15 ಮೀ. ಕೆಳಸೇತುವೆಗಾಗಿ ಹಳೇ ಕುಂದುವಾಡ ಬ‍ಳಿ ರಸ್ತೆ ತಡೆ

| Published : Jan 10 2025, 12:48 AM IST

15 ಮೀ. ಕೆಳಸೇತುವೆಗಾಗಿ ಹಳೇ ಕುಂದುವಾಡ ಬ‍ಳಿ ರಸ್ತೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಬನೂರು, ಶಿರಮಗೊಂಡನಹಳ್ಳಿ ಕ್ರಾಸ್ ಬಳಿ ನಿರ್ಮಿಸಿರುವ ಮಾದರಿಯಲ್ಲಿ 15 ಮೀಟರ್‌ನಷ್ಟು ನೇರ ಕೆಳಸೇತುವೆ ನಿರ್ಮಿಸಿ, ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕಾಮಗಾರಿ ಕೈಗೊಳ್ಳುವಂತೆ ಹಳೇ ಕುಂದುವಾಡ ಬಳಿ ನೂರಾರು ಗ್ರಾಮಸ್ಥರು, ಹೌಸಿಂಗ್ ಬೋರ್ಡ್ ಕಾಲನಿ ನಿವಾಸಿಗಳು ಗುರುವಾರ ರಸ್ತೆ ತಡೆ ನಡೆಸಿದರು. ಈ ವೇಳೆ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.

- 50ಕ್ಕೂ ಹೆಚ್ಚು ಮಂದಿ ಪೊಲೀಸ್‌ ವಶ । ಶಿರಮಗೊಂಡನಹಳ್ಳಿ ಕ್ರಾಸ್‌, ಶಾಬನೂರು ಬಳಿಯಂತೆ ಮಾದರಿ ಕೆಳಸೇತುವೆ ನಿರ್ಮಾಣಕ್ಕೆ ಪಟ್ಟು

- ಹಳೇ ಕುಂದುವಾಡ ಗ್ರಾಮಸ್ಥರು, ತುಂಗಭದ್ರಾ ಬಡಾವಣೆ 300ಕ್ಕೂ ಹೆಚ್ಚು ನಿವಾಸಿಗಳಿಂದ ಸರ್ಕಾರ-ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಬನೂರು, ಶಿರಮಗೊಂಡನಹಳ್ಳಿ ಕ್ರಾಸ್ ಬಳಿ ನಿರ್ಮಿಸಿರುವ ಮಾದರಿಯಲ್ಲಿ 15 ಮೀಟರ್‌ನಷ್ಟು ನೇರ ಕೆಳಸೇತುವೆ ನಿರ್ಮಿಸಿ, ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕಾಮಗಾರಿ ಕೈಗೊಳ್ಳುವಂತೆ ಹಳೇ ಕುಂದುವಾಡ ಬಳಿ ನೂರಾರು ಗ್ರಾಮಸ್ಥರು, ಹೌಸಿಂಗ್ ಬೋರ್ಡ್ ಕಾಲನಿ ನಿವಾಸಿಗಳು ಗುರುವಾರ ರಸ್ತೆ ತಡೆ ನಡೆಸಿದರು. ಈ ವೇಳೆ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ಹೊರವಲಯದ ಹಳೇ ಕುಂದುವಾಡ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 6 ಪಥದ ರಸ್ತೆ, ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ವಿಷಯ ತಿಳಿದು ಹಳೇ ಕುಂದುವಾಡ ಗ್ರಾಮಸ್ಥರು, ಹೌಸಿಂಗ್ ಬೋರ್ಡ್‌ನ ತುಂಗಭದ್ರಾ ಬಡಾವಣೆಯ 300ಕ್ಕೂ ಹೆಚ್ಚು ನಿವಾಸಿಗಳು ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆ ನಡೆಸಿದರು.

