ಜಿಲ್ಲೆಯಲ್ಲಿ 1294 ಜನರಿಗೆ ಡೆಂಘೀ ಜ್ವರದ ಶಂಕೆ!

| Published : Jul 05 2024, 12:48 AM IST

ಸಾರಾಂಶ

ಗದಗ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದು, ನೀರು ಸರಬರಾಜಿನ ಸಮಸ್ಯೆಯಿದ್ದು, ಜನರು ಸಂಗ್ರಹಿಸುವ ನೀರಿನ ಪರಿಕರಗಳಲ್ಲಿಯೇ ಈಡಿಸ್ ಲಾರ್ವಾಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ತತ್ತಿಯಾಗಿ ರೋಗಿಗಳು ಪತ್ತೆಯಾಗಿದೆ

ವಿಶೇಷ ವರದಿ ಗದಗ

ಜಿಲ್ಲೆಯಲ್ಲಿ ಜು.3ರ ವರೆಗೆ 57 ಜನರಿಗೆ ಡೆಂಘಿ ಜ್ವರ ಖಚಿತವಾಗಿದ್ದು, ಮೂವರನ್ನು ಹೊರತುಪಡಿಸಿ ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಇಲಾಖೆ ತಿಳಿಸಿದೆ.

ಒಟ್ಟು 1294 ಪ್ರಕರಣವನ್ನು ಸಂಶಯಾಸ್ಪದವೆಂದು ಗುರುತಿಸಿ 917 ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಆ ಪೈಕಿ 57 ಜನರಿಗೆ ಡೆಂಘೀ ಜ್ವರ ಇದ್ದುದು ಖಚಿತಪಟ್ಟಿದೆ.

ಗದಗ ತಾಲೂಕಿನಲ್ಲಿ -39, ಮುಂಡರಗಿ- 5, ನರಗುಂದ- 4, ರೋಣ- 3, ಶಿರಹಟ್ಟಿ-6 ಪ್ರಕರಣಗಳು ಖಚಿತಪಟ್ಟಿವೆ.

ಗದಗ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದು, ನೀರು ಸರಬರಾಜಿನ ಸಮಸ್ಯೆಯಿದ್ದು, ಜನರು ಸಂಗ್ರಹಿಸುವ ನೀರಿನ ಪರಿಕರಗಳಲ್ಲಿಯೇ ಈಡಿಸ್ ಲಾರ್ವಾಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ತತ್ತಿಯಾಗಿ ರೋಗಿಗಳು ಪತ್ತೆಯಾಗಿದೆ. ಲಾರ್ವಾ ಸಮೀಕ್ಷೆ, ಕರಪತ್ರ ವಿತರಣೆ ಮತ್ತು ಖಚಿತಪಟ್ಟ ಗ್ರಾಮಗಳಲ್ಲಿ ಧೂಮೀಕರಣ ಕೈಗೊಳ್ಳಲಾಗಿದೆ.

ಅಗಸ್ಟ 2018ರಲ್ಲಿ ಜಿಲ್ಲಾ ಸಮೀಕ್ಷಣಾ ಘಟಕದಲ್ಲಿ ಸೆಂಟಿನಲ್ ಪ್ರಯೋಗಾಲಯ ಸ್ಥಾಪಿಸಲಾಗಿದ್ದು ಇದರ ಪ್ರಯೋಜನ ಪಡೆಯಲಾಗಿದೆ. ಪ್ರತಿ ತಿಂಗಳಲ್ಲಿ ಪ್ರತಿ ಉಪಕೇಂದ್ರದ ಗ್ರಾಮಗಳಲ್ಲಿ ಮನೆ ಲಾರ್ವಾ ಸಮೀಕ್ಷೆ ನಡೆಸಿ ಸೋರ್ಸ ರಿಡಕ್ಷನ್ ಮಾಡಿಸಲು ಹಾಗೂ ನಗರ ಪ್ರದೇಶಗಳಲ್ಲಿ ಹತ್ತಿರದ ಪ್ರಾ.ಆ. ಕೇಂದ್ರಗಳ ಮುಖಾಂತರ ಲಾರ್ವಾ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ತಿಳಿಸಿದ್ದಾರೆ.

