ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ 15 ಸೂತ್ರ ಸಿದ್ಧ

| Published : Dec 05 2023, 01:30 AM IST

ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ 15 ಸೂತ್ರ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಏನಿದು 15 ಅಂಶಗಳ ಯೋಜನೆ?: ಎಸ್ಸೆಸ್ಸೆಲ್ಸಿ ಸುಧಾರಣೆಗೆ ರೂಪಿಸಿರುವ 15 ಅಂಶಗಳ ಸೂತ್ರದಲ್ಲಿ ಮೊದಲನೆಯದು ಜಿಲ್ಲಾಧಿಕಾರಿ, ಜಿಪಂ ಸಿಇಒ , ಎಸ್ಪಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದು, ಫಲಿತಾಂಶ ಸುಧಾರಣೆಗೆ ಹಾಕಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಮತ್ತು ಅದನ್ನು ಮೇಲುಸ್ತುವಾರಿ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಜೊತೆಗೆ ತಾಲೂಕುವಾರು ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಮಾರ್ಗದರ್ಶನ ನೀಡಲಾಗಿದೆ.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿಕ್ಷಣ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳಪೆ ಸಾಧನೆ ನಿವಾರಣೆಗೆ ಶಿಕ್ಷಣ ಇಲಾಖೆ ಎಚ್ಚೆತ್ತಿದೆ. ಫಲಿತಾಂಶದಲ್ಲಿ ತಳಮಟ್ಟ ಕಂಡಿರುವ ಜಿಲ್ಲೆಯನ್ನು 10ರೊಳಗಿನ ಸ್ಥಾನಕ್ಕೆ ತರಲು ನಿರಂತರ ಕಲಿಕೆ, ಗುಣಮಟ್ಟದ ಶಿಕ್ಷಣ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮುಂದಾಗಿದ್ದು, 15 ಅಂಶಗಳ ಸೂತ್ರಗಳ ಯೋಜನೆ ಸಿದ್ದಪಡಿಸಿದೆ. ಕಳೆದ ಕೆಲ ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸಾಧನೆ ನೆಲಮುಖವಾಗಿದೆ. ಹೀಗಾಗಿ ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಆಲೋಚಿಸಿದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಶಿಕ್ಷಣ ಕ್ಷೇತ್ರದಲ್ಲಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸಿದ್ಧಪಡಿಸಿ ಯಥಾವತ್ತು ಜಾರಿಗೆ ತರುತ್ತಿದೆ. ಏನಿದು 15 ಅಂಶಗಳ ಯೋಜನೆ?:

ಎಸ್ಸೆಸ್ಸೆಲ್ಸಿ ಸುಧಾರಣೆಗೆ ರೂಪಿಸಿರುವ 15 ಅಂಶಗಳ ಸೂತ್ರದಲ್ಲಿ ಮೊದಲನೆಯದು ಜಿಲ್ಲಾಧಿಕಾರಿ, ಜಿಪಂ ಸಿಇಒ , ಎಸ್ಪಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದು, ಫಲಿತಾಂಶ ಸುಧಾರಣೆಗೆ ಹಾಕಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಮತ್ತು ಅದನ್ನು ಮೇಲುಸ್ತುವಾರಿ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಜೊತೆಗೆ ತಾಲೂಕುವಾರು ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಮಾರ್ಗದರ್ಶನ ನೀಡಲಾಗಿದೆ. ತಾಯಂದಿರ ಸಭೆ: ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ತಾಯಂದಿರ ಸಭೆ ನಡೆಸಿ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆಯ ಬಗ್ಗೆ ಗಮನವಹಿಸಲು ಮಾರ್ಗದರ್ಶನ ಮಾಡಲಾಗುತ್ತಿದೆ. ಅದೇ ರೀತಿ ತಿಂಗಳಿಗೊಮ್ಮೆ ಪೋಷಕರ ಸಭೆ ಕರೆದು ಪೋಷಕರ ಕರ್ತವ್ಯ ಮತ್ತು ಜವಬ್ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ.ವಿಷಯವಾರು ಶಿಕ್ಷಕರ ವೇದಿಕೆ: ಜಿಲ್ಲಾ ಮಟ್ಟದಲ್ಲಿ ಪ್ರತಿ ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಆಯ್ಕೆಮಾಡಿ ಎಸ್ಸೆಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗಿದೆ. ವಿಷಯವಾರು ಪ್ರಶ್ನೆಪತ್ರಿಕೆ ತಯಾರಿಕೆ: ಪ್ರತಿ ತಾಲೂಕಿನಿಂದ ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಗುರುತಿಸಲಾಗಿದ್ದು, ಅವರಿಂದ ಪ್ರತಿ ವಿಷಯದಲ್ಲಿ 5 ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ, ಈ ಪ್ರಶ್ನೆ ಪತ್ರಿಕೆಗಳನ್ನು ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಬಿಡಿಸಲಾಗುತ್ತಿದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಅತ್ತೀರ್ಣತಾ ಮಟ್ಟಕ್ಕೆ ತರಲು ಈ ಪ್ರಯತ್ನ ಮಾಡಲಾಗುತ್ತಿದೆ. ಉರ್ದು ಶಾಲೆಯಲ್ಲಿ ಫಲಿತಾಂಶ ಸುಧಾರಣೆಗೆ ಕ್ರಮ: ಕಳೆದ ಸಾಲಿನಲ್ಲಿ ಉರ್ದು ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ಫಲಿತಾಂಶ ಕುಂಠಿತವಾಗಿದ್ದು, ಈ ಸಂಬಂಧ ಈ ಬಾರಿ ಈ ಎರಡು ವಿಷಯದಲ್ಲಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಭಾಷಾ ಶಿಕ್ಷಕರಿಗೆ ಸಂಪನ್ಮೂಲ ಶಿಕ್ಷಕರಿಂದ ಕಾರ್ಯಾಗಾರಗಳನ್ನು ಏರ್ಪಡಿಸ ಫಲಿತಾಂಶವನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ.