ಮೊದಲು ಇಲ್ಲಿ 2 ಅವೈಜ್ಞಾನಿಕ, ಕಿರಿದಾದ ಸೇತುವೆಗಳನ್ನು ನಿರ್ಮಿಸಿ, ಸಮಸ್ಯೆ ಮಾಡಿಟ್ಟಿದ್ದೀರಿ. ಈ ಪೈಕಿ ಒಂದು ಕೆಳಸೇತುವೆ ಇದ್ದೂ ಇಲ್ಲದಂತಾಗಿದೆ. ಮತ್ತೊಂದು ಮೂಲೆಗುಂಪಾಗಿದೆ. ಸಾರ್ವಜನಿಕ ಹಣವನ್ನು ಹೀಗೆ ವ್ಯರ್ಥ ಮಾಡುವ ಬದಲು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯವಸ್ಥಿತ ಕೆಳಸೇತುವೆ ನಿರ್ಮಿಸುವಂತೆ ಪಟ್ಟುಹಿಡಿದು ಕುಳಿದರು.

ಬನ್ನಿಕೋಡು-ಹಳೇ ಕುಂದುವಾಡ ರಸ್ತೆಗಳು ದಾವಣಗೆರೆಯಿಂದ ಹರಿಹರ- ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವಾಹನದಟ್ಟಣೆ ಪ್ರದೇಶ. ಇದೇ ಹೆದ್ದಾರಿ ಪಕ್ಕದಲ್ಲೇ ಹೌಸಿಂಗ್ ಬೋರ್ಡ್‌ ಕಾಲನಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿವೆ. ನ್ಯಾಯಾಧೀಶರ ವಸತಿ ಗೃಹಗಳಿದ್ದು, ಇಲ್ಲಿಯೇ ಜಿಲ್ಲಾ ನ್ಯಾಯಾಲಯ ನಿರ್ಮಾಣವಾಗುತ್ತಿದೆ. ದಿನೇದಿನೇ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ ಇದಾಗಿದೆ ಎಂದರು.

ಶಿರಮಗೊಂಡನಹಳ್ಳಿ ಕ್ರಾಸ್‌, ಶಾಬನೂರು ಗ್ರಾಮದ ಬಳಿ ನಿರ್ಮಿಸಿದಂತೆ ಇಲ್ಲಿಯೂ ಕೆಳಸೇತುವೆ ನಿರ್ಮಿಸಬೇಕು. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಭೆಯೊಂದರಲ್ಲಿ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತಕ್ಕೆ ದೊಡ್ಡ ಸೇತುವೆ ನಿರ್ಮಿಸುವಂತೆ, ಸೇತುವೆ ಯೋಜನೆ ಸಮೇತ ವಿವರಿಸಿದ್ದರೂ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಯಾಕೆ ಅವಸರದಲ್ಲಿ, ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ಕೈಗೊಳ್ಳಲು ಮುಂದಾಗಿದ್ದೀರಿ? ಈಗ ನಮ್ಮನ್ನು ಬಂಧಿಸಿ, ಕೇಸ್ ಮಾಡಿದರೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.

