ಸಾರಾಂಶ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಪರಿಸರದಲ್ಲಿ ಮಂಗಳವಾರದಿಂದ ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಗೆ ಗುರುವಾರ ಯಶಸ್ಸು ಲಭಿಸಿದೆ. ಉತ್ಖನನದ ವೇಳೆ 6ನೇ ಗುಂಡಿಯಲ್ಲಿ ಒಟ್ಟು 12 ಮಾನವನ ಮೂಳೆಗಳು ಪತ್ತೆಯಾಗಿವೆ. ಪತ್ತೆಯಾದ ಮೂಳೆಗಳನ್ನು ಹೆಚ್ಚಿನ ತನಿಖೆಗಾಗಿ ಸಂಗ್ರಹಿಸಿ ಇಡಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣ ಹೂತಿರುವುದಾಗಿ ಅನಾಮಿಕ ವ್ಯಕ್ತಿ ದೂರು ನೀಡಿರುವ ಹಿನ್ನೆಲೆಯಲ್ಲಿ ಮೂರನೇ ದಿನದ ಉತ್ಖನನ ಕಾರ್ಯಾಚರಣೆ ಗುರುವಾರ ನೇತ್ರಾವತಿ ದಡದಲ್ಲಿ ನಡೆಯಿತು. ಬೆಳಗ್ಗೆ 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆ ಕಡೆಯಿಂದ ತೆರಳಿದ ಹಿಟಾಚಿ, ಆರನೇ ಪಾಯಿಂಟ್‌ನಲ್ಲಿ ಅಗೆತ ಪ್ರಾರಂಭಿಸಿತು. ಅಗೆತದ ವೇಳೆ ಸ್ಥಳದಲ್ಲಿ ನೇತ್ರಾವತಿ ನದಿ ನೀರಿನ ಒರತೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿಕೊಂಡಿತು. ಈ ನೀರನ್ನು ಹೊರ ತೆಗೆಯಲು ಅಧಿಕಾರಿಗಳು ಪಂಪ್ ಸೆಟ್ ತರಿಸಿಕೊಂಡರು.
ಮಧ್ಯಾಹ್ನ 12.30ರ ವೇಳೆಗೆ ಸುಮಾರು 3 ರಿಂದ 4 ಅಡಿ ಆಳದಲ್ಲಿ ಕೆಲವು ಎಲುಬುಗಳು (ಅಸ್ಥಿಪಂಜರದ ಕುರುಹು) ಪತ್ತೆಯಾದವು. ಈ ಅಸ್ಥಿಪಂಜರದ ಎಲುಬುಗಳು ಗಂಡಸಿನದ್ದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದು ಶವಪರೀಕ್ಷೆ ಮಾಡಿ ಹೂತಿರುವ ಶವ ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಈ ವೇಳೆ, ಶ್ವಾನದಳವನ್ನು ಕೂಡ ಕರೆಸಿಕೊಂಡ ಅಧಿಕಾರಿಗಳು, ಹೆಚ್ಚಿನ ಅವಶೇಷಗಳಿಗಾಗಿ ಹುಡುಕಾಟ ನಡೆಸಿದರು. ಈ ಮಧ್ಯೆ, ಗುರುವಾರ ಅಪರಾಹ್ನದ ಬಳಿಕ ಮಹಜರು ಪ್ರಕ್ರಿಯೆಗೆ ಹಲವಾರು ಗಂಟೆಗಳು ಬೇಕಾಗಿದ್ದರಿಂದ 7ನೇ ಪಾಯಿಂಟ್ ಕಡೆ ಹೋಗಲು ಸಾಧ್ಯವಾಗಲಿಲ್ಲ.
ಮಹಜರು ಪ್ರಕ್ರಿಯೆ: ಎಲುಬುಗಳನ್ನು ಸಂಗ್ರಹಿಸಿ ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ಸಂಗ್ರಹಿಸಿದ ಅವಶೇಷಗಳ ಮಹಜರು ಪ್ರಕ್ರಿಯೆ ನಡೆಯಿತು. ಜಾಗದ ದಾಖಲೆ ಸೇರಿ ಎಲ್ಲಾ ಮಾಹಿತಿ ಸಂಗ್ರಹಿಸಲಾಯಿತು. ಅಲ್ಲದೆ, ಹೆಚ್ಚಿನ ತನಿಖೆಗಾಗಿ ಈ ಎಲುಬುಗಳನ್ನು ಸಂರಕ್ಷಿಸಿ ಇಡಲಾಯಿತು. ಸ್ಥಳ ಮಹಜರು ನಡೆಸಿದ ಬಳಿಕ ಹಿಟಾಚಿ ಬಳಸಿ ಗುಂಡಿ ಮುಚ್ಚಲಾಯಿತು.
