ಕನ್ನಡಪ್ರಭ ವಾರ್ತೆ ಮೇಲುಕೋಟೆ
150 ವಸಂತ ಪೂರೈಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಪೋಷಕರು ಮಕ್ಕಳನ್ನು ಸೇರಿಸಿ ಬಲವರ್ಧನೆ ಮಾಡಬೇಕು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಕರೆ ನೀಡಿದರು.ಮೇಲುಕೋಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಖಾಸಗಿ ಶಾಲೆಗಳ ವ್ಯಾಮೋಹಕ್ಕೊಳಗಾಗಿ ಶಿಕ್ಷಣ ನೀಡಲು ಮಕ್ಕಳಿಗಾಗಿ ಲಕ್ಷಾಂತರ ರು. ಖರ್ಚು ಮಾಡುವ ಬದಲು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿ ತಂದೆತಾಯಿಯ ಕಷ್ಟವನ್ನು ಅರ್ಥಮಾಡಿಕೊಳ್ಳುವಂತೆ ಮಕ್ಕಳನ್ನು ಬೆಳಸಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಜೀವನ ಮೌಲ್ಯವನ್ನು ಕಲಿಸಲಾಗುತ್ತದೆ. ನೀವೇ ನಿಮ್ಮೂರಿನ ಪ್ರತಿಭಾವಂತರನ್ನು ಹೆಚ್ಚುವರಿ ಶಿಕ್ಷಕರಾಗಿ ನೀಡಿ ಸೌಲಭ್ಯಗಳನ್ನು ಹೊಂದಿಸಿ ಸರ್ಕಾರಿ ಶಾಲೆ ಮಾದರಿ ಮಾಡಿ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಇಂದು ರಾಜ್ಯದ ಆಡಳಿತ ಹಿಡಿದಿದ್ದಾರೆ. ಅಧಿಕಾರಿಗಳಾಗಿ ಸಮಾಜದ ಸೇವೆ ಮಾಡುತ್ತಿದ್ದೇವೆ. ಎಲ್ಲದರಲ್ಲೂ ಸರ್ಕಾರಿ ಶಾಲೆ ಮಕ್ಕಳೇ ಮುಂದಿದ್ದಾರೆ. ಆದರೂ ಖಾಸಗಿ ಶಾಲೆಗಳ ಹಿಂದೆ ಬಿದ್ದ ಪೋಷಕರು ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಉಚಿತವಾಗಿ ಶತಮಾನದ ಸರ್ಕಾರಿ ಶಾಲೆ ವಾರ್ಷಿಕೋತ್ಸವ ನಡೆಸುತ್ತಿರುವುದು ಶ್ಲಾಘನೀಯ. ವಿವಿಧ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ, ಉಚಿತ ಪ್ರವಾಸ ಉಚಿತ ಎಲ್.ಕೆ.ಜಿ ಯುಕೆಜಿ ತರಗತಿಗಳು ಬ್ಯಾಗ್, ಐಡಿ ಕಾರ್ಡ್, ಲೇಖನ ಸಾಮಗ್ರಿಗಳು ಹೀಗೆ ಎಲ್ಲವನ್ನೂ ದಶಕಗಳಿಂದ ಸಂಪೂರ್ಣ ಉಚಿತವಾಗಿ ಕೊಡಿಸಲು ಶ್ರಮಿಸುತ್ತಿರುವ ಮುಖ್ಯ ಶಿಕ್ಷಕ ಸಂತಾನರಾಮನ್ ಪರಿಶ್ರಮ ಶ್ಲಾಘನೀಯವಾಗಿದೆ. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ಸ್ಥಾನಾಚಾರ್ಯ ಸಂಪಪ್ ಕುಮಾರನ್ ಮಾತನಾಡಿ, ಶತಮಾನದ ಶಾಲೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕರು ಅರ್ಚಕರು ವ್ಯಾಸಂಗ ಮಾಡಿದ್ದೇವೆ. ಶತಮಾನದ ಶಾಲೆ ನಮ್ಮೂರಿನ ಹೆಮ್ಮೆ. ನಾನೂ ಸೇರಿದಂತೆ ಎಲ್ಲರೂ ಶಾಲಾಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಭಗವದ್ ರಾಮಾನುಜ ರಾಷ್ಟ್ರೀಯ ಸಂಸ್ಕೃತ ಸಂಶೋಧನಾ ಸಂಸ್ಥೆ ಕುಲಸಚಿವ ಡಾ.ಎಸ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಚೆಲುವನಾರಾಯಣಸ್ವಾಮಿ ದೇಗುಲದ ಸ್ಥಾನಾಚಾರ್ಯ ಸಂಪತ್ ಕುಮಾರನ್, ಮುಖ್ಯಶಿಕ್ಷಕ ಸಂತಾನರಾಮನ್, ಎಸ್ಡಿಎಂ ಸಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ನಾಗಮ್ಮ ಮಕ್ಕಳಮನೆ ಅಧ್ಯಕ್ಷ ಚಂದುಭಾರದ್ವಾಜ್, ಉಪಾಧ್ಯಕ್ಷೆ ಶೃತಿ ರಂಗ ನಿರ್ದೇಶಕ ತ ಗಿರೀಶ್, ಮನೋಜ್ ನೀನಾಸಂ ಕಲಾವಿದ ಹನುಮಂತು ಶಾಲೆಯ ಶಿಕ್ಷಕಿಯರಾದ ಪೂರ್ಣಿಮ, ಶೃತಿ ಜಯಂತಿ, ಚಂದ್ರಿಕಾ, ಕವಿತ ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರಿನ ಸೌಜನ್ಯ ಸೇವಾಶ್ರಮದ ಶ್ರೀರಂಗರಾಜನ್, ಶಿಕ್ಷಣ ಪ್ರೇಮಿ ವಕೀಲರಾದ ಅರವಿಂದ ರಾಘವನ್ ಸಹಕಾರ ನೀಡಿದ್ದರು. ರೈತನಾಯಕಿ ಸುನೀತ ಪುಟ್ಟಣ್ಣಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಪುತಿನ ವ್ಯಾಸಂಗ ಮಾಡಿದ ಶತಮಾನದ ಶಾಲೆ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.