ಸಾರಾಂಶ
- ಕವಲೆತ್ತು ಬಳಿ ಕಂಪನಿ ಮುಖ್ಯದ್ವಾರ ಎದುರು ಪ್ರತಿಭಟನೆಯಲ್ಲಿ ಅಷ್ಠಮೂರ್ತಿ ಒತ್ತಾಯ
- - -ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿಗೆ ಸಮೀಪದ ಕವಲೆತ್ತು ಗ್ರಾಮ ಹತ್ತಿರದ ಸಿಂಥೈಟ್ ಇಂಡಸ್ಟ್ರಿಸ್ ಕಾರ್ಖಾನೆಯಲ್ಲಿ ೧೮ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ೧೨೦ ಕಾರ್ಮಿಕರನ್ನು ಕಂಪನಿ ಮಾಲೀಕರು ಕಾಯಂಗೊಳಿಸಲು ಒತ್ತಾಯಿಸಿ ಕಂಪನಿ ಮುಖ್ಯ ದ್ವಾರದ ಎದುರು ಪ್ರತಿಭಟನೆ ಆರಂಭವಾಗಿದೆ.ಕವಲೆತ್ತು ಗ್ರಾಪಂ ಮಾಜಿ ಅಧ್ಯಕ್ಷ, ಕಾರ್ಮಿಕ ಮುಖಂಡ ಅಷ್ಠಮೂರ್ತಿ ಓಲೇಕಾರ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ೧೮ ವರ್ಷಗಳ ಹಿಂದೆಯೇ ಒಣಮೆಣಸಿನ ಕಾಯಿಯಿಂದ ಕಾರ, ಕಲರ್ ಹಾಗೂ ಇತರೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವ ಕಂಪನಿ ಆರಂಭಿಸಿದ್ದಾರೆ. ಇಲ್ಲಿನ ರೈತರು ಸ್ಥಳೀಯ ಯುವಕರಿಗೆ ಕೆಲಸ ಸಿಗುತ್ತದೆ ಎಂಬ ಕಾರಣಕ್ಕೆ ಭೂಮಿ ನೀಡಿದ್ದರು. ೨೭೦ ಕಾರ್ಮಿಕರೊಂದಿಗೆ ಆರಂಭಗೊಂಡ ಕಂಪನಿ ಹಂತ ಹಂತವಾಗಿ ೩ ವರ್ಷಕ್ಕೊಮ್ಮೆಯಂತೆ ಈಗಾಗಲೆ ೧೫೦ ಕಾರ್ಮಿಕರನ್ನು ಕಾಯಂಗೊಳಿಸಿದೆ. ಉಳಿದ ೧೨೦ ಕಾರ್ಮಿಕರನ್ನು ಕಾಯಂಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ಇದರಿಂದ ಗೊಂದಲದಲ್ಲಿ ಸಿಲುಕಿರುವ ೧೨೦ ಜನ ಕಾರ್ಮಿಕರೆಲ್ಲಾ ತಮ್ಮನ್ನು ಕಾಯಂಗೊಳಿಸಲು ಆಗ್ರಹಿಸಿ ಕಳೆದ ೬ ತಿಂಗಳಿನಿಂದ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಆದರೆ, ಕಂಪನಿ ಮುಖ್ಯಸ್ಥರು ಇದುವರೆಗೂ ಕಾರ್ಮಿಕರ ಹಿತಕಾಯುವ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಇದರಿಂದ ಬೇಸತ್ತ ಕಾರ್ಮಿಕರು ಐಎನ್‌ಟಿಯುಸಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟಿಸಲಾಗುತ್ತಿದೆ. ತಕ್ಷಣ ಕಂಪನಿ ಉಳಿದ ಎಲ್ಲ ನೌಕರರನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಐಎನ್‌ಟಿಯುಸಿ ಅಧ್ಯಕ್ಷ ಆರ್.ಎಸ್. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಬಿ., ಕಾರ್ಮಿಕ ಮುಖಂಡರಾದ ಕರಿಯಪ್ಪ ಎಂ.ಬಿ., ಸಿದ್ದೇಶ ಎನ್.ಬಿ., ಷಣ್ಮುಖ ಟಿ.ಟಿ., ಮಾರುತಿ ಬಿ.ಕೆ., ಕುಬೇರಪ್ಪ ಎಂ.ಕೆ., ರಮೇಶ ಬಿ.ಕೆ., ಮಂಜುನಾಥ ಎಲ್.ಎಂ., ರಾಜು ಎಚ್.ಎಲ್., ವೆಂಕಟೇಶ ಕೋಡೇರ, ವಸಂತಪ್ಪ ಪಿ.ವೈ., ಹರೀಶ ಎಸ್., ಹನುಮಕ್ಕ ಕೆ. ಕೋಡೆರ, ಶಾರದಮ್ಮ ಕೋಡೇರ, ಸುಮಾ ಬಿ.ಎ., ಪ್ರೇಮಕ್ಕ ಹಿರೇಮಠ ಭಾಗವಹಿಸಿದ್ದರು.
- - --14ಎಚ್.ಆರ್.ಆರ್ 04:
ಹರಿಹರ ತಾಲೂಕಿನ ಕವಲೆತ್ತು ಗ್ರಾಮದ ಹತ್ತಿರದ ಸಿಂಥೈಟ್ ಇಂಡಸ್ಟ್ರಿಸ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ೧೨೦ ಕಾರ್ಮಿಕರನ್ನು ಶೀಘ್ರ ಕಾಯಂಗೊಳಿಸಲು ಒತ್ತಾಯಿಸಿ, ಕಂಪನಿಯ ಮುಖ್ಯ ದ್ವಾರದ ಎದುರು ಐಎನ್‌ಟಿಯುಸಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.