ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 14 ಕೋಟಿ ರು. ಅವ್ಯವಹಾರ:ತನಿಖೆಗೆ ಅನುಮತಿಸದ ಸರ್ಕಾರದ ವಿರುದ್ಧ ರೈತರಿಂದ ಪ್ರತಿಭಟನೆ

| Published : Feb 21 2025, 11:46 PM IST

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 14 ಕೋಟಿ ರು. ಅವ್ಯವಹಾರ:ತನಿಖೆಗೆ ಅನುಮತಿಸದ ಸರ್ಕಾರದ ವಿರುದ್ಧ ರೈತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಾವರದ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-22ರ ಅವಧಿಯಲ್ಲಿ 14 ಕೋಟಿ ರು.ಗಳ ಅವ್ಯವಹಾರ ನಡೆಸಲಾಗಿರುವ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಫೆ.22ರಂದು ಬೆಳಗ್ಗೆ 9.30ರಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗೇಟಿನ ಬಳಿಯಲ್ಲಿ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಬ್ರಹ್ಮಾವರದ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-22ರ ಅವಧಿಯಲ್ಲಿ 14 ಕೋಟಿ ರು.ಗಳ ಅವ್ಯವಹಾರ ನಡೆಸಲಾಗಿರುವ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಫೆ.22ರಂದು ಬೆಳಗ್ಗೆ 9.30ರಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗೇಟಿನ ಬಳಿಯಲ್ಲಿ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ.ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಮಾತನಾಡಿ, ಈ ಧರಣಿ ಸತ್ಯಾಗ್ರಹದಲ್ಲಿ ಪ್ರತಿದಿನ ಕನಿಷ್ಟ 25 ಜನರಂತೆ, ಮೂರು ತಿಂಗಳು ಅಹೋರಾತ್ರಿ ಧರಣಿ ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದರು.ದ‌‌‌.ಕ. ಜಿಲ್ಲಾ ಸಕ್ಕರೆ ಕಾರ್ಖಾನೆಯ ಸದಸ್ಯರು, ವಿವಿಧ ರೈತಪರ ಸಂಘಟನೆಗಳು, ಸಹಕಾರಿ ಕ್ಷೇತ್ರದ ಸಹಕಾರಿ ಪ್ರಮುಖರು, ಪಂಚಾಯತ್ ರಾಜ್ ಒಕ್ಕೂಟದ ಪ್ರತಿನಿಧಿಗಳು, ಪ್ರಾಂತೀಯ ರೈತ ಸಂಘವು ಬೆಂಬಲಿಸಿ, ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ನ್ಯಾಯಾಲಯದ ಆದೇಶದಂತೆ ಬ್ರಹ್ಮಾವರ ಠಾಣೆಯಲ್ಲಿ 2023ರ ಅ.25ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಅಧಿಕಾರಿಗಳೇ ಆರೋಪಿಗಳಾಗಿರುವುದರಿಂದ ತನಿಖೆ ನಡೆಸಲು ಸರ್ಕಾರದ ಪೂರ್ವಾನುಮತಿ ಬೇಕಾಗಿದ್ದು, 2024ರ ಆ.14ರಂದು ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯಿಂದ ಅನುಮತಿ ಕೋರಿದ್ದರೂ ಈ ತನಕ ಸರ್ಕಾರ ಅನುಮತಿ ನೀಡದೇ ಆರೋಪಿಗಳ ಬಗ್ಗೆ ಮೃದುಧೋರಣೆ ತೋರುತ್ತಿದೆ. ಈ ಮೂಲಕ ಹಗರ‍ಣವನ್ನು ಮುಚ್ಚಿಹಾಕಲಾಗುತ್ತಿದೆ ಎಂದವರು ಕಿಡಿಕಾರಿದರು.ಪ್ರತಿ ಹಂತದಲ್ಲೂ ತನಿಖೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಅನ್ಯಾಯಕ್ಕೆ ಪ್ರತಿರೋಧ ತೋರಿಸುವ ನಿಟ್ಟಿನಲ್ಲಿ ಮತ್ತು ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿರುವವರನ್ನು ಸಮರ್ಪಕವಾದ ತನಿಖೆಗೆ ಒಳಪಡಿಸಿ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಈ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಂಬದಕೋಣೆ ಸಹಕಾರಿ ಪತ್ತಿನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರೈತ ಮುಖಂಡರಾದ ಸದಾನಂದ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಭೋಜ ಕುಲಾಲ್ ಉಪಸ್ಥಿತರಿದ್ದರು.