ಸಾರಾಂಶ
ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಧರ್ಮಸ್ಥಳದ ಹೆಸರು ಕೆಡಿಸುವ ಹುನ್ನಾರ ನಡೆದಿರುವುದು ಖಂಡನೀಯ - ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು.
ಜಮಖಂಡಿ : ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಧರ್ಮಸ್ಥಳದ ಹೆಸರು ಕೆಡಿಸುವ ಹುನ್ನಾರ ನಡೆದಿರುವುದು ಖಂಡನೀಯ. ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ, ನ್ಯಾಯಾಲಯ, ಪೊಲೀಸ್ ವ್ಯವಸ್ಥೆಯ ಆಧಾರದ ಮೇಲೆ ಪ್ರಕರಣದ ತನಿಖೆಯಾಗಬೇಕು. ಅದನ್ನು ಬಿಟ್ಟು ಯುಟ್ಯೂಬ್ ಆಧಾರದ ಮೇಲೆ ಎಸ್‌ಐಟಿ ರಚನೆ ಮಾಡಿ, ಹಿಂದುಗಳ ಭಾವನೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದು, ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರಕ್ಕೆ ಭೇಟಿ ನೀಡಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಸೌಜನ್ಯ ಪ್ರಕರಣ ಮಾತ್ರವಲ್ಲ ಭಟ್ಕಳದ ಯಮುನಾ ನಾಯಕ, ಹುಬ್ಬಳ್ಳಿಯ ನೇಹಾ ಹಿರೇಮಠ ಸೇರಿದಂತೆ ನೂರಾರು ಪ್ರಕರಣಗಳು ರಾಜ್ಯದಲ್ಲಿವೆ. ಆ ಎಲ್ಲ ಪ್ರಕರಣಗಳಿಗೂ ಎಸ್‌ಐಟಿ ರಚನೆ ಮಾಡಬೇಕು. ಎಲ್ಲ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ಯಾಗಬೇಕು. ಇಂಥ ಪ್ರಕರಣಗಳು ಮರುಕಳಿಸದಂತೆ ಶಿಕ್ಷೆ ಕೊಡುವ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಹಿಂದು ಮುಖವಾಡ ಧರಿಸಿ ಕ್ರಿಶ್ಚಿಯನ್ನರು, ಕಮ್ಯುನಿಸ್ಟ್‌ರು ಆಟವಾಡುತ್ತಿರುವುದು ಜನರಿಗೆ ತಿಳಿದಿದೆ. ದಕ್ಷ ಅಧಿಕಾರಿಗಳಾದ ಗಿರೀಶ ಮಟ್ಟಣ್ಣವರ ಹಾಗೂ ಮಹೇಶ ತಿಮ್ಮರೊಡಿ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಅಭಿವೃದ್ಧಿ ಕುಂಠಿತ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಕಾಂಗ್ರೆಸ್‌ನ ಮಂತ್ರಿಗಳು, ಶಾಸಕರು ಈ ಕುರಿತು ಧ್ವನಿ ಎತ್ತಿದ್ದಾರೆ. ಸರ್ಕಾರ ಭಂಡತನಕ್ಕೆ ಬಿದ್ದಿದೆ ಎಂದು ದೂರಿದರು. 136 ಸ್ಥಾನಗಳನ್ನು ನೀಡಿರುವ ರಾಜ್ಯದ ಮತದಾರರು ಸರ್ಕಾರದ ನೀತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ತಕ್ಕಪಾಠ ಕಲಿಸಲಿದ್ದಾರೆ. ಗ್ಯಾರಂಟಿ ಪಡೆದ ಮಹಿಳೆಯರೇ ಇವರನ್ನು ಮನೆಗೆ ಕಳುಹಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳ ಟಾರ್ಗೆಟ್: ಕಾಂಗ್ರೆಸ್ ಹುಟ್ಟಿನಿಂದಲೂ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತ ಬಂದಿದೆ. ಪ್ರಕರಣ ದಾಖಲಿಸುವುದು, ಗಡಿಪಾರು ಮಾಡುವುದು, ವಿನಾಕಾರಣ ಹಿಂದೂ ಕಾರ್ಯಕರ್ತರಿಗೆ ಹಿಂಸೆ ನೀಡುವ ಕೆಲಸವಾಗುತ್ತಿದೆ. ಮಾಲೇಗಾಂವ ಸ್ಫೋಟದ ಕುರಿತು ಎನ್‌ಐಎ ನೀಡಿರುವ ವರದಿಯೇ ಇದಕ್ಕೆ ಸಾಕ್ಷಿಯಾಗಿದೆ. ರಾಮಮಂದಿರದ ವಿರುದ್ಧ, ರಾಮ ಸೇತುವೆ ಕಾಲ್ಪನಿಕ ಎಂದು ಅಫಿಡೆವಿಟ್ ಸಲ್ಲಿಸುವುದು, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾನೂನು ಗಳಿದ್ದರೂ ಅವುಗಳನ್ನು ಮುಚ್ಚಿಟ್ಟು ಅವ್ಯಾಹತವಾಗಿ ಗೋಹತ್ಯೆ, ಗೋಮಾಂಸ ರಫ್ತು ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ ಅವರು ಹಿಂದುಗಳನ್ನು ಗುರಿಯಾಗಿಸಿ ನೀಡುತ್ತಿರುವ ತೊಂದರೆ, ಬೆದರಿಕೆಗಳಿಗೆ ಹಿಂದೂ ಕಾರ್ಯಕರ್ತರು ಬಗ್ಗುವುದಿಲ್ಲ. ಹಿಂದು ಸಮಾಜದ ಪರ ನಿರಂತರ ಕೆಲಸ ಮಾಡುತ್ತೇವೆ ಎಂದು ಹೇಳಿದರು.