ಆ.31ರಂದು ನಿಟ್ಟೆ ವಿವಿಯ 14ನೇ ಘಟಿಕೋತ್ಸವ

| Published : Aug 29 2024, 12:58 AM IST

ಸಾರಾಂಶ

ನಿಟ್ಟೆ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ ಆ. 31ರಂದು ನಿಟ್ಟೆಯ ಎನ್‌ಎಂಎಎಐಟಿಯ ಸದಾನಂದ ಸಭಾಂಗಣದಲ್ಲಿ ನಡೆಯಲಿದೆ. ಒಟ್ಟು 311 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಆಫ್ ಕ್ಯಾಂಪಸ್‌ನ 14ನೇ ವಾರ್ಷಿಕ ಘಟಿಕೋತ್ಸವ ಆ.31ರಂದು ಬೆಳಗ್ಗೆ 10.30ರಿಂದ ನಿಟ್ಟೆಯ ಎನ್‌ಎಂಎಎಐಟಿಯ ಸದಾನಂದ ಸಭಾಂಗಣದಲ್ಲಿ ನಡೆಯಲಿದೆ.

ಈ ಬಗ್ಗೆ ಸಂಸ್ಥೆಯ ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.

ಘಟಿಕೋತ್ಸವದ ಅಧ್ಯಕ್ಷತೆಯನ್ನು ನಿಟ್ಟೆ ವಿವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರು ವಹಿಸಲಿದ್ದು, ಶ್ರೀರಾಮ್‌ ಫೈನಾನ್ಸ್‌ ಕಂ.ಲಿ.ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ್ ಗೋವಿಂದ್ ರೇವಣ್ಕರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ನಿಟ್ಟೆ ಆಸ್ಪತ್ರೆ ನಿರ್ವಹಣಾ ಸಹಕುಲಪತಿ ಪ್ರೊ.ಡಾ.ಎಂ. ಶಾಂತಾರಾಮ ಶೆಟ್ಟಿ ಮತ್ತು ಆಡಳಿತ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಉಪಸ್ಥಿತರಿರುತ್ತಾರೆ.

ಈ ಘಟಿಕೋತ್ಸವದಲ್ಲಿ ಒಟ್ಟು 311 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಅವರಲ್ಲಿ 29 ಮಂದಿ ಮಾಸ್ಟರ್ ಆಪ್ ಟೆಕ್ನಾಲಜಿ, 120 ಮಂದಿ ಮಾಸ್ಚರ್ ಆಫ್ ಕಂಪ್ಯೂಟರ್ ಮತ್ತು 162 ಮಾಸ್ಟರ್ ಅಫ್ ಬಿಸಿನೆಟ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿಗಳ‍ಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ನಿಟ್ಟೆ ಆಫ್ ಕ್ಯಾಂಪಸ್‌ ಸೆಂಟರ್‌ನ ಪ್ರಥಮ ತಂಡದ ವಿದ್ಯಾರ್ಥಿಗಳಾಗಿದ್ದಾರೆ.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 3 ವಿದ್ಯಾರ್ಥಿ ಚಿನ್ನದ ಪದಕ ಮತ್ತು 14 ಮೆರಿಟ್ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುತ್ತದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿಟ್ಟೆಯ ವಿವಿಯ ಕುಲಸಚಿವ ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೋ. ಪ್ರಸಾದ್ ಬಿ.ಶೆಟ್ಟಿ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ ಮುಗೇರಾಯ ಮತ್ತು ಇತರ ಪ್ರಮುಖರಾದ ಡಾ.ನಿರಂಜನ್ ಚಿಪ್ಳೊಂಕರ್ ಮತ್ತು ಪ್ರೊ. ಸುಧೀರ್ ಉಪಸ್ಥಿತರಿದ್ದರು.

3 ಕ್ಯಾಂಪಸ್, 36 ಸಂಸ್ಥೆ, 25,000 ವಿದ್ಯಾರ್ಥಿಗಳು: ನಿಟ್ಟೆ ಶಿಕ್ಷಣ ಸಂಸ್ಥೆಗಳು ಪ್ರಸಿದ್ಧ ಸುಪ್ರೀಂಕೋರ್ಟ್ ನ್ಯಾಯಾಧೀಶ, ಸಂಸತ್ತಿನ ಮಾಜಿ ಸ್ವೀಕರ್ ಜಸ್ಟೀಸ್ ಕೆ. ಎಸ್. ಹೆಗ್ಡೆ ಅವರಿಂದ ಸ್ಥಾಪಿಸಲ್ಪಟ್ಟಿತು. ಸಂಸ್ಥೆಯು ಈಗ ನಿಟ್ಟೆ, ಮಂಗಳೂರು ಮತ್ತು ಬೆಂಗಳೂರುಗಳಲ್ಲಿ 3 ವಿವಿ ಕ್ಯಾಂಪನ್ ಗಳ‍ನ್ನು ಹೊಂದಿದೆ. ಈ ಕ್ಯಾಂಪಸ್‌ ಗಳಲ್ಲಿರುವ 36 ಸಂಸ್ಥೆಗಳಲ್ಲಿ ಪ್ರಸ್ತುತ ಸುಮಾರು 25, 000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

2008ರಲ್ಲಿ ಸ್ಥಾಪನೆಯಾದ ನಿಟ್ಟೆ ವಿವಿಯು, ಎನ್‌ಎಎಸಿಯಿಂದ ಎ+, ಎನ್‌ಐಆರ್‌ಎಫ್‌ನಿಂದ ದೇಶದ 1,100 ವಿವಿ ಗಳ ಪೈಕಿ 66ನೇ ಸ್ಥಾನ ಪಡೆದಿದೆ. 15 ಇಂಜಿನಿಯರಿಂಗ್ ವಿಭಾಗಗಳನ್ನು ಹೊಂದಿದ್ದು 277ಕ್ಕೂ ಹೆಚ್ಚು ಕಂಪೆನಿಗಳು ಕ್ಯಾಂಪಸ್ ಆಯ್ಕೆಗಾಗಿ ಬರುತ್ತವೆ. ಕಳೆದ ಸಾಲಿನಲ್ಲಿ 856 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಆಯ್ಕೆಯಾಗಿದ್ದಾರೆ.

ಅಲ್ಲದೇ ನಿಟ್ಟೆ ವಿವಿಯ 21 ಗ್ರಾಮೀಣ ಆರೋಗ್ಯ ಕೇಂದ್ರ ಮತ್ತು 2 ಆಸ್ಪತ್ರೆಗ‍ಳನ್ನು ನಿರ್ವಹಿಸುತಿದ್ದು, ಕರಾವಳಿಯ 4 ಜಿಲ್ಲೆಗಳಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.