ಕವಿಗಳು ತಮ್ಮ ಕೃತಿಗಳಿಂದ ಯಾವತ್ತೂ ಪ್ರಸ್ತುತರೆನುಸುತ್ತಾರೆ: ಸುನಿತಾ ಕಿರಣ್

| Published : Aug 25 2024, 02:00 AM IST

ಕವಿಗಳು ತಮ್ಮ ಕೃತಿಗಳಿಂದ ಯಾವತ್ತೂ ಪ್ರಸ್ತುತರೆನುಸುತ್ತಾರೆ: ಸುನಿತಾ ಕಿರಣ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕವಿಗಳು ತಾವು ಬರೆದ ಕೃತಿಗಳಿಂದ ಯಾವತ್ತೂ ಪ್ರಸ್ತುತರಾಗಿರುತ್ತಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಹೇಳಿದರು.

- ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್.ನಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ

ಕವಿಗಳು ತಾವು ಬರೆದ ಕೃತಿಗಳಿಂದ ಯಾವತ್ತೂ ಪ್ರಸ್ತುತರಾಗಿರುತ್ತಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಕವಿಗಳು, ಬರಹಗಾರರು, ಸಾಹಿತಿಗಳಿಗೆ ಅವರ ಪ್ರತಿಭೆಗೆ ದೊರಕುವ ಸಮ್ಮಾನಗಳು ಯಾರಿಂದ ಹೇಗೆ? ಏಕೆ? ಎಂಬ ವಿಚಾರ ಕುರಿತು ಮಾತನಾಡಿದರು.

ನಮ್ಮ ಕನ್ನಡ ಭಾಷೆ ಶ್ರೀಮಂತವಾಗಿದೆ. ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. 10ನೇ ಶತಮಾನ ದಿಂದಲೂ ಅಂದರೆ ಆದಿ ಕವಿ ಪಂಪನ ಕಾಲದಿಂದಲೂ ಕವಿಗಳು ಅನೇಕ ಪ್ರಕಾರದ ಸಾಹಿತ್ಯ, ರಚನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಕವಿಗಳು ತಾವು ಬರೆದ ಕೃತಿಗಳಿಂದ ಯಾವತ್ತೂ ಪ್ರಸ್ತುತರಾಗಿರುತ್ತಾರೆ. ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ ಎಂದರೆ ಇಂತಹ ಅನೇಕ ಮಹನೀಯರ ಪಾತ್ರ ದೊಡ್ಡದಾಗಿರುತ್ತದೆ. ಪಂಪನ ಕಾಲದಲ್ಲಿ ಕವಿಗಳಿಗೆ ರಾಜಾಶ್ರಯ ಸಿಗುತ್ತಿತ್ತು ಅವರಿಂದ ಪ್ರಶಸ್ತಿ ಸನ್ಮಾನ, ಮನ್ನಣೆ ದೊರಕುತ್ತಿತ್ತು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿನಲ್ಲಿ ಸ್ಥಾಪಿಸಿದರು. ಅಖಿಲ ಭಾರತ ಮತ್ತು ಜಿಲ್ಲಾ ಸಮ್ಮೇಳನಗಳಲ್ಲಿ ಕವಿಗಳಿಗೆ ಬರಹಗಾರರಿಗೆ ಸಾಹಿತಿಗಳಿಗೆ ಸಾಹಿತ್ಯಾ ಸಕ್ತರಿಗೆ ಸದವಕಾಶಗಳನ್ನು ಮಾಡಿಕೊಡುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ನೃಪತುಂಗ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಎಸ್ ಎಲ್ ಭೈರಪ್ಪ, ಟಿವಿ ವೆಂಕಟಚಲಶಾಸ್ತ್ರಿ, ಜಿ.ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ ಪಾಟೀಲ ಪುಟ್ಟಪ್ಪ ಮುಂತಾದ ಗಣ್ಯರಿಗೆ ಈ ಪ್ರಶಸ್ತಿ ದೊರಕಿದೆ ಎಂದು ಹೇಳಿದರು.

