ಬಿಬಿಎಂಪಿಯಿಂದ ಸಂಗ್ರಹಿಸಿ ವಿಲೇವಾರಿಗೆ ಪ್ರತಿ ಕೆ.ಜಿ. ಕಸಕ್ಕೆ ₹12 ದರ ನಿಗದಿ : ಆಯುಕ್ತ ತುಷಾರ್‌ ಗಿರಿನಾಥ್‌

| Published : Nov 09 2024, 01:00 AM IST / Updated: Nov 09 2024, 08:40 AM IST

ಬಿಬಿಎಂಪಿಯಿಂದ ಸಂಗ್ರಹಿಸಿ ವಿಲೇವಾರಿಗೆ ಪ್ರತಿ ಕೆ.ಜಿ. ಕಸಕ್ಕೆ ₹12 ದರ ನಿಗದಿ : ಆಯುಕ್ತ ತುಷಾರ್‌ ಗಿರಿನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸಗಟು ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪಾದನೆಯಾಗುವ ಕಸ ವಿಲೇವಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಬಿಬಿಎಂಪಿಯಿಂದ ಕಸ ಸಂಗ್ರಹಿಸಿ ವಿಲೇವಾರಿಗೆ ಪ್ರತಿ ಕೆ.ಜಿ. ಕಸಕ್ಕೆ ₹12 ದರ ನಿಗದಿ ಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

 ಬೆಂಗಳೂರು : ನಗರದ ಸಗಟು ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪಾದನೆಯಾಗುವ ಕಸ ವಿಲೇವಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಬಿಬಿಎಂಪಿಯಿಂದ ಕಸ ಸಂಗ್ರಹಿಸಿ ವಿಲೇವಾರಿಗೆ ಪ್ರತಿ ಕೆ.ಜಿ. ಕಸಕ್ಕೆ ₹12 ದರ ನಿಗದಿ ಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘನತ್ಯಾಜ್ಯ ವಿಲೇವಾರಿ ನಿಯಮದ ಪ್ರಕಾರ ಮನೆ ಮನೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದು ಬಿಬಿಎಂಪಿ ಜವಾಬ್ದಾರಿಯಾಗಿದೆ. ಆದರೆ, ನಗರದಲ್ಲಿ ಅನಧಿಕೃತವಾಗಿ ಹೋಟೆಲ್‌ಗಳು ಸೇರಿದಂತೆ ಸಗಟು ತ್ಯಾಜ್ಯ ಉತ್ಪಾದಕರು ಬಿಬಿಎಂಪಿಗೆ ತಮ್ಮ ಕಸ ಹಾಕುತ್ತಿದ್ದಾರೆ. ಇದರಿಂದ ಬಿಬಿಎಂಪಿಗೆ ಕಸ ವಿಲೇವಾರಿ ಹೆಚ್ಚಾಗಿ ಸಮಸ್ಯೆ ಆಗುತ್ತಿದೆ.

ಕಳೆದ ಒಂದು ವರ್ಷದ ಹಿಂದೆಯೇ ನಗರದ ಸಗಟು ತ್ಯಾಜ್ಯ ಉತ್ಪಾದಕರಿಗೆ ನೋಟಿಸ್‌ ನೀಡಿ ತಮ್ಮಲ್ಲಿ ಉತ್ಪಾದನೆಯಾಗುವ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಲಾಗಿತ್ತು. ಆದರೆ, ಈವರೆಗೆ ಸಗಟು ತ್ಯಾಜ್ಯ ಉತ್ಪಾದಕರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಸ್ವಂತ ವ್ಯವಸ್ಥೆ ಮಾಡಿಕೊಳ್ಳದವರೆಗೆ ಸಗಟು ತ್ಯಾಜ್ಯ ಉತ್ಪಾದಕರಿಂದ ಕಸ ಸಂಗ್ರಹಿಸುವುದಕ್ಕೆ ಪ್ರತಿ ಕೆ.ಜಿ. ₹12 ದರ ನಿಗದಿ ಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಗಟು ಉತ್ಪಾದಕರಿಗೆ ಬಿಬಿಎಂಪಿಯು ಕಸ ಸಂಗ್ರಹಿಸುವುದಕ್ಕೆ ನಿಯಮ ಪ್ರಕಾರ ಕೆ.ಜಿ. ₹6 ಇದೆ. ಸ್ವಂತ ವ್ಯವಸ್ಥೆ ಮೂಲಕ ತ್ಯಾಜ್ಯ ವಿಲೇವಾರಿಕೆ ತ್ಯಾಜ್ಯ ಉತ್ಪಾದಕರು ಕ್ರಮ ಕೈಗೊಳ್ಳದಿರುವುದಕ್ಕೆ ಕೆ.ಜಿ. ₹6 ದಂಡ ಸೇರಿಸಿ ಒಟ್ಟು ₹12 ನಿಗದಿ ಪಡಿಸಲಾಗಿದೆ. ₹12 ನೀಡುವುದಕ್ಕೆ ಸಾಧ್ಯವಿಲ್ಲ ಎನ್ನುವ ಸಗಟು ತ್ಯಾಜ್ಯ ಉತ್ಪಾದಕರು ಕಸವನ್ನು ತಮ್ಮ ವ್ಯವಸ್ಥೆ ಮೂಲಕ ವಿಲೇವಾರಿಗೆ ಕ್ರಮ ಕೈಗೊಳ್ಳಬಹುದಾಗಿದೆ. ಆಗ ಯಾವುದೇ ಹಣವನ್ನು ಬಿಬಿಎಂಪಿಗೆ ನೀಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.