ಸಾರಾಂಶ
ಮ್ಯೆಸೂರು ದಸರಾ ಉತ್ಸವದ ಮಾದರಿಯಲ್ಲಿ ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ಧೂರಿಯಾಗಿ ತುಮಕೂರು ದಸರಾ ಉತ್ಸವವನ್ನು ಆಚರಿಸಲು ಉದ್ದೇಶಿಸಲಾಗಿದ್ದು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ತುಮಕೂರಿನಲ್ಲಿ ತುಮಕೂರು ದಸರಾ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಮ್ಯೆಸೂರು ದಸರಾ ಉತ್ಸವದ ಮಾದರಿಯಲ್ಲಿ ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ಧೂರಿಯಾಗಿ ತುಮಕೂರು ದಸರಾ ಉತ್ಸವವನ್ನು ಆಚರಿಸಲು ಉದ್ದೇಶಿಸಲಾಗಿದ್ದು, ದಸರಾ ಉತ್ಸವದ ಯಶಸ್ವಿಗೆ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತುಮಕೂರು ದಸರಾ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತದ ವತಿಯಿಂದ ಮೊದಲ ಬಾರಿಗೆ ತುಮಕೂರು ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 10 ರಿಂದ 12ರವರೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ನವೀನ ರೀತಿಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಸರಾಗೆ ಮೆರುಗು ತರಬೇಕು. ಶಿಷ್ಟಾಚಾರದಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಿ ದಸರಾ ಮಹೋತ್ಸವವನ್ನು ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.ವಿಜಯ ದಶಮಿ ದಿನದಂದು ನಗರದ ಟೌನ್ ಹಾಲ್ ವೃತ್ತದಿಂದ ಜೂನಿಯರ್ ಕಾಲೇಜು ಮೈದಾನದವರೆಗೂ ದಸರಾ ಮೆರವಣಿಗೆ ಆಯೋಜಿಸಬೇಕು. ಮೆರವಣಿಗೆಯಲ್ಲಿ ಅಲಂಕೃತ ಆನೆಗಳನ್ನು ಬಳಸಿಕೊಳ್ಳಬೇಕು. ದಸರಾದಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆನೆಗಳ ಪಟ್ಟಿ ಸಿದ್ಧಪಡಿಸಬೇಕೆಂದು ಮುಜರಾಯಿ ಹಾಗೂ ಅರಣ್ಯ ಇಲಾಖೆಗೆ ಸೂಚಿಸಿದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಏರ್ಪಡಿಸಲು ನಿರ್ದೇಶಿಸಿದರು. ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್ 10 ರಿಂದ 12ರವರೆಗೆ ಪ್ರತಿದಿನ ಸಂಜೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಉತ್ಸವದಲ್ಲಿ ರೈತ ದಸರಾ, ಯುವ, ಚಿಣ್ಣರ, ಮಹಿಳಾ, ಯೋಗ, ಕುಸ್ತಿ ದಸರಾ, ಯುವ ಸಂಭ್ರಮ, ಮತ್ಸ್ಯ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದರು. ಉತ್ಸವದ ಅಂಗವಾಗಿ ನಗರದ ಬಟವಾಡಿಯಿಂದ ಗುಬ್ಬಿ ಗೇಟ್‌ವರೆಗೆ, ಬಿ.ಜಿ.ಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಾಗೂ ನಗರದ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ, ಜೂನಿಯರ್ ಕಾಲೇಜು ಮೈದಾನದಲ್ಲಿ ಸುಸಜ್ಜಿತ ವೇದಿಕೆ ನಿರ್ಮಾಣ, ಕಾಲೇಜು ಆವರಣದಲ್ಲಿ ವಸ್ತು ಪ್ರದರ್ಶನ ಮಳಿಗೆ ನಿರ್ಮಾಣ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ದಸರಾ ಕ್ರೀಡಾಕೂಟದಲ್ಲಿ ಕಬ್ಬಡಿ, ಖೋಖೋ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಯುವ ಸಮೂಹವನ್ನು ಆಕರ್ಷಿಸುವ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವಂತೆ ಸೂಚಿಸಿದರು. ತುಮಕೂರು ದಸರಾ ಪ್ರಯುಕ್ತ ತುಮಕೂರು ನಗರದ ಅಮಾನಿಕೆರೆಯ ಆವರಣದಲ್ಲಿ ತೆಪ್ಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬೋಟಿಂಗ್, ಸ್ಫೀಡ್ ಬೋಟಿಂಗ್, ಮೋಟರ್ ಬೋಟಿಂಗ್, ಪೆಡ್ಲಿಂಗ್ ಬೋಟಿಂಗ್ ಹಾಗೂ ಫ್ಯಾಮಿಲಿ ಬೋಟಿಂಗ್ ವ್ಯವಸ್ಥೆಗಳನ್ನು ಮಾಡಬೇಕೆಂದು ಸೂಚಿಸಿದರು. ದಸರಾ ಅಂಗವಾಗಿ ಸಿಡಿಮದ್ದು ಪ್ರದರ್ಶನವನ್ನು ನಗರದ ಅಮಾನಿಕೆರೆ ಆವರಣದಲ್ಲಿ ಏರ್ಪಡಿಸುವ ಸಂಬಂಧ ಅಗತ್ಯ ಕ್ರಮವಹಿಸಿ ಇದರ ಪೂರ್ಣ ಮೇಲ್ವಿಚಾರಣೆಯನ್ನು ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ವಹಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ದಸರಾ ಆಚರಣೆ ಸಂಬಂಧ ಅಗತ್ಯ ಸಲಹೆಗಳನ್ನು ನೀಡಿದರು.ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲಾ ಇಲಾಖೆಗಳು ತುಮಕೂರು ದಸರಾ ಆಚರಣೆ ಸಂಬಂಧ ತಮ್ಮ ಇಲಾಖೆಗೆ ವಹಿಸಿರುವ ಕಾರ್ಯಸೂಚಿಗಳನ್ನು ಇನ್ನೆರಡು ದಿನಗಳೊಳಗಾಗಿ ಒದಗಿಸುವಂತೆ ಸೂಚನೆ ನೀಡಿದರು.ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಜಿಪಂ ಯೋಜನಾಧಿಕಾರಿ ನಾರಾಯಣಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ, ಡಿಡಿಪಿಐ ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ, ಜಂಟಿ ಕೃಷಿ ನಿರ್ದೇಶಕ ರಮೇಶ್, ಜಿಲ್ಲಾ ಉದ್ಯೋಗಾಧಿಕಾರಿ ಕಿರಣ್ ಕುಮಾರ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಿ.ರಂಗರಾಜು ಹಾಜರಿದ್ದರು.ಕಲಾತಂಡದಿಂದ ಸಾಂಸ್ಕೃತಿಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿ
ಜಿಲ್ಲೆಯಲ್ಲಿ ಪ್ರಚಲಿತವಿರುವ ಕಲೆ, ಕಲಾವಿದರು, ಕಲಾತಂಡಗಳನ್ನು ಗುರುತಿಸಿ ಅವರಿಂದ ಸಾಂಸ್ಕೃತಿಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಜಾನಪದ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿಗೆಬ ಡೀಸಿ ಶುಭ ಕಲ್ಯಾಣ್ ಸೂಚಿಸಿದರು.