ಜ್ಞಾನಪೀಠ ಪ್ರಶಸ್ತಿಗಳನ್ನು ಸಾಹು ಜೈನರಸ್ಟ್ ನವರು ಸಂವಿಧಾನದಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಲ್ಲಿ ರಚಿತವಾದ ಅತ್ಯುತ್ತಮ ಸಾಹಿತ್ಯ ಕೃತಿಗೆ ನೀಡುತ್ತಾ ಬಂದಿದ್ದಾರೆ. ಭಾರತದಲ್ಲಿ ಒಟ್ಟು 63 ಕವಿಗಳಿಗೆ ಇದುವರೆಗೂ ಈ ಪ್ರಶಸ್ತಿ ದೊರೆತಿದೆ ಅದರಲ್ಲಿ ಕನ್ನಡದಲ್ಲಿ ಕುವೆಂಪು, ದ.ರಾ ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಡಾ. ವಿ ಕೃ ಗೋಕಾಕ್, ಡಾ.ಯು.ಆರ್‌. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಡಾ.ಚಂದ್ರಶೇಖರ್ ಕಂಬಾರ್ ಸೇರಿ ಎಂಟು ಜ್ಞಾನಪೀಠ ಪ್ರಶಸ್ತಿ ಲಭ್ಯವಾಗಿವೆ. ವಿಶ್ವವಿದ್ಯಾನಿಲಯಗಳು ವ್ಯಕ್ತಿ ಸಾಧನೆ ಮತ್ತು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡುತ್ತವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೇಂದ್ರ ಸರ್ಕಾರ ಕೊಡಲ್ಪಡುವ ಅತ್ಯಂತ ಗೌರವಯುತವಾದ ಪುರಸ್ಕಾರ ಎಂದು ವಿವರಿಸಿದರು.ಭಾರತ ರತ್ನ ಪದ್ಮವಿಭೂಷಣ, ಪದ್ಮಭೂಷಣ ಪದ್ಮಶ್ರೀ ಪ್ರಶಸ್ತಿಗಳನ್ನು ಅನೇಕ ವಿಭಾಗಗಳಲ್ಲಿ ಸಾಧನೆ ಮಾಡಿದ ಕವಿ, ಸಾಹಿತಿಗಳಿಗೆ ಕೊಡಲ್ಪಟ್ಟಿದೆ. ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ರಾಜ್ಯದ ಕವಿಗಳಿಗೆ ಪಂಪ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.1943ರಲ್ಲಿ ಮದ್ರಾಸ್ ಸರ್ಕಾರ ಐದು ಭಾಷೆ ಗಳನ್ನು ಗಮನಿಸಿ ಅತ್ಯುತ್ತಮ ಬರಹಗಾರರಿಗೆ ನೀಡುತ್ತಾ ಬಂದಿದೆ. 1943ರಲ್ಲಿ ಮೊದಲು ನಮ್ಮ ಕನ್ನಡದ ಗೋವಿಂದ ಪೈ ಗಳಿಗೆ ನೀಡಲಾಯಿತು. 1954ರಲ್ಲಿ ಕುವೆಂಪು, 2006ರಲ್ಲಿ ಜಿ.ಎಸ್. ಶಿವರುದ್ರಪ್ಪನವರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೆಕೆ ಬಿರ್ಲಾ ಪ್ರತಿಷ್ಠಾನ 1999ರಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಭಾರತೀಯ ಭಾಷೆಗಳಲ್ಲಿ ಶ್ರೇಷ್ಠ ರಚನೆಗೆ ನೀಡುತ್ತಾ ಬಂದಿದ್ದು. 15ಲಕ್ಷ ಮೊತ್ತ, ಫಲಕ ಒಳಗೊಂಡಿದೆ. ಕನ್ನಡದಲ್ಲಿ ಎಸ್ ಎಲ್ ಭೈರಪ್ಪನವರು ರಚಿಸಿರುವ ಮಂದ್ರ ಕಾದಂಬರಿಗೆ ಹಾಗೂ ವೀರಪ್ಪ ಮೊಯ್ಲಿ ಅವರ ಶ್ರೀ ರಾಮಾಯಣ ಅನ್ವೇಷಣಂ ಕೃತಿಗೆ ನೀಡಿರುತ್ತಾರೆ ಎಂದು ಹೇಳಿದರು.

ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ಕಲ್ಲೇಶ್ ಮಾತನಾಡಿ ಕನ್ನಡ ಭಾಷೆಗೆ ಮೊದಲ ಅದ್ಯತೆ ಕೊಡಬೇಕು ಎಂದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಪುಸ್ತಕಗಳನ್ನು ಓದಿದರೆ ಜ್ಞಾನ ಹೆಚ್ಚಾಗುತ್ತದೆ ಎಂದು ಹೇಳಿದರು.

ಲೇಖಕ ತ.ಮ.ದೇವಾನಂದ, ಚಂದ್ರಶೇಖರ್, ಲಕ್ಷ್ಮಿ ಭಗವಾನ್ ಮತ್ತಿತರರು ಭಾಗವಹಿಸಿದ್ದರು.24ಕೆಟಿಆರ್.ಕೆ.3ಃ

ತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಾಡಾಗಿದ್ದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ತಾ. ಕಸಾಪ ಅಧ್ಯಕ್ಷ ರವಿ ದಳವಾಯಿ ಉದ್ಘಾಟಿಸಿದರು. ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಲಕ್ಷ್ಮಿ ಭಗವಾನ್, ಲೇಖಕ ತ.ಮ.ದೇವಾನಂದ, ಚಂದ್ರಶೇಖರ್, ಶಿಕ್ಷಕ ಕಲ್ಲೇಶ್ ಮತ್ತಿತರರು ಇದ್ದರು.