ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 158 ಕೋಟಿ ರು. ನಷ್ಟ

| Published : Aug 02 2024, 12:55 AM IST

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 158 ಕೋಟಿ ರು. ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಾಫಿನಾಡಿನಲ್ಲಿ ಭಾರೀ ಮಳೆಯಿಂದಾಗಿ ಮೆಸ್ಕಾಂ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ರಸ್ತೆ, ವಿದ್ಯುತ್‌ ಕಂಬ, ವಿದ್ಯುತ್‌ ಲೈನ್, ಶಾಲಾ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ಒಟ್ಟು 158 ಕೋಟಿ ರು. ನಷ್ಟ ಸಂಭವಿಸಿದೆ.

3067 ವಿದ್ಯುತ್‌ ಕಂಬಗಳು ಧರೆಗುರುಳಿವೆ, ತಗ್ಗಿದ ಮಳೆಯ ಅಬ್ಬರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಭಾರೀ ಮಳೆಯಿಂದಾಗಿ ಮೆಸ್ಕಾಂ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ರಸ್ತೆ, ವಿದ್ಯುತ್‌ ಕಂಬ, ವಿದ್ಯುತ್‌ ಲೈನ್, ಶಾಲಾ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ಒಟ್ಟು 158 ಕೋಟಿ ರು. ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಜುಲೈ 29 ರವರೆಗೆ ವಾಡಿಕೆ ಮಳೆ ಸರಾಸರಿ 992 ಮಿ.ಮೀ. ಮಳೆಯಾಗಬೇಕಾಗಿದ್ದು, 1306 ಮಿ.ಮೀ. ಮಳೆಯಾಗಿದೆ. ಮಲೆನಾಡು ಮತ್ತು ಬಯಲು ಭಾಗದಲ್ಲಿ ಒಟ್ಟು 350 ಮನೆಗಳಿಗೆ ಹಾನಿಯಾಗಿದೆ. 231 ಬಹುತೇಕ, 119 ಭಾಗಶಃ ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 97, ಕಡೂರು 33, ತರೀಕೆರೆ 15, ಅಜ್ಜಂಪುರ 17, ಮೂಡಿಗೆರೆ 91, ಕೊಪ್ಪ 19, ಶೃಂಗೇರಿ 11, ನರಸಿಂಹರಾಜಪುರ 50 ಕಳಸದಲ್ಲಿ 17 ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳು ಗಾಳಿ ಮಳೆಗೆ ಹಾನಿಯಾಗಿದ್ದರೆ, ಉಳಿದ ಮನೆಗಳು ಮರಬಿದ್ದು ಹಾನಿಗೊಳಗಾಗಿವೆ.

ಮೆಸ್ಕಾಂ ಇಲಾಖೆಯಲ್ಲಿ 3067 ವಿದ್ಯುತ್‌ ಕಂಬಗಳು ಧರೆಗುರುಳಿದ್ದರೆ, 2025 ಕಂಬಗಳನ್ನು ಬದಲಾಯಿಸಲಾಗಿದೆ. ಒಟ್ಟು 7 ಟ್ರಾನ್ಸ್‌ ಫಾರ್ಮರ್‌ಗಳಿಗೆ ಧಕ್ಕೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 1019 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರೆ, 626 ಕಂಬಗಳನ್ನು ಬದಲಾಯಿಸಲಾಗಿದೆ. ಮೂಡಿಗೆರೆಯಲ್ಲಿ 308 ಕಂಬಗಳಿಗೆ ಹಾನಿಯಾಗಿದ್ದರೆ 205 ಬದಲಾವಣೆ ಗೊಂಡಿವೆ. ಕಳಸದಲ್ಲಿ 158 ಕಂಬಗಳಲ್ಲಿ 94ನ್ನು ಬದಲಿಸಿದ್ದು, ಕಡೂರು 78 ವಿದ್ಯುತ್ ಕಂಬದಲ್ಲಿ 55 ಬದಲಿಸಲಾಗಿದೆ. ತರೀಕೆರೆಯಲ್ಲಿ 122 ಕ್ಕೆ 90 ಕಂಬ ಬದಲಾಗಿದ್ದರೆ, ಅಜ್ಜಂಪುರದಲ್ಲಿ 22 ಕಂಬ ಉರುಳಿ ಬಿದ್ದಿದ್ದು, 11 ಬದಲಾವಣೆಗೊಂಡಿವೆ.