ಕೋರ್‌ ವಿಷಯಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ:

ಗ್ರಾಮಾಂತರ ಹಾಗೂ ನಗರಶಾಲೆಗಳಲ್ಲಿ ಇಂಗ್ಲಿಷ್‌ ಭಾಷೆ ಹಾಗೂ ಕೋರ್‌ ವಿಷಯಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ನಡೆಸಿ ಪರೀಕ್ಷೆಗೆ ಸಿದ್ಧಗೊಳಿಸುವಲ್ಲಿ ತರಬೇತಿ ನಡೆಸಲಾಗುತ್ತಿದೆ.

ದತ್ತು ಅಧಿಕಾರಿಗಳ ನೇಮಕ: ಕಳೆದ ಬಾರಿ ಪರೀಕ್ಷೆಯಲ್ಲಿ ಸಿ ಗ್ರೇಡ್‌ ಬಂದಿರುವ ಶಾಲೆಗಳಿಗೆ ಶೈಕ್ಷಣಿಕ ಮಾರ್ಗದರ್ಶನ, ಮೇಲುಸ್ತುವಾರಿ ಮಾಡಲು ಉಪನಿರ್ದೇಶಕರ ಕಚೇರಿ ಮತ್ತು ಡಯಟ್‌ನ ಎ ಮತ್ತು ಬಿ ದರ್ಜೆಯ ಎಲ್ಲ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ. ನಿರಂತರ ಘಟಕ ಪರೀಕ್ಷೆಗಳು: ಪ್ರತಿ ವಿಷಯದಲ್ಲಿ ಪ್ರತಿ ಘಟಕಗಳ ಕಲಿಕೆ ನಂತರ ಪರೀಕ್ಷೆಗಳನ್ನು ನಡೆಸಿ ಮೌಲ್ಯ ಮಾಪನ ಮಾಡಿ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಿಸಿ ಕಲಿಕಾ ಕೊರತೆ ಎದುರಿಸುವ ಅಂಶಗಳಿಗೆ ಪುನರ್‌ ಬೋಧನೆ ಮಾಡಿ ಕಲಿಕಾಂಶಗಳನ್ನು ಕಲಿಸುವ ಬಗ್ಗೆ ಕ್ರಮವಹಿಸುವಂತೆ ಯೋಜಿಸಿದೆ.ಸಂಪನ್ಮೂಲ ಶಿಕ್ಷಕರ ನಿಯೋಜನೆ: ಕಲಿಕೆಯಲ್ಲಿ ಅತೀ ಕಡಿಮೆ ಸಾಧನೆ ಮಾಡಿದ ಶಾಲೆಗಳಲ್ಲಿ ಕಡಿಮೆ ಫಲಿತಾಂಶ ಪಡೆದ ವಿಷಯಗಳ ಪಟ್ಟಿ ಮಾಡಿ ವಿಷಯ ಸಂಪನ್ಮೂಲ ಶಿಕ್ಷಕರನ್ನು ಪ್ರತಿ ಶನಿವಾರ ಅಂತಹ ಶಾಲೆಗಳಿಗೆ ನಿಯೋಜಿಸಿ ಫಲಿತಾಂಶ ಉತ್ತಮಪಡಿಸಲು ಕ್ರಮವಹಿಸಲಾಗುತ್ತಿದೆ. ಅತಿಥಿ- ಗೌರವ ಶಿಕ್ಷಕರಿಗೆ ತರಬೇತಿ:

ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೌರವ ಶಿಕ್ಷಕರಿಗೆ ಫಲಿತಾಂಶ ಉತ್ತಮಪಡಿಸುವ ಸಂಬಂಧ ತಾಲೂಕುವಾರು ನುರಿತ ಸಂಪನ್ಮೂಲ ಶಿಕ್ಷಕರಿಂದ ತರಬೇತಿ ನೀಡುವ ಕಾರ್ಯಕ್ರಮ ನಡೆಸಲಾಗಿದೆ.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಸಾಹಿತ್ಯ: ತರಗತಿ ಪರೀಕ್ಷೆಗಳಲ್ಲಿ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಕಡಿಮೆ ಸಾಧನೆ ತೋರಿದ ವಿದ್ಯಾರ್ಥಿಗಳು ಕನಿಷ್ಠ ಅಂಕ ಪಡೆದು ಉತ್ತೀರ್ಣರಾಗಲು ಅನುಕೂಲ ಆಗುವಂತೆ 60 ಅಂಕಗಳಿಗೆ ಪೂರಕ ಸಾಹಿತ್ಯ ಸಿದ್ಧಪಡಿಸಿ, ಮಕ್ಕಳ ವೈಯಕ್ತಿಕ ಆಸಕ್ತಿ ಮತ್ತು ಸಾಮರ್ಥ್ಯ ಆಧರಿಸಿ ವಿಷಯವನ್ನು ಮಕ್ಕಳಿಗೆ ಕಲಿಸಲು ಪೂರಕ ಸಾಹಿತ್ಯವನ್ನು ಬಳಸಲು ಶೈಕ್ಷಣಿಕ ವರ್ಷದ ಆರಂಭದಿಂದಲೇ ಕ್ರಮ ವಹಿಸಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ:

ಗ್ರಾಮ ವಿಕಾಸ ಸೊಸೈಟಿ ಬೆಂಗಳೂರು ವತಿಯಿಂದ ಧನಾತ್ಮಕ ಚಿಂತನೆಯೊಂದಿಗೆ ಕಲಿಕೆಯನ್ನು ಸುಲಭಗೊಳಿಸುವುದು ಎಂಬ ವಿಷಯದ ಕುರಿತು ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರಿಗೆ ಎರಡು ದಿನಗಳ ತರಬೇತಿ ನೀಡಲಾಗಿದೆ.

ಗುರಿ ನಿಗದಿಪಡಿಸುವುದು:

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆಗೆ ಪ್ರತಿ ವಿದ್ಯಾರ್ಥಿಯ ಹಾಗೂ ಶಾಲೆ ಫಲಿತಾಂಶದ ಗುರಿ ನಿಗದಿಪಡಿಸಿ, ಅದನ್ನು ಸಾಧಿಸಲು ಮುಖ್ಯಶಿಕ್ಷಕರ ಸಭೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ.

ಜಿಲ್ಲಾ ಹಂತದ ಸಹಾಯವಾಣಿ ಕಾರ್ಯಕ್ರಮ:

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳ ಕಲಿಕಾ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ನೀಡಲು ಪ್ರತಿದಿನ ಒಂದು ವಿಷಯದಂತೆ ಜಿಲ್ಲಾ ಹಂತದ ಸಹಾಯವಾಣಿ ಕಾರ್ಯಕ್ರಮವನ್ನು ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಉಪನಿರ್ದೇಶಕರ ಕಚೇರಿ ವತಿಯಿಂದ ನಡೆಸಲು ಯೋಜಿಸಲಾಗಿದೆ.

- - - ಬಾಕ್ಸ್‌ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸಾಧನೆ ಕುಸಿತ ಕಂಡಿತ್ತು. ಅಂತೆಯೇ, ಕಳೆದ ಕೆಲ ತಿಂಗಳಿನಿಂದ ಫಲಿತಾಂಶ ಸುಧಾರಣೆ ಕ್ರಮವಾಗಿ 15 ನಾನಾ ಅಂಶಗಳಿರುವ ಕಾರ್ಯಕ್ರಮ ಸಿದ್ಧಪಡಿಸಿ ಜಾರಿಗೆ ತರುತ್ತಿದ್ದೇವೆ. ಶಿಕ್ಷಕರೂ ಆಸಕ್ತಿಯಿಂದ ಫಲಿತಾಂಶ ಸುಧಾರಣೆಯ ಕಾರ್ಯದಲ್ಲಿ ತೊಡಗಿದ್ದಾರೆ

- ಸಿ.ಆರ್‌.ಪರಮೇಶ್ವರಪ್ಪ, ಡಿಡಿಪಿಐ, ಶಿವಮೊಗ್ಗ