120 ಕೋಟಿ ರು. ವೆಚ್ಚ ವಿದ್ಯುತ್ ಜಾಲದ ಬಲವರ್ಧನೆಗೆ ಸಚಿವರಿಂದ ಭೂಮಿ ಪೂಜೆ

| Published : Jan 26 2025, 01:30 AM IST

ಸಾರಾಂಶ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಬಿಟ್ಟಂಗಾಲದ ಹೆಗ್ಗಡೆ ಸಮಾಜದ ಬಳಿ ಭೂಮಿ ಪೂಜೆ ನೆರವೇರಿಸಿದರು. ಮಳೆಗಾಲದಲ್ಲಿ ವಿದ್ಯುತ್‌ ಪೂರೈಕೆ ಮಾಡುವುದು ಒಂದು ರೀತಿ ಸವಾಲಿನ ಕೆಲಸ ಆಗಿದೆ ಎಂದು ಸಚಿವರು ತಿಳಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಸವಾಲಿನ ಕೆಲಸ: ಭೋಸರಾಜು

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುತ್ ಜಾಲದ ಬಲವರ್ಧನೆಗೆ ಸಂಬಂಧಿಸಿದಂತೆ ಸುಮಾರು 120 ಕೋಟಿ ರು. ಅನುಮೋದನೆಗೊಂಡಿರುವ ಯೋಜನೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಬಿಟ್ಟಂಗಾಲ ಹೆಗ್ಗಡೆ ಸಮಾಜದ ಬಳಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವುದರಿಂದ ವಿದ್ಯುತ್ ಅಡಚಣೆ ಉಂಟಾಗುತ್ತದೆ. ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಮಾಡುವುದು ಒಂದು ರೀತಿ ಸವಾಲಿನ ಕೆಲಸ ಆಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು ಮುಂದಾಗಿದ್ದು, ಕೊಡಗು ಜಿಲ್ಲೆಗೆ ಒಟ್ಟು 208 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಸಚಿವರು ಹೇಳಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಹಾಗೂ ಮಡಿಕೇರಿ ತಾಲೂಕಿನ ಹಲವು ಪ್ರದೇಶ ಒಳಪಟ್ಟಿದ್ದು, 3 ಉಪ ವಿಭಾಗ, 12 ಶಾಖಾ ಕಚೇರಿ ಹೊಂದಿದ್ದು, ಈ ವ್ಯಾಪ್ತಿಯಲ್ಲಿ 11 ಕೆವಿ ಒಳಗೊಂಡ 40 ಮಾರ್ಗಗಳಿದ್ದು, 4016 ವಿದ್ಯುತ್ ಪರಿವರ್ತಕಗಳು, 2487 ಕಿ.ಮೀ ಉದ್ದದ ಎಚ್.ಟಿ ಮಾರ್ಗ ಹಾಗೂ 3437 ಕಿ.ಮೀ.ಉದ್ದದ ಎಲ್‌ಟಿ ಮಾರ್ಗವಿದ್ದು, ವಿವಿಧ ಮಾರ್ಗದಲ್ಲಿ ಹೆಚ್ಚಿನ ಗ್ರಾಹಕರಿದ್ದಾರೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ಮಾರ್ಗಗಳಲ್ಲಿ ಈ ಹಿಂದೆ ಅಳವಡಿಸಿರುವ ವಿದ್ಯುತ್ ತಂತಿಗಳು ಹಳೆಯದಾಗಿದ್ದು, ಈ ಜಾಲದಿಂದ ಆಗುವ ವಿದ್ಯುತ್ ಅಡಚಣೆ ತಡೆಯಲು ಹೊಸ ವಿದ್ಯುತ್ ಜಾಲದ ಬಲವರ್ಧನೆಗೆ ಸರ್ಕಾರ ಮುಂದಾಗಿದ್ದು, ಇದೊಂದು ಮಹತ್ವ ಯೋಜನೆ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.