ನ.ರಾ.ಪುರದಲ್ಲಿ 744 ವಿದ್ಯುತ್‌ ಕಂಬದಲ್ಲಿ 555 ಬದಲಾಯಿಸಲಾಗಿದೆ. ಕೊಪ್ಪ 448 ಕ್ಕೆ 241 ಮತ್ತು ಶೃಂಗೇರಿಯಲ್ಲಿ 168 ಕಂಬಗಳಿಗೆ ಹಾನಿಯಾಗಿದ್ದು, 148 ಕಂಬವನ್ನು ಬದಲಿಸಲಾಗಿದೆ, ವಿದ್ಯುತ್‌ ಕಂಬಗಳು ಧರಗೆ ಉರಳಿದ ಪರಿಣಾಮ 4.78 ಕೋಟಿ ರೂ. ನಷ್ಟವಾಗಿದೆ. 61.34 ಕಿ.ಮೀ. ವಿದ್ಯುತ್‌ ಲೈನ್‌ಗಳಿಗೆ ಹಾನಿಯಾಗಿದ್ದು, 40.50 ಲಕ್ಷ ನಷ್ಟವಾಗಿದೆ. ಒಟ್ಟಾರೆ ಮೆಸ್ಕಾಂ ಇಲಾಖೆಗೆ 5.31 ಕೋಟಿ ರು. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಪಿಆರ್‌ಇಡಿ: ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 381 ಕಿ.ಮೀ. ರಸ್ತೆಗಳಿಗೆ ಹಾನಿಯಾಗಿ 46.12 ಕೋಟಿ ನಷ್ಟವಾಗಿದ್ದರೆ, 32 ಸೇತುವೆ ಮತ್ತು ಕಲ್ವರ್ಟ್‌ಗಳಿಗೆ ಹಾನಿಯಾಗಿ 6.57 ಕೋಟಿ, 7 ಟ್ಯಾಂಕ್‌ಗಳಿಗೆ ಧಕ್ಕೆಯಾಗಿದ್ದು, 54.50 ಲಕ್ಷ ರೂ., ಸರ್ಕಾರಿ ಶಾಲೆ 12 ಕಟ್ಟಡಗಳಿಗೆ, 73 ಅಂಗನವಾಡಿಗೆ ಹಾನಿಯಾಗಿ 86.50 ಲಕ್ಷ, 10 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿ 1.17 ಕೋಟಿ ರು. ಸೇರಿದಂತೆ ಒಟ್ಟು 55.28 ಕೋಟಿ ನಷ್ಟ ಉಂಟಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ 34.90 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, 47.56 ಕೋಟಿ ರು., 54 ಸೇತುವೆಗಳಿಗೆ ಧಕ್ಕೆಯಾಗಿದ್ದು, 49.84 ಕೋಟಿ ರು. ಒಟ್ಟಾರೆಯಾಗಿ ಈ ಇಲಾಖೆಗೆ 97.40 ಕೋಟಿ ರು. ನಷ್ಟ ಸಂಭವಿಸಿದೆ.

--- ಬಾಕ್ಸ್‌ ----ತಗ್ಗಿದ ಮಳೆಯ ಅಬ್ಬರಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ. ಅವಾಂತರಗಳು ನಿಲ್ಲುವಂತೆ ಕಾಣುತ್ತಿಲ್ಲ. ಭಾರೀ ಗಾಳಿ ಮಳೆಗೆ ಗುಡ್ಡ ಹಾಗೂ ಮನೆಗಳು ಕುಸಿಯುತ್ತಿವೆ. ಜನ ನೆಲೆ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.

