ಬೆಳಗಾವಿ ಜಿಲ್ಲೆಯ ಕುಡಚಿಯಿಂದ ರಬಕವಿ-ಬನಹಟ್ಟಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಬ್ಯಾಗ್ ನಟ್ಟಿದ್ದ 120 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ದೋಚಿದ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬೆಳಗಾವಿ ಜಿಲ್ಲೆಯ ಕುಡಚಿಯಿಂದ ರಬಕವಿ-ಬನಹಟ್ಟಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಬ್ಯಾಗ್ ನಟ್ಟಿದ್ದ 120 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ದೋಚಿದ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಬನಹಟ್ಟಿಯ ನೀರಿನ ಟಾಕಿ ಹತ್ತಿರದ ನಿವಾಸಿ ಆನಂದ ಕೋಪರ್ಡೆ ದಂಪತಿ ತವರು ಮನೆ ಕೊಲ್ಲಾಪುರಕ್ಕೆ ಹೋಗಿ ವಾಪಸ್ ಬಸ್ ನಲ್ಲಿ ಬರುವಾಗ ಬ್ಯಾಗ್‌ನಲ್ಲಿ ಬಟ್ಟೆ ತುಂಬಿ ನಡುವೆ ಚಿನ್ನಾಭರಣ ಇಟ್ಟಿದ್ದು, ಆ ಬ್ಯಾಗನ್ನು ನಿರ್ವಾಹಕನ ಸೀಟಿನ ಕೆಳಗೆ ಇಟ್ಟು ಮುಂದೆ ಹೋಗಿದ್ದಾರೆ. ಇದನ್ನು ಗಮನಿಸಿದ್ದ ಕಳ್ಳರು ಕುಡಚಿಯಿಂದ ರಬಕವಿ-ಬನಹಟ್ಟಿ ಕಡೆಗೆ ಸಾಗುವಾಗ ಬ್ಯಾಗ್ ಒಳಗೆ ಡಬ್ಬಿಯೊಳಗೆ ಇಟ್ಟಿದ್ದ ಚಿನ್ನಾಭರಣ ತೆಗೆದುಕೊಂಡು ಮರಳಿ ಬ್ಯಾಗ್ ಜೀಪ್ ಹಾಕಿ, ಚೈನ್‌ಗೆ ಫೆವಿಕಾನ್‌ನಂಥ ಅಂಟು ಪದಾರ್ಥ ಅಂಟಿಸಿ ಬಸ್ ನಿಂದ ಇಳಿದು ಪರಾರಿಯಾಗಿದ್ದಾರೆ.ಬನಹಟ್ಟಿ ಬಸ್ ನಿಲ್ದಾಣ ಬಂದ ನಂತರ ಕೋಪರ್ಡೆ ಬ್ಯಾಗ್ ಜೊತೆಗೆ ಬಸ್ ನಿಂದ ಇಳಿದು ಬ್ಯಾಗ್‌ನ ಜಿಪ್ ತೆಗೆಯಬೇನ್ನುವಷ್ಟರಲ್ಲಿ ಜಿಪ್ ಅಂಟಿಕೊಂಡು ಬಿಗಿಯಾಗಿ ಎಳೆಯಲು ಬಾರದ್ದನ್ನು ಕಂಡು ಗಾಬರಿಯಾಗಿದ್ದಾರೆ, ನಂತರ ಮನೆಗೆ ತೆರಳಿ ಬ್ಯಾಗ್ ಜಿಪ್ ಹರಿದು ನೋಡಿದಾಗ ಬ್ಯಾಗ್‌ನಲ್ಲಿಟ್ಟಿದ್ದ ಬಟ್ಟೆ ಚೆಲ್ಲಾಪಿಲ್ಲಿಯಾಗಿ ಆಭರಣ ಕಳ್ಳತನವಾಗಿರುವುದು ಗೊತ್ತಾಗಿದೆ.
ಪ್ರಕರಣ ವಿಳಂಬ: ಘಟನೆ ನಡೆದ ಭಾನುವಾರದಿಂದ ಕುಡಚಿ ಪೊಲೀಸ್ ಠಾಣೆಗೆ ಅಲೆದು ಪ್ರಕರಣದ ದಾಖಲಿಸಿಕೊಳ್ಳಲು ಮನವಿ ಮಾಡಿದರೂ ಘಟನೆ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಪೊಲೀಸರು ಪ್ರಕರಣದ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದರಿಂದ ಪಿರ್ಯಾದಿದಾರರು ನಾಲ್ಕು ದಿನಗಳ ನಂತರ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