ಹೊಸ ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕಗಳ ಅಳವಡಿಕೆ, ವಿದ್ಯುತ್ ಮಾರ್ಗ ಸರಿಪಡಿಸುವುದು, ಜೊತೆಗೆ ಉಪ ವಿದ್ಯುತ್ ಘಟಕಗಳ ನಿರ್ಮಾಣ ಹೀಗೆ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಬಲವರ್ಧನೆ ಮಾಡಿ, ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಹೆಚ್ಚಿನ ಅನುದಾನ ಒದಗಿಸಿ ಕೊಡಗು ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸುತ್ತಿದೆ ಎಂದು ಎನ್.ಎಸ್.ಭೋಸರಾಜು ಅವರು ವಿವರಿಸಿದರು.

ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಬೀಳುವುದು, ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗುವುದು. ಹೀಗೆ ಹಲವು ಸಮಸ್ಯೆ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ. ಆ ದಿಸೆಯಲ್ಲಿ ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದು ಸಚಿವರು ಹೇಳಿದರು.

ಗ್ರಾಹಕರಿಗೆ ಉತ್ತಮ ವೋಲ್ಟೇಜ್‌ನೊಂದಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅವಶ್ಯವಿರುವ ಕಡೆ ಹೆಚ್ಚುವರಿಯಾಗಿ 271 ವಿದ್ಯುತ್ ಪರಿವರ್ತಕ ಅಳವಡಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಕೊಡಗು ಜಿಲ್ಲೆಗೆ ಸರ್ಕಾರ ಹೆಚ್ಚಿನ ಹಣ ಒದಗಿಸಿದೆ. ಲೋಕೋಪಯೋಗಿ, ಪಂಚಾಯತ್ ರಾಜ್, ಇಂಧನ, ಸಹಕಾರ, ಹೀಗೆ ವಿವಿಧ ಇಲಾಖೆಗೆ ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್ ಪೂರೈಕೆ, ಗ್ರಾಮೀಣ ಮತ್ತು ನಗರ ವಸತಿ ಯೋಜನೆ ಹೀಗೆ ಸರ್ಕಾರ ಗ್ಯಾರಂಟಿ ಯೋಜನೆಯ ಜತೆಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿದೆ ಎಂದು ಸಚಿವರು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದ ತೆರಿಗೆ ಹಣ ವಾಪಸ್ಸು ಬಂದರೆ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಬಹುದು, ಆದರೆ ಈ ಕೆಲಸ ಆಗುತ್ತಿಲ್ಲ, ಆದರೂ ಅಭಿವೃದ್ಧಿಯಲ್ಲಿ ರಾಜ್ಯ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಇತರೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸರ್ಕಾರ ಜನಪರವಾಗಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು, ಎಲ್ಲರ ಸರ್ಕಾರ ಇದ್ದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಲಿವೆ ಎಂದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ಸತತ ಪ್ರಯತ್ನ ಮತ್ತು ಕಾಳಜಿಯಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ನಡೆಯುತ್ತಿದ್ದು, ಇದನ್ನು ಸರಿಯಾಗಿ ಬಳಸಿಕೊಳ್ಳುವಂತಾಗಬೇಕು, ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಹೆಚ್ಚಿನ ಸಹಕಾರ ನೀಡಲಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮರ್ಪಕ ವಿದ್ಯುತ್ ಕಾಮಗಾರಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ಒದಗಿಸಿರುವುದು ವಿಶೇಷವಾಗಿದ್ದು, ಆ ನಿಟ್ಟಿನಲ್ಲಿ ವಿದ್ಯುತ್‌ಚ್ಛಕ್ತಿ ಉನ್ನತೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸರ್ಕಾರ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಬಲವರ್ಧನೆಗೆ 208 ಕೋಟಿ ರು. ಬಿಡುಗಡೆ ಮಾಡಿದ್ದು, ಇದರಲ್ಲಿ 120 ಕೋಟಿ ರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒದಗಿಸಲಾಗಿದ್ದು, 6 ವಿದ್ಯುತ್ ಉಪ ಕೇಂದ್ರಗಳು ನಿರ್ಮಾಣವಾಗುತ್ತಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಬಲವರ್ಧನೆ ಸಂಬಂಧ ಹೆಚ್ಚಿನ ಅನುದಾನ ಬಿಡುಗಡೆ ಆಗಲು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ಕಾರಣರಾಗಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕೈಜೋಡಿಸಿದ್ದು, ಇವರಿಗೆ ಕೃತಜ್ಞತೆ ಸಲ್ಲಿಸಬೇಕಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.

