ಸಾರಾಂಶ
ಹಾನಗಲ್ಲ: ವಿವಿಧ ಇಲಾಖೆಗಳಡಿ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಕೆಆರ್‌ಇಐಎಸ್ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ರೋಸ್ಟರ್ ಪ್ರಕಾರ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು. ಕೆಲ ಶಾಲೆಗಳ ಪ್ರಾಚಾರ್ಯರು ಪ್ರವೇಶಾತಿಗೆ ಹಣ ಕೇಳುತ್ತಿರುವ ದೂರುಗಳಿದ್ದು, ಪರಿಶೀಲಿಸಿ ಕ್ರಮ ಜರುಗಿಸಿ ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು. ಹಾವೇರಿಯ ಪ್ರವಾಸಿ ಮಂದಿರದಲ್ಲಿ ಹಾನಗಲ್ಲ ತಾಲೂಕಿನ ವಸತಿ ಶಾಲೆಗಳ ಸಮಸ್ಯೆಗಳ ಕುರಿತು ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲೆ ಮತ್ತು ಹಾನಗಲ್ಲ ತಾಲೂಕು ಮಟ್ಟದ ಅಧಿಕಾರಿಗಳು, ಹಾನಗಲ್ಲ ತಾಲೂಕಿನ ವಸತಿ ಶಾಲೆಗಳ ಪ್ರಾಚಾರ್ಯರು, ವಸತಿ ನಿಲಯಗಳ ಪಾಲಕರ ಸಭೆ ನಡೆಸಿ ಅವರು ಮಾತನಾಡಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಹಣ ನಿಗದಿ ಪಡಿಸಿ ಪ್ರವೇಶ ನೀಡುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಸಮಗ್ರವಾಗಿ ಪರಿಶೀಲನೆ ನಡೆಸಿ ಅಕ್ರಮ ಎಸಗಿರುವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಶುಚಿತ್ವಕ್ಕೆ ಗಮನ ನೀಡಬೇಕು. ಗುಣಮಟ್ಟದ ಊಟ ನೀಡಬೇಕು. ಅಗತ್ಯ ಮೂಲಭೂತ ಸೌಲಭ್ಯಗಳನ್ನು ದೊರಕಿಸುವಲ್ಲಿ ಹಳೆಯ ವಿದ್ಯಾರ್ಥಿಗಳ ನೆರವು ಪಡೆಯಬೇಕು. ಸರ್ಕಾರದಿಂದಲೂ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಶ್ರೀನಿವಾಸ ಮಾನೆ ಹೇಳಿದರು. ಬ್ಯಾತನಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೮.೫ ಕೋಟಿ ರು. ಅಂದಾಜು ವೆಚ್ಚದ ಜಿ+೪ ೨ನೇ ಹಂತದ ಕಟ್ಟಡ ನಿರ್ಮಾಣಗೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಹಾಗೆಯೇ ಉಳಿದಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಶೋಕ ಗದ್ದಿಗೌಡ್ರ ಗಮನ ಸೆಳೆದಾಗ ಶಾಸಕ ಮಾನೆ ಸ್ಪಂದಿಸಿ, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವ ಭರವಸೆ ನೀಡಿದರು. ಯಳವಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಸಮರ್ಪಕ ರಸ್ತೆ ಇಲ್ಲದೆ ಅನಾನುಕೂಲ ಉಂಟಾಗಿದೆ ಎಂದು ಪ್ರಾಚಾರ್ಯ ಗಮನ ಸೆಳೆದಾಗ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸಂಬಂಧಿಸಿದ ಪಿಡಿಒಗೆ ಸೂಚಿಸುವುದಾಗಿ ಶ್ರೀನಿವಾಸ ಮಾನೆ ಭರವಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಶಾಂತ, ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರವೀಣ, ತಾಲೂಕು ಕಲ್ಯಾಣಾಧಿಕಾರಿ ಎಸ್. ಆನಂದ ಸೇರಿದಂತೆ ವಸತಿ ಶಾಲೆಗಳ ಪ್ರಾಚಾರ್ಯರು, ವಸತಿ ನಿಲಯಗಳ ನಿಲಯ ಪಾಲಕರು ಪಾಲ್ಗೊಂಡಿದ್ದರು.