ಎಳನೀರು ಜ್ಯೂಸ್‌ ಸೇವಿಸಿ 137 ಮಂದಿ ಅಸ್ವಸ್ಥ, ಘಟಕ ಬಂದ್‌

| Published : Apr 13 2024, 01:06 AM IST / Updated: Apr 13 2024, 09:10 AM IST

tender, coconut, water
ಎಳನೀರು ಜ್ಯೂಸ್‌ ಸೇವಿಸಿ 137 ಮಂದಿ ಅಸ್ವಸ್ಥ, ಘಟಕ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಡ್ಯಾರಿನಲ್ಲಿ ಎಳನೀರು ಘಟಕ ಹಾಗೂ ಐಸ್‌ ಕ್ರೀಂ ಪಾರ್ಲರ್‌ನಲ್ಲಿ ಎಳನೀರು ಜ್ಯೂಸ್‌ ಸೇವಿಸಿ 137ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿದ್ದು, ಈ ಸಂಬಂಧ ಘಟಕ ಹಾಗೂ ಪಾರ್ಲರ್‌ ಅನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

 ಮಂಗಳೂರು : ಅಡ್ಯಾರಿನಲ್ಲಿ ಎಳನೀರು ಘಟಕ ಹಾಗೂ ಐಸ್‌ ಕ್ರೀಂ ಪಾರ್ಲರ್‌ನಲ್ಲಿ ಎಳನೀರು ಜ್ಯೂಸ್‌ ಸೇವಿಸಿ 137ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿದ್ದು, ಈ ಸಂಬಂಧ ಘಟಕ ಹಾಗೂ ಪಾರ್ಲರ್‌ ಅನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಅಲ್ಲದೆ ಎಳನೀರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹೇಳಿದ್ದಾರೆ. ಏ.10ರಂದು ಘಟನೆ ನಮ್ಮ ಗಮನಕ್ಕೆ ಬಂದಿದ್ದು ಘಟಕ್ಕೆ ತೆರಳಿ ಪರಿಶೀಲಿಸಿದ್ದೇವೆ ಎಂದರು.

ಕಾಲರಾ ಇಲ್ಲ: ಅಸ್ವಸ್ಥರಲ್ಲಿ ಬಹುತೇಕ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಬ್ಬರನ್ನು ಮಾತ್ರ ನಿಗಾದಲ್ಲಿ ಇರಿಸಲಾಗಿದೆ. ಅಸ್ವಸ್ಥರಲ್ಲಿ ಯಾರಲ್ಲೂ ಕಾಲರಾ ಪತ್ತೆಯಾಗಿಲ್ಲ ಎಂದರು. ಈ ಘಟನೆಗೆ ಕಾರಣ ಏನು? ಯಾರಾದರೂ ವೃತ್ತಿ ದ್ವೇಷದಲ್ಲಿ ವಿಷಪ್ರಾಶನ ಮಾಡಿದರೇ ಅಥವಾ ಸಿಬ್ಬಂದಿಯ ಎಡವಟ್ಟೇ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಎಳನೀರು ಜ್ಯೂಸ್‌ ಸೇವಿಸಿ ಅಸ್ವಸ್ಥರಾದ ಘಟನೆ ಏ.8ರಂದೇ ನಡೆದಿದೆ ಎಂದು ಜಾಲತಾಣಗಳಲ್ಲಿ ಮಾಹಿತಿ ಹರಿದಾಡತೊಡಗಿದೆ. ಆದರೆ ಈ ಘಟನೆ ನಮ್ಮ ಗಮನಕ್ಕೆ ಏ.10ರಂದು ಬಂದಿದ್ದು, ಅಂದೇ ಆಹಾರ ಇಲಾಖೆ ಅಧಿಕಾರಿಗಳ ಜತೆ ಘಟಕಕ್ಕೆ ತೆರಳಿ ಪರಿಶೀಲಿಸಿ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಘಟಕ ಬಂದ್‌ ಮಾಡಿಸಲಾಗಿದೆ ಎಂದರು.