ಶ್ರದ್ಧೆ, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ: ಡಾ.ಬೋರೇಗೌಡ

| Published : Aug 25 2024, 02:00 AM IST

ಶ್ರದ್ಧೆ, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ: ಡಾ.ಬೋರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪದವಿ ಮತ್ತು ಪ.ಪೂ.ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ‘ಚಿಂತೆಯಿಂದ ಚಿಂತನೆಗೆ ಆರೋಗ್ಯಕರ ಮನಸುಗಳಿಗೆ’ ಶೀರ್ಷಿಕೆಯಲ್ಲಿ ನಡೆದ ಐದನೇ ಅರಿವು ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಐಜಿಪಿ ಡಾ.ಎಂ.ಬಿ.ಬೋರೇಗೌಡ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ವಿದ್ಯಾರ್ಥಿಗಳು ಶ್ರದ್ದೆ, ಯೋಜನೆ, ಕಠಿಣ ಪರಿಶ್ರಮ ಮುಂತಾದ ಮನೋಭಾವ ಮೈಗೂಡಿಸಿಕೊಂಡರೆ ಭವಿಷ್ಯದಲ್ಲಿ ತಾವಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಮೈಸೂರು ವಿಭಾಗದ ಐಜಿಪಿ ಡಾ.ಎಂ.ಬಿ.ಬೋರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪದವಿ ಮತ್ತು ಪ.ಪೂ.ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ‘ಚಿಂತೆಯಿಂದ ಚಿಂತನೆಗೆ ಆರೋಗ್ಯಕರ ಮನಸುಗಳಿಗೆ’ ಶೀರ್ಷಿಕೆಯಲ್ಲಿ ನಡೆದ ಐದನೇ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಸಜ್ಜನ ಹಾಗೂ ಸಮಾನ ಮನಸಿನ ಸ್ನೇಹಿತರ ಸಂಗ ಮಾಡಬೇಕು. ದುಶ್ಚಟಗಳಿಂದ ದೂರ ಇದ್ದು ತಮ್ಮ ದಾರಿ ಹುಡುಕಿಕೊಳ್ಳುವ ಸ್ವಂತಿಕೆ ಬೆಳಸಿಕೊಳ್ಳಬೇಕು. ಆತ್ಮವಿಶ್ವಾಸ ರೂಢಿಸಿ ಮುನ್ನಡೆದರೆ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದರು. ಮುಖ್ಯಮಂತ್ರಿ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಶಾಸಕ ಎಸ್.ಎಸ್.ಪೊನ್ನಣ್ಣ ಮಾತನಾಡಿ, ಸಾಮಾಜಿಕ ಜಾಲತಾಣಗಳು ಜನರಿಗೆ ಮಾಹಿತಿ ನೀಡುವ ಭರದಲ್ಲಿ ಅಸತ್ಯದ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಇದರಿಂದ ಜನರು ತಪ್ಪು ಮಾಹಿತಿಯನ್ನು ನಿಜ ಎಂದು ನಂಬುತ್ತಾರೆ ಎಂದರು.

ಜಾತಿ, ಧರ್ಮ, ಬಡವ ಬಲ್ಲಿದ ಎಂಬ ತಾರತಮ್ಯ ಬಿಡಬೇಕು. ಇವುಗಳಿಂದ ಸಮಾಜ ಅಭಿವೃದ್ಧಿಯಾಗುವುದಿಲ್ಲ. ವ್ಯಕ್ತಿತ್ವ ವಿಕಾಸನ, ಮಾನವಿಯ ಮೌಲ್ಯದಿಂದ ಸಮಾಜವನ್ನು ಅಭಿವೃದ್ದಿಗೊಳಿಸಬಹುದು ಈ ಮೂಲಕ ವಿದ್ಯಾರ್ಥಿಗಳು ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಜೀವನ ನಡೆಸುವಂತೆ ಕರೆ ನೀಡಿದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಾವೇ ಹುಡುಕಿಕೊಂಡು ಅದನ್ನು ಸರಿಪಡಿಸಿಕೊಂಡರೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಬಡ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನಕೂಲವಾಗುವ ಸಲುವಾಗಿ ವಿದ್ಯಾಸಂಸ್ಥೆ ಸ್ಥಾಪಿಸಲಾಗಿದೆ ಎಂದರು.

ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪರಮೇಶ್, ಖಜಾಂಚಿ ಡಾ.ಉದಯಕುಮಾರ್‌, ನಿರ್ದೇಶಕ ಯತೀಶ್‌, ಕಾಲೇಜು ಪ್ರಾಂಶುಪಾಲ ಎಂ.ಆರ್.ನಿರಂಜನ್, ಪ್ರಮುಖರಾದ ಕೆ.ಪಿ.ಚಂದ್ರಕಲಾ ಮತ್ತಿತರರಿದ್ದರು.