1278 ಮುರುಕಲು ಕೊಠಡಿಗಳಲ್ಲಿ ಮಕ್ಕಳ ಕಲಿಕೆ

| Published : May 29 2024, 12:48 AM IST

ಸಾರಾಂಶ

ಬಹುತೇಕ ಸರ್ಕಾರಿ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದ್ದು ರಿಪೇರಿ, ನಿರ್ವಹಣೆ ಇಲ್ಲದೇ ಮಳೆಗಾಲದಲ್ಲಿ ಬೀಳುವ ಸಂಭವ ಜಾಸ್ತಿ. ಪ್ರಸ್ತುತ ವರ್ಷದಲ್ಲಿ 469 ಶಾಲೆಗಳ 1278 ಕೊಠಡಿಗಳು ಶಿಥಿಲಗೊಂಡಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು ಅನುದಾನ ಬಿಡುಗಡೆ ಬಳಿಕ ರಿಪೇರಿ ಕಾರ್ಯ ನಡೆಯಲಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಒಂದೆಡೆ ಮಳೆಗಾಲ ಆರಂಭವಾಗುತ್ತಿದ್ದಂತೆ ಇನ್ನೊಂದೆಡೆ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಜೂನ್‌ ಶುರುವಾತಿನಲ್ಲೇ ಶಾಲೆಗಳು ಪ್ರಾರಂಭವಾಗುತ್ತಿದ್ದು, ಶಾಲಾ ಕಟ್ಟಡಗಳ ಸುರಕ್ಷತೆ ಬಗ್ಗೆ ಚರ್ಚೆಗಳು ಶುರುವಾಗಿವೆ. ಎರಡು ತಿಂಗಳ ಕಾಲ ಬೇಸಿಗೆ ರಜೆ ಮುಗಿಸಿ ಮಕ್ಕಳು ಶಾಲೆಯ ಹೊಸ್ತಿಲು ತುಳಿಯಬೇಕು ಎನ್ನುತ್ತಿದ್ದು, ಅವರು ಶಿಕ್ಷಣ ಪಡೆಯುವ ಶಾಲಾ ಕಟ್ಟಡಗಳ ಬಗ್ಗೆಯೂ ಶಾಲಾ ಶಿಕ್ಷಣ ಇಲಾಖೆ ಎಚ್ಚರ ವಹಿಸಬೇಕಿದೆ.

ಬಹುತೇಕ ಸರ್ಕಾರಿ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದ್ದು ರಿಪೇರಿ, ನಿರ್ವಹಣೆ ಇಲ್ಲದೇ ಮಳೆಗಾಲದಲ್ಲಿ ಬೀಳುವ ಸಂಭವ ಜಾಸ್ತಿ. ಈಗಾಗಲೇ ಇಂತಹ ಘಟನೆಗಳು ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ಘಟಿಸಿದ್ದು ಮಕ್ಕಳು ಇಂತಹ ಸಂದರ್ಭಗಳಿಗೆ ಬಲಿಯಾಗದಂತೆ ಶಿಕ್ಷಣ ಇಲಾಖೆ ಶಾಲಾ ಆರಂಭದ ಸಮಯದಲ್ಲೇ ಎಚ್ಚರ ವಹಿಸಿ ಶಿಥಿಲ ಕಟ್ಟಡ ಹೊರತುಪಡಿಸಿ ಸುರಕ್ಷಿತ ಕಟ್ಟಡ, ಕೊಠಡಿಗಳಲ್ಲಿ ಶಾಲೆಗಳನ್ನು ನಡೆಸಬೇಕು ಎಂಬುದು ಪಾಲಕರ ಆಗ್ರಹ. ಆದರೆ, ಅನುದಾನದ ಕೊರತೆ ಶಿಕ್ಷಣ ಇಲಾಖೆಗೆ ಕಾಡುತ್ತಿದ್ದು, ಕಳೆದ ವರ್ಷವೇ ಮಂಜೂರಾಗಿದ್ದ ಹಲವು ಶಾಲೆಗಳ ಕಟ್ಟಡಗಳು ಅನುದಾನದ ಕೊರತೆಯಿಂದ ಆಮೆಗತಿಯಲ್ಲಿ ಸಾಗುತ್ತಿವೆ.

ವಿವೇಕ ಕ್ಲಾಸ್‌ ರೂಂ ಯೋಜನೆ ಅಡಿ 2022-23ನೇ ಸಾಲಿಗೆ 170 ಶಾಲೆಗಳ 295 ಹೊಸ ಕೊಠಡಿ ಕಟ್ಟಲು ಆದೇಶವಾಗಿದ್ದು ಈ ಪೈಕಿ 157 ಕೊಠಡಿಗಳು ₹ 3.1 ಕೋಟಿಯಲ್ಲಿ ನಿರ್ಮಾಣವಾಗಿವೆ. ಇನ್ನೂ 138 ಕೊಠಡಿಗಳ ನಿರ್ಮಾಣ ಕಾರ್ಯ ತೀರಾ ನಿಧಾನಗತಿಯಲ್ಲಿದೆ. ಹಾಗೆಯೇ, ಕೋಲ್‌ ಇಂಡಿಯಾ ಕಂಪನಿಯ ಸಿಎಸ್‌ಆರ್‌ ಅಡಿ 61 ಶಾಲೆಗಳ 141 ಕೊಠಡಿಗಳನ್ನು ₹ 2.54 ಕೋಟಿ ಅನುದಾನದಲ್ಲಿ ಕಟ್ಟಲು ಮಂಜೂರಾಗಿದೆ. ಈ ಪೈಕಿ 81 ಕೊಠಡಿಗಳನ್ನು ಕಟ್ಟಲಾಗಿದ್ದು 61 ಬಾಕಿ ಇವೆ ಎಂದು ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದರು.