ಮುಂಜಾಗ್ರತೆ ಅಗತ್ಯ

ಡೆಂಘೀ ಜ್ವರವು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ಸಾರ್ವಜನಿಕರು ಡೆಂಘೀ ಜ್ವರದ ಕುರಿತು ಭಯ ಹಾಗೂ ಆತಂಕಕ್ಕೆ ಒಳಗಾಗದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಡೆಂಘೀ ಜ್ವರದಿಂದ ಸಂರಕ್ಷಿಸಿಕೊಳ್ಳಬೇಕು.

ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಉಂಟಾಗುವುದು ಡೆಂಘೀ ಜ್ವರದ ಲಕ್ಷಣಗಳಾಗಿವೆ. ಜ್ವರದ ಲಕ್ಷಣಗಳೊಂದಿಗೆ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವದ, ಚರ್ಮದ ಮೇಲೆ ರಕ್ತಸ್ರಾವದ ಗುರುತು, ಕಪ್ಪುಮಲ ವಿಸರ್ಜನೆ, ವಿಪರೀತ ಬಾಯಾರಿಕೆ ಅಥವಾ ಜ್ಞಾನ ತಪ್ಪುವುದು ಡೆಂಘೀ ಶಾಕ್ ಸಿಂಡ್ರೋಮ್ ದ ಲಕ್ಷಣಗಳಾಗಿವೆ.

ನಿರ್ಲಕ್ಷ್ಯ ಬೇಡ: ಯಾರು 2ನೇ ಬಾರಿ ಡೆಂಘೀ ಬಾಧೆಗೆ ಒಳಗಾಗುತ್ತಾರೆಯೋ ಅವರು ಸ್ವಲ್ಪವೂ ನಿರ್ಲಕ್ಷ್ಯ ಮಾಡಬಾರದು. ಯಾಕೆಂದರೆ ಅದು ತೀವ್ರ ಸ್ವರೂಪಕ್ಕೆ ಹೋಗುವ ಸಾಧ್ಯತೆಗಳು ಅಧಿಕ. ಇಂತಹ ಪ್ರಕರಣಗಳಲ್ಲಿ ಕೆಲವೇ ದಿನಗಳಲ್ಲಿ ಜ್ವರ ನಿಂತು ಬಿಡುತ್ತದೆ. ಆದರೆ ಜೀವ ಹೋಗುವಷ್ಟು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಟದಲ್ಲಿಯೂ ಏರುಪೇರು ಆಗಬಹುದು. ವಾಂತಿ ಮಾಡಿದಾಗ ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಂಡರೆ ಪರಿಸ್ಥಿತಿ ಗಂಭೀರವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಆಸ್ಪತ್ರೆಗೆ ದಾಖಲಾಗಿ ತಕ್ಕ ಚಿಕಿತ್ಸೆ ಪಡೆಯುವುದು ಉತ್ತಮ ಉಪಾಯವಾಗಿದೆ.

ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬೇಕು. ಸೊಳ್ಳೆಗಳ ಹರಡುವುದನ್ನು ತಡೆದು ಅವುಗಳ ಸಂಭಾವ್ಯ ಸಂತಾನೋತ್ಪತ್ತಿ ಸ್ಥಳ ನಾಶಪಡಿಸಬೇಕು. ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿವೆ. ಆದ್ದರಿಂದ ನಿಂತ ನೀರನ್ನು ತೊಡೆದು ಹಾಕಲು ಬ್ಯಾರಲ್‍ಗಳು, ಹೂದಾನಿಗಳು, ಬೇಸಿನ್‍ಗಳು ಅಥವಾ ಕಪ್‍ಗಳು ಮತ್ತು ಬಳಕೆಯಾಗದ ಟೈಯರ್‌ಗಳು ಸೇರಿದಂತೆ ನಿಂತಿರುವ ನೀರಿನ ಎಲ್ಲ ಮೂಲಗಳನ್ನು ತೆರವುಗೊಳಿಸಿ ಸೊಳ್ಳೆ ನಿವಾರಕಗಳನ್ನು ಬಳಸಿ ಸಾರ್ವಜನಿಕರು ಡೆಂಘೀ ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ತಿಳಿಸಿದ್ದಾರೆ.