ಒಂದು ಹಂತದಲ್ಲಿ ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆಗೆ ತೀವ್ರ ವಾಗ್ವಾದವೂ ನಡೆಯಿತು. ನೀವು ಸ್ವಲ್ಪ ಹೊತ್ತು ಇದ್ದು, ಇಲ್ಲಿಂದ ಹೋಗುತ್ತೀರಿ. ನಾವು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬಾಳುತ್ತಿರುವವರು. ನಿಮಗೆ ನೈಜಸಮಸ್ಯೆ ಅರ್ಥ ಆಗುತ್ತಿಲ್ಲ. ಒಂದು ಟ್ರ್ಯಾಕ್ಟರ್ ಸಹ ಇಲ್ಲಿ ಕಿಷ್ಕಿಂಧೆಯಂತಹ ಸೇತುವೆಯಡಿ ಹೋಗಲಾಗಲ್ಲ. ಎರಡು ಕಾರು ಏಕಕಾಲಕ್ಕೆ ಸಾಗುವುದಿಲ್ಲ. ಕೆಳಸೇತುವೆ ನಿರ್ಮಿಸುವುದೇ ನಿಜವೆಂದಾಗ, 15 ಮೀಟರ್ ನೇರವಾದ ಸೇತುವೆ ನಿರ್ಮಿಸಲು ಅಡ್ಡಿ ಏನು ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ವಿಷಯ ತಿಳಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಗ್ರಾಮಾಂತರ ವೃತ್ತ ನಿರೀಕ್ಷಕ ಕಿರಣಕುಮಾರ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ 50ಕ್ಕೂ ಹೆಚ್ಚು ಮುಖಂಡರು, ಗ್ರಾಮಸ್ಥರನ್ನು ವಶಕ್ಕೆ ಪಡೆದು, ಜಿಲ್ಲಾ ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದರು. ಪ್ರತಿಭಟನಾಕಾರರನ್ನು ಪೊಲೀಸರ ವಾಹನಗಳಿಗೆ ಎಳೆದು ತುಂಬುತ್ತಿದ್ದಾಗ ಗ್ರಾಮಸ್ಥರು ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಎಚ್.ಎನ್. ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್‌.ಜಿ.ಗಣೇಶಪ್ಪ, ಮುಖಂಡರಾದ ಜೆ.ಮಾರುತಿ, ಎಚ್.ಜಿ.ಮಂಜಪ್ಪ, ಮಾಲತೇಶ, ಜಿಮ್ಮಿ ಹನುಮಂತಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಡಿಎಸ್‌ಎಸ್‌ ಮುಖಂಡ ಕುಂದುವಾಡ ಮಂಜುನಾಥ, ಡಿ.ಜಿ.ಪ್ರಕಾಶ, ಅಣ್ಣಪ್ಪ, ಗದಿಗೆಪ್ಪ, ಯುವ ಪತ್ರಕರ್ತ ಮಧು ನಾಗರಾಜ, ದಯಾನಂದ, ಪ್ರಭು, ಜೆ.ಸಿ.ದೇವರಾಜ, ರಮೇಶ ಅನೇಕರು ಪಾಲ್ಗೊಂಡಿದ್ದರು.

- - -

ಬಾಕ್ಸ್‌ * ಯಾರ ಮೇಲೂ ಕೇಸ್ ಹಾಕಬೇಡಿ ಎಂದ ಸಚಿವ ದಾವಣಗೆರೆಯಲ್ಲಿ ಹಿಂದೆಯೇ ಎನ್‌ಎಚ್ಎಐ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಳೇ ಕುಂದುವಾಡದ ಕೆಳಸೇತುವೆ ಸಮಸ್ಯೆ ಪರಿಹರಿಸಲು ತಾವೇ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ಕೆಚ್ ಹಾಕಿಕೊಟ್ಟಿದ್ದರು. ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಅವರು, ಹಳೇ ಕುಂದುವಾಡ ರೈತರು, ಗ್ರಾಮಸ್ಥರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರ ತಿಳಿದು, ಜನರ ಮೇಲೆ ಯಾವುದೇ ಕೇಸ್‌ ಮಾಡದೇ, ಎಲ್ಲರನ್ನೂ ತಕ್ಷಣ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ದಾವಣಗೆರೆ ಬಂದ ನಂತರ ಸಮಸ್ಯೆ ಬಗ್ಗೆ ಚರ್ಚಿಸುತ್ತೇನೆ. ಯಾರದ್ದೇ ವಿರೋಧ ಮಧ್ಯೆ ಅಲ್ಲಿ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂಬುದಾಗಿ ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದ್ದಾರೆಂದು ಪೊಲೀಸ್ ವಶದಲ್ಲಿದ್ದ ಮುಖಂಡರು ತಿಳಿಸಿದ್ದಾರೆ.

- - - -(ಫೋಟೋ ಇದೆ):