ಮಳೆಗಾಲದಲ್ಲಿ ಅಪಘಾತ ತಪ್ಪಿಸಲು ಮಲೆನಾಡಿನ ಶೃಂಗೇರಿ ಪಟ್ಟಣದ ಮುಖ್ಯ ರಸ್ತೆ ಮಧ್ಯೆ ಗಿಡನೆಟ್ಟು ಅಪಘಾತ ತಪ್ಪಿಸುವ ಪ್ರಯತ್ನ ನಡೆದಿದೆ. ಶಾರದಾಂಬೆ ದೇಗುಲದ ಮುಖ್ಯ ರಸ್ತೆಯ ಭಾರತೀ ತೀರ್ಥ ಶ್ರೀಗಳ ಹೆಸರಿನ ರಸ್ತೆಯಲ್ಲಿ ವಾಹನ ಸವಾರರು ಬೀಳ ಬಾರದೆಂದು ರಸ್ತೆ ಮಧ್ಯೆ ಗುಂಡಿಗೆ ಸ್ಥಳೀಯರು ಗಿಡ ನೆಟ್ಟಿದ್ದಾರೆ. ಬೈಕ್‌ನಲ್ಲಿ ಬರುವವರು ಅಪಘಾತದಿಂದ ಬಿದ್ದು ನರಳುವುದನ್ನು ತಪ್ಪಿಸಲು ಈ ರೀತಿ ಗಿಡನೆಡುವ ಕಾರ್ಯ ಮುಂದುವರೆದಿದೆ.ವರುಣಾರ್ಭಟಕ್ಕೆ ಮನೆ ಮೇಲೆ ಭೂ ಕುಸಿತ ಉಂಟಾಗಿದೆ. ಮನೆ ಹಿಂಬದಿಯ ಗುಡ್ಡ ಕುಸಿದು ಮನೆಗೆ ಸಂಪೂರ್ಣ ಹಾನಿ ಯಾಗಿದೆ. ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಿಹಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ನೀರು ಬಂದಾಗ ಕುಟುಂಬಸ್ಥರು ಎಚ್ಚರ ಗೊಂಡು, ಗುಡ್ಡ ಕುಸಿತದ ಶಬ್ದಕ್ಕೆ ಮನೆಯಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಮನೆ ಗೋಡೆ ಕುಸಿದು ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ಮನೆ ಬಿರುಕು ಬಿಟ್ಟಿದ್ದು, ಅಧಿಕಾರಿಗಳಿಗೆ ವಿಷಯ ಮುಟ್ಟಿಸಲು ನೆಟ್‌ವರ್ಕ್ ಇಲ್ಲದೆ ಪರದಾಡುತ್ತಿದ್ದಾರೆ.ಧರೆ ಕುಸಿದು 50 ಗಂಟೆ ಕಳೆದರೂ ಮಣ್ಣು ತೆರವಾಗಿಲ್ಲ. ಇದರಿಂದಾಗಿ ಕಲ್ಲುಡ್ಡೆ, ಹೊರನಾಡು, ಮೆಣಸಿನ ಹಾಡ್ಯ ರಸ್ತೆ ಬಂದ್ ಆಗಿದೆ. ಕೊಪ್ಪ ತಾಲೂಕಿನ ಕೊಗ್ರೆ, ಸಾತ್ ಕೊಡಿಗೆ ಸಮೀಪ ಎರಡು ದಿನದ ಹಿಂದೆ ರಸ್ತೆಗೆ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ರಸ್ತೆ ಮೇಲೆ ಮತ್ತಷ್ಟು ಗುಡ್ಡದ ಮಣ್ಣು ಕುಸಿಯುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.ರಣ ಭೀಕರ ಮಳೆಗೆ ಕಳಸ ತಾಲೂಕಿನ ಹೊರನಾಡು ಬಳಿ ಇರುವ ಸಿಮೆಂಟ್ ರಸ್ತೆ ಕೊಚ್ಚಿ ಹೋಗಿದೆ. ರಾತ್ರಿ ಕಳೆದು ಬೆಳೆಗಾಗುವುದರೊಳಗೆ ರಸ್ತೆಯೇ ನಾಪತ್ತೆಯಾಗಿದೆ. ಹೊರನಾಡಿನಿಂದ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆಯಲ್ಲಿದ್ದ ತಡೆಗೋಡೆ ಪೈಪ್ ಎಲ್ಲವೂ ನೀರುಪಾಲಾಗಿದೆ.

1 ಕೆಸಿಕೆಎಂ 5ಮಳೆಯಿಂದ ಹಾನಿಯಾಗಿರುವ ಚಿಕ್ಕಮಗಳೂರು ತಾಲೂಕಿನ ಕೆಂಚಪುರ ಗ್ರಾಮದ ಪುಷ್ಪಾ ಅವರ ಮನೆಗೆ ಕಂದಾಯ ನಿರೀಕ್ಷಕ ಎಸ್‌.ಸಿ. ಸಂತೋಷ್‌, ಗ್ರಾಮ ಆಡಳಿತಾಧಿಕಾರಿ ಯಮುನಾ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.