ವಿದ್ಯುತ್ ಬಲವರ್ಧನೆ ಯೋಜನೆಯಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತದೆ. 11 ಕೆವಿ ವಿದ್ಯುತ್ ಮಾರ್ಗಗಳಲ್ಲಿ ಹಳೆಯ ವಿದ್ಯುತ್ ತಂತಿಗಳನ್ನು ಕಂಡಕ್ಟರ್‌ನಿಂದ ಬದಲಿಸಿ ಬಲವರ್ಧನೆ (ಅಂದಾಜು 870ಕಿ.ಮೀ) ಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಮಾರ್ಗದಲ್ಲಿನ ಅಡಚಣೆ ತಪ್ಪಿಸುವ ದೃಷ್ಟಿಯಿಂದ ಹೆದ್ದಾರಿ/ ಮುಖ್ಯ ರಸ್ತೆ ಪಕ್ಕದಲ್ಲಿರುವ ಎಚ್.ಟಿ ಮುಖ್ಯ ಮಾರ್ಗಗಳ ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿ ಮರು ಸ್ಥಾಪಿಸಲಾಗುತ್ತಿದೆ (ಅಂದಾಜು 185ಕಿ.ಮೀ) ಎಂದರು.

ಗುರುತಿಸಿದ ಜನ ನಿಬಿಡ ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ವಿದ್ಯುತ್ ಅಪಘಾತಗಳನ್ನು ತಪ್ಪಿಸುವ ದೃಷ್ಟಿಯಿಂದ ಎಲ್.ಟಿ ವಿದ್ಯುತ್ ಮಾರ್ಗಗಳಲ್ಲಿನ ವಿದ್ಯುತ್ ತಂತಿಗಳನ್ನು ಎಬಿ ಕೇಬಲ್ ಬಳಸಿ ಬಲವರ್ಧಿಸುವುದು. (ಅಂದಾಜು 78 ಕಿ.ಮೀ), ವಿದ್ಯುತ್ ಮಾರ್ಗದಲ್ಲಿನ ಹಳೆಯ ಕಬ್ಬಿಣದ ಕಂಬಗಳ ಬದಲಾವಣೆ (3136 ಸಂಖ್ಯೆ) ಮಾಡಲಾಗುತ್ತಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹೇಳಿದರು.

ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಕಂಬ ಅಳವಡಿಕೆ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು. ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ಯಾವುದೇ ರೀತಿ ಅಡಚಣೆ ಉಂಟುಮಾಡಬಾರದು ಎಂದು ಇದೇ ಸಂದರ್ಭದಲ್ಲಿ ಎ.ಎಸ್.ಪೊನ್ನಣ್ಣ ಅವರು ಕೋರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಲೋಕೋಪಯೋಗಿ ಇಲಾಖೆಗೆ ಈ ಬಾರಿ 60 ಕೋಟಿ ರು. ಅನುದಾನ ಒದಗಿಸಿದೆ. ಜತೆಗೆ 25 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಇಂಧನ, ಗ್ರಾಮೀಣಾಭಿವೃದ್ಧಿ ಹೀಗೆ ಹಲವು ಇಲಾಖೆಗಳ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದು ಎ.ಎಸ್.ಪೊನ್ನಣ್ಣ ಪ್ರತಿಪಾದಿಸಿದರು.

ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ನುಡಿದಂತೆ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ನುಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪ್ರೊಬೆಷನರಿ ಎಸ್‌ಪಿ ಬೆನಕ ಪ್ರಸಾದ್, ಇಂಧನ ಇಲಾಖೆಯ ಮುಖ್ಯ ಎಂಜಿನಿಯರ್ ದಿವಾಕರ, ಅಧೀಕ್ಷಕ ಎಂಜಿನಿಯರ್ ಸೋಮಶೇಖರ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಂ.ರಾಮಚಂದ್ರ, ಎಇಇಗಳಾದ ಸುರೇಶ್(ವಿರಾಜಪೇಟೆ), ವಿನಯಕುಮಾರ್(ಮಡಿಕೇರಿ) ಹಾಗೂ ಸತೀಶ್ (ಸೋಮವಾರಪೇಟೆ) ಇತರರು ಇದ್ದರು.