1278 ಕೊಠಡಿಗಳು ರಿಪೇರಿ:

ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ 1500ಕ್ಕೂ ಹೆಚ್ಚು ಶಾಲೆಗಳಿದ್ದು, 2023-24ನೇ ಸಾಲಿನಲ್ಲಿ 86 ಶಾಲೆಗಳ 286 ಕೊಠಡಿಗಳನ್ನು ರಿಪೇರಿ ಮಾಡಲು ₹ 3.3 ಕೋಟಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಈ ಪೈಕಿ ₹ 83 ಲಕ್ಷ ಬಿಡುಗಡೆಯಾಗಿದ್ದು ಹಂತ-ಹಂತವಾಗಿ ದುರಸ್ತಿ ಕಾರ್ಯ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯು 352 ಕೊಠಡಿಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಬೇಕೆಂದು ವರದಿ ನೀಡಿತ್ತು. ಇಲ್ಲಿ ಮಕ್ಕಳು ಕಲಿಯದ ಸ್ಥಿತಿ ಇದ್ದು, ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಪ್ರಸ್ತುತ ವರ್ಷದಲ್ಲಿ 469 ಶಾಲೆಗಳ 1278 ಕೊಠಡಿಗಳು ಶಿಥಿಲಗೊಂಡಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು ಅನುದಾನ ಬಿಡುಗಡೆ ಬಳಿಕ ರಿಪೇರಿ ಕಾರ್ಯ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಶಾಲಾ ಕಟ್ಟಡಗಳ ಬಗ್ಗೆ ಶಿಕ್ಷಣ ಇಲಾಖೆಗೆ ನೆನಪಾಗುತ್ತದೆ. ಕಳೆದ ವರ್ಷವೇ ಈ ಬಗ್ಗೆ ಯೋಜನೆ ರೂಪಿಸಿ ದುರಸ್ತಿ ಮಾಡುವ ಕಾರ್ಯ ಎಂದಿಗೂ ಆಗಿಲ್ಲ. ಬದಲಾಗಿ ಕಳೆದ ವರ್ಷದ ಯೋಜನೆಗಳು ಇನ್ನಾ ಬಾಕಿ ಇರುವುದು ಬೇಸರದ ಸಂಗತಿ. ಸಾಕಷ್ಟು ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆ ಇದ್ದರೆ, ಕೆಲವು ಶಾಲೆಗಳಲ್ಲಿ ಶೌಚಾಲಯಗಳ ಕಟ್ಟಡ ಶಿಥಿಲಾವಸ್ಥೆಯಲ್ಲಿವೆ. ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಆಟದ ಮೈದಾನವಿಲ್ಲ, ಕಾಂಪೌಂಡ್‌ ಇಲ್ಲ, ಊಟದ ಮನೆ ಇಲ್ಲ.

ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶಿಕ್ಷಣ ಇಲಾಖೆಗೆ ಹೆಚ್ಚು ಒತ್ತು ನೀಡುವ ಕಾರ್ಯವಾಗಬೇಕು ಎಂದು ಕೊಪ್ಪದಕೇರಿ ನಿವಾಸಿ ಮೋಹನ ರಾಮದುರ್ಗ ಆಗ್ರಹಿಸಿದ್ದಾರೆ.ಸೋರದಂತೆ ತುರ್ತು ಕ್ರಮವಹಿಸಿ:

ಅಂಗನವಾಡಿ, ಶಾಲೆ, ಕಾಲೇಜುಗಳ ಕೋಣೆಗಳು ಸೋರುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತುರ್ತು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶಿಥಿಲಾವಸ್ಥೆ ಹಾಗೂ ಸೋರುತ್ತಿರುವ ಅಂಗನವಾಡಿ, ಶಾಲೆ, ಕಾಲೇಜುಗಳ ಕಟ್ಟಡಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಜೂ. 30ರೊಳಗೆ ತಮಗೆ ವರದಿ ಒಪ್ಪಿಸುವಂತೆ ತಿಳಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಅಥವಾ ಸೋರುತ್ತಿರುವ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಕೂರುವುದು ಎಲ್ಲಿಯಾದರೂ ಗಮನಕ್ಕೆ ಬಂದಲ್ಲಿ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಸಿದ್ದಾರೆ.