಸರಿಪಡಿಸಿಕೊಳ್ಳಬೇಕು ಹಾಗೂ ನಿಗದಿಗೆ ತಕ್ಕಂತೆ ಮೂರು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು ಇಲ್ಲವಾದಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸೂಚಿಸಿದ್ದಲ್ಲದೇ ಹಲವಾರು ವಾಹನಗಳನ್ನು ಸೀಜ್ ಮಾಡಿದರು.ಅವಳಿ ನಗರದ ವಿವಿಧೆಡೆ ನಮ್ಮ ಸಿಬ್ಬಂದಿ ಇಂದು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಕೆ ಸೇರಿದಂತೆ ಡಿಎಲ್, ಇನ್ಸೂರೆನ್ಸ್, ಪರ್ಮಿಟ್ ಇಲ್ಲದ ಹಾಗೂ ನಾನ್ ರೆಜಿಸ್ಟ್ರೇಶನ್ ಆಟೋಗಳನ್ನು ಸೀಜ್ ಮಾಡಿದ್ದಾರೆ. ದೋಷಪೂರಿತ ಮತ್ತು ನಂಬರ್ ಪ್ಲೇಟ್ ಮರೆಮಾಚುವುದು ಕೂಡಾ ಗಂಭೀರ ಅಪರಾಧವಾಗಿದೆ. ಟಂಟಂ,ಆಟೋ ಮಾಲೀಕರು, ಚಾಲಕರಿಗೂ ತಿಳಿವಳಿಕೆ ನೀಡಲಾಗಿದೆ. ತಪ್ಪು ಇದೇ ರೀತಿ ಮುಂದುವರಿಸಿದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.