ಶುಕ್ರವಾರ, ಅನಾಮಿಕ ತೋರಿಸಿದ 7ನೇ ಗುಂಡಿ ಅಗೆಯುವ ಕಾರ್ಯ ನಡೆಯಲಿದೆ. ಇದು ರಸ್ತೆ ಪಕ್ಕದಲ್ಲೇ ಇದ್ದು, ಈ ಪ್ರದೇಶದಲ್ಲಿ ಈಗಾಗಲೇ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಗುಂಡಿಯಲ್ಲಿ ಸಿಕ್ಕ ಪಾನ್‌ಕಾರ್ಡ್, ಡೆಬಿಟ್ ಕಾರ್ಡ್‌ಗಳ ಮೂಲ ಪತ್ತೆ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಧರ್ಮಸ್ಥಳ ಗ್ರಾಮದಲ್ಲಿ ಮಂಗಳವಾರ ಪಾಯಿಂಟ್ 1ರಲ್ಲಿ ಉತ್ಖನನ ವೇಳೆ ಪತ್ತೆಯಾದ ಪಾನ್ ಕಾರ್ಡ್ ಮೃತ ವ್ಯಕ್ತಿಗೆ ಸೇರಿದ್ದಾಗಿದೆ ಹಾಗೂ ಡೆಬಿಟ್ ಕಾರ್ಡ್ ಮೃತ ವ್ಯಕ್ತಿಯ ತಾಯಿಗೆ ಸೇರಿದ್ದಾಗಿದ್ದು, ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಪತ್ರಿಕಾ ಹೇಳಿಕೆ ನೀಡಿದ್ದ ದೂರುದಾರ ಅನನ್ಯಾ ಭಟ್ ಪರ ವಕೀಲ ಮಂಜುನಾಥ್, ಧರ್ಮಸ್ಥಳ ಗ್ರಾಮದಲ್ಲಿ ಮಂಗಳವಾರ ಪಾಯಿಂಟ್ 1ರಲ್ಲಿ ಉತ್ಖನನ ವೇಳೆ ಹರಿದ ಕೆಂಪು ಬ್ಲೌಸ್, ಪಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಒಂದರಲ್ಲಿ ಪುರುಷರ ಹೆಸರು, ಮತ್ತೊಂದರಲ್ಲಿ ಮಹಿಳೆಯ ಹೆಸರು ‘ಲಕ್ಷ್ಮಿ’ ಎಂದಿದೆ ಎಂದು ತಿಳಿಸಿದ್ದರು.ಈ ಬಗ್ಗೆ ತನಿಖೆ ನಡೆಸಿದ ಎಸ್‌ಐಟಿ, ಇದರ ಮೂಲವನ್ನು ಪತ್ತೆ ಹಚ್ಚಿದೆ. ಪಾಯಿಂಟ್ 1ರಲ್ಲಿ ಉತ್ಖನನ ವೇಳೆ ಪತ್ತೆಯಾದ ಪಾನ್ ಕಾರ್ಡ್ ಮೃತ ವ್ಯಕ್ತಿಗೆ ಸೇರಿದ್ದಾಗಿದೆ ಹಾಗೂ ಡೆಬಿಟ್ ಕಾರ್ಡ್ ಮೃತ ವ್ಯಕ್ತಿಯ ತಾಯಿಗೆ ಸೇರಿದ್ದಾಗಿದ್ದು, ಅವರು ಇನ್ನೂ ಜೀವಂತವಾಗಿದ್ದಾರೆ. ಮೃತ ವ್ಯಕ್ತಿ 2025ರ ಮಾರ್ಚ್ ತಿಂಗಳಲ್ಲಿ ಜಾಂಡೀಸ್ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದ ಎಂದು ತಿಳಿದು ಬಂದಿದೆ.
ಈ ವಿಚಾರವನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಸ್ವತಃ ಮಹಿಳೆಯನ್ನು ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಂಡಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
;Resize=(128,128))
;Resize=(128,128))
;Resize=(128,128))