ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನಾಚರಣೆ ಅಂಗವಾಗಿ ವಿಶ್ವ ಹಿಂದೂ ಪರಿಷಷ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ೧೪ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ.೩೧ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ತಿಳಿಸಿದ್ದಾರೆ.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂದರ್ಭ ಮೊಸರು ಕುಡಿಕೆ, ಶೋಭಾಯಾತ್ರೆ ಉತ್ಸವ, ಮುಕ್ತ ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ, ಪುತ್ತೂರು ಮುದ್ದುಕೃಷ್ಣ, ಉದ್ದಕಂಬ, ವೀರ ಹಿಂದು ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಸಂಚಾಲಕ ಪುತ್ತೂರು ಉಮೇಶ್ ನಾಯಕ್ ಮಾತನಾಡಿ ಸಂಜೆ ೭ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೇಂದ್ರ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಮಾತನಾಡಿ ಮಧ್ಯಾಹ್ನ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಲ್ಲಿ ಪುತ್ತೂರು ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ ಮತ್ತು ಹಿಂದೂ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹನ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ. ವಿ.ಹಿಂ.ಪ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಧ್ವಜ ಹಸ್ತಾಂತರಿಸುವರು. ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಶೋಭಾಯಾತ್ರೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ದಿ. ಗುರುಕೃಷ್ಣ ಸುಳ್ಯ ಇವರ ಸ್ಮರಣಾರ್ಥ ವೀರ ಯುವಕರಿಂದ ಸಾಹಸಮಯ ಅಟ್ಟಿಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ, ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ವಹಿಸಲಿದ್ದಾರೆ. ವಿಹಿಂಪ ಮಂಗಳೂರು ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೈದ್ಯ ಡಾ. ಗೋಪಿನಾಥ್ ಪೈ, ಅಶೋಕ್ ಬ್ರಹ್ಮನಗರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷೆ ವಿ. ಪ್ರಭಾವತಿ, ವಿಹಿಂಪ ಪುತ್ತೂರು ಅಧ್ಯಕ್ಷ ದಾಮೋದರ ಪಾಟಾಳಿ, ಸಮಿತಿ ಕಾರ್ಯದರ್ಶಿ ಜಗದೀಶ್ ನೀರ್ಪಾಜೆ, ಸಹಕಾರ್ಯದರ್ಶಿ ಶರಾವತಿ ರವಿನಾರಾಯಣ ಹಾಜರಿದ್ದರು.