ಸಾರಾಂಶ
ಹಾವೇರಿ: ಶರಣ ಸಂಸ್ಕೃತಿಯ ಸಾರ ಯಶಸ್ವಿ ಬದುಕಿನ ಸಿದ್ಧಾಂತವೇ ಆಗಿದ್ದು, ಸಾಮಾಜಿಕ ನ್ಯಾಯ ಆರ್ಥಿಕ ಸಮಾನತೆಯ ಸತ್ಯ ಸಂಗತಿಗಳನ್ನು ಬಿತ್ತರಿಸಿ ಆ ಕಾಲದ ಕ್ರಾಂತಿಯ ಸಂದೇಶಗಳನ್ನು ಎಲ್ಲ ಕಾಲಕ್ಕೂ ಪ್ರಸ್ತುತವಾಗಿಸಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬಸವ ಬಳಗ ಹಾಗೂ ಕನ್ನಡತಿ ಕಲಾ ತಂಡ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಮನೆಯಲ್ಲಿ ಮಹಾಮನೆ ಅಂಗವಾಗಿ ಆಯೋಜಿಸಿದ್ದ ವೈಚಾರಿಕ ವಚನಕಾರ ಹಡಪದ ಅಪ್ಪಣ್ಣನವರ ಜಯಂತಿ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಡಪದ ಅಪ್ಪಣ್ಣನವರು ಶರಣ ಸಂಪತ್ತಾಗಿದ್ದರು. ಕ್ರಾಂತಿಕಾರಿ ಶಕ್ತಿ ಕವಿಯಾಗಿ ೧೨ನೇ ಶತಮಾನದ ಶರಣ ಚಳವಳಿಗೆ ಶಕ್ತಿಯಾಗಿ ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ನೀಡಿದ ವಚನಕಾರ. ಅವರ ಚಿಂತನೆಗಳು ಸಾರ್ವಕಾಲಿಕ ಸತ್ಯಗಳು. ರಂಗಭೂಮಿ ಮಾಧ್ಯಮದ ಮೂಲಕ ಅವರ ಜೀವನ ಸಾಧನೆಯನ್ನು ಸಮಾಜಕ್ಕೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ವಚನ ಸಾಹಿತ್ಯ ಎಂಬುದು ನಿತ್ಯ ಸತ್ಯಗಳ ಅಭಿವ್ಯಕ್ತಿ. ಎಲ್ಲ ಕಾಲ ದೇಶಗಳಿಗೂ ಬೇಕಾಗುವ ಸಂಸ್ಕಾರದ ಸತ್ಯಗಳನ್ನು ವಚನಗಳು ಹೇಳಿವೆ. ಹೋರಾಟಗಳ ಜೊತೆ ಜೊತೆಗೆ ಸಾಮಾಜಿಕ ಅಗತ್ಯಗಳನ್ನು ವಚನಗಳು ನೀಡಿವೆ. ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಸಹಾಯಕರಾಗಿಯಲ್ಲದೆ ಸತ್ಯನಿಷ್ಠ ವಿಚಾರಗಳಿಗೆ ಶಕ್ತಿಯಾಗಿದ್ದರು. ಆಧ್ಯಾತ್ಮದ ಉತ್ತಂಗದಲ್ಲಿದ್ದು ಇಡೀ ಶರಣ ಪರಂಪರೆಯ ಮುಂಚೂಣಿಯಲ್ಲಿದ್ದರು. ಈಗ ಮನೆ ಮನೆಗಳಲ್ಲಿ ವಚನ ಸಂದೇಶಗಳು ಜಾಗೃತವಾಗಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನೀಕಟ್ಟಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಿತ್ತರಿಸಿದ ವಚನ ಕಾಲ ಮುಂದಿನ ಶತಶತಮಾನಗಳಿಗೆ ಬೇಕಾಗುವ ಸಾಮಾಜಿಕ ಚಿಂತನೆಗಳನ್ನು ನೀಡಿದೆ. ವಚನಕಾರರು ತಮ್ಮ ನಿತ್ಯ ವೃತ್ತಿಯೊಂದಿಗೆ ಸಮಾಜದ ಹಿತಕ್ಕೆ ಶ್ರಮಿಸಿ ಇಡೀ ಬದುಕನ್ನು ಸಮಾಜಕ್ಕಾಗಿಯೇ ಅರ್ಪಿಸಿಕೊಂಡ ಮಹಾತ್ಮರು. ಶೀಘ್ರ ಹಾವೇರಿಯಲ್ಲಿ ಕಲಾ ಪ್ರದರ್ಶನಕ್ಕೆ ರಂಗ ಮಂದಿರ ಲಭ್ಯವಾಗಲಿದೆ. ಇದರ ಪ್ರಯೋಜನೆ ಪಡೆಯೋಣ ಎಂದರು.ಹಂಚಿನಮನಿ ಆರ್ಟಗ್ಯಾಲರಿ ಸಂಸ್ಥಾಪಕ ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಆಯುಕ್ತ ಪರಶುರಾಮ ಚಲವಾದಿ, ನಂದಿ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್. ಗುಜ್ರಿ, ಕನ್ನಡತಿ ಕಲಾ ತಂಡದ ಅಧ್ಯಕ್ಷೆ ಲತಾ ಎಂ.ಪಾಟೀಲ ಅತಿಥಿಗಳಾಗಿದ್ದರು.ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ಕೆ.ಆರ್. ಹಿರೇಮಠ, ಪ್ರಶಾಂತ ತಡಸದ, ಷಣ್ಮುಖಪ್ಪ ಹಾದಿಮನಿ, ಅನಿತಾ ಉಪಲಿ ಅವರನ್ನು ಸನ್ಮಾನಿಸಲಾಯಿತು. ಕನ್ನಡತಿ ಕಲಾ ತಂಡದಿಂದ ಶರಣ ಹಡಪದ ಅಪ್ಪಣ್ಣನವರ ನಾಟಕ ಪ್ರದರ್ಶನ ನಡೆಯಿತು. ನಂತರ ನಡೆದ ಹಡಪದ ಅಪ್ಪಣ್ಣ ನಾಟಕ ಕುರಿತ ಸಂವಾದದಲ್ಲಿ ವಿ.ಜಿ. ಯಳಗೇರಿ, ಪರಿಮಳ ಜೈನ್, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಕೆ.ಆರ್. ಹಿರೇಮಠ ಮಾತನಾಡಿದರು.ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಸ್ವಾಗತಿಸಿದರು. ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಶಿವಬಸಪ್ಪ ಮುದ್ದಿ ವಂದಿಸಿದರು.