ಬಿಟ್ ಕಾಯಿನ್ ಹೆಸರಲ್ಲಿ ಎಂಜಿನಿಯರ್‌ಗೆ ₹16 ಲಕ್ಷ ಮೋಸ

| Published : Jul 23 2024, 12:39 AM IST

ಸಾರಾಂಶ

ರಾತ್ರೋರಾತ್ರಿ ಶ್ರೀಮಂತರಾಗಬೇಕು, ದಿಢೀರನೆ ಕೋಟ್ಯಧೀಶರರಾಗಬೇಕು ಎಂದು ಕಂಡಕಂಡಲ್ಲಿ ಹಣ ಹಾಕಿದವರ ಕೈಗೆಲ್ಲ ಕೊನೆಗೆ ಚಿಪ್ಪೇ ಗತಿ. ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ಹಣ ಹಾಕಿದರೆ ಶೇ.30ರಷ್ಟು ಲಾಭ ಕೊಡುತ್ತೇವೆ ಎಂದು ಬಂದ ಮೊಬೈಲ್ ಸಂದೇಶ ನಂಬಿದ ವಿಜಯಪುರದ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಇಂಜಿನಿಯರ್, ಅವರು ಹೇಳಿದಂತೆಲ್ಲ ಖಾತೆಗೆ ಹಣ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ₹16 ಲಕ್ಷ ರುಪಾಯಿ ಕಳೆದುಕೊಂಡು ಈಗ ಮೋಸಕ್ಕೆ ಒಳಗಾಗಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ರಾತ್ರೋರಾತ್ರಿ ಶ್ರೀಮಂತರಾಗಬೇಕು, ದಿಢೀರನೆ ಕೋಟ್ಯಧೀಶರರಾಗಬೇಕು ಎಂದು ಕಂಡಕಂಡಲ್ಲಿ ಹಣ ಹಾಕಿದವರ ಕೈಗೆಲ್ಲ ಕೊನೆಗೆ ಚಿಪ್ಪೇ ಗತಿ.

ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ಹಣ ಹಾಕಿದರೆ ಶೇ.30ರಷ್ಟು ಲಾಭ ಕೊಡುತ್ತೇವೆ ಎಂದು ಬಂದ ಮೊಬೈಲ್ ಸಂದೇಶ ನಂಬಿದ ವಿಜಯಪುರದ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಇಂಜಿನಿಯರ್, ಅವರು ಹೇಳಿದಂತೆಲ್ಲ ಖಾತೆಗೆ ಹಣ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ₹16 ಲಕ್ಷ ರುಪಾಯಿ ಕಳೆದುಕೊಂಡು ಈಗ ಮೋಸಕ್ಕೆ ಒಳಗಾಗಿದ್ದಾರೆ.ನಂಬಿಸಿ ವಂಚನೆ:

ಎ52 ಅಮೇಜಾನ್ ಗ್ಲೋಬಲ್ ರಿಕ್ರೂಟಮೆಂಟ್ ಗ್ರೂಪ್‌ಗೆ ನಿಮ್ಮನ್ನು ಸೇರಿಸಲಾಗಿದೆ ಎಂದು ನಗರದ ನಿವಾಸಿಯಾಗಿರುವ ಇಂಜಿನಿಯರ್ ಲಲ್ಲಾಸಾಬ(ಹೆಸರು ಬದಲಾಯಿಸಲಾಗಿದೆ) ಅವರ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ವಾಟ್ಸಪ್‌ ಗ್ರೂಪ್‌ನಲ್ಲಿ ಅದನ್ನು ನೋಡಿದ ಇವರು ಮೊದಲಿಗೆ ನಿರ್ಲಕ್ಷ್ಯ ಮಾಡುತ್ತಾರೆ. ಆದರೂ ನಿತ್ಯ ಅದರಲ್ಲಿ ಬರುತ್ತಿರುವ ಸಂದೇಶಗಳನ್ನು ಕಂಡು ತಾವು ಸಹ ಎಲ್ಲರಂತೆ ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ಹಣ ವಿನಿಯೋಗಿಸಿ ಲಾಭ ಮಾಡಿಕೊಳ್ಳಬೇಕು ಎಂದು ಅದರಲ್ಲಿನ ಅಡ್ಮಿನ್ ಅವರನ್ನು ಸಂಪರ್ಕಿಸುತ್ತಾರೆ. ಆಗ ಕಸ್ಟಮರ್ ಸರ್ವಿಸ್‌ಗೆ ಎಂದು ಇರುವ ಒಬ್ಬ ವ್ಯಕ್ತಿ ಇವರಿಗೆ ಯಾವ ಖಾತೆಗೆ ಎಷ್ಟು ಹಣ ಹಾಕಬೇಕು ಎಂದು ಮಾಹಿತಿ ಕೊಟ್ಟಿದ್ದಾನೆ. ಅದನ್ನು ನಂಬಿದ ಇಂಜಿನಿಯರ್ ತಾನು ಕಷ್ಟಪಟ್ಟು ದುಡಿದಿದ್ದ ಹಣ ಹಾಗೂ ತನ್ನ ತಂದೆಯ ನಿವೃತ್ತಿಯಿಂದ ಬಂದಿದ್ದ ಹಣವನ್ನೆಲ್ಲ ಬಿಟ್ ಕಾಯಿನ್ ಟ್ರೇಡಿಂಗ್ ಎಂಬ ಹೆಸರಿನ ದಂಧೆಯವರು ಹೇಳಿದ ಬ್ಯಾಂಕ್ ಖಾತೆಗೆ ಹಾಕಿದ್ದಾನೆ.

ವಂಚನೆಯಾಗಿದ್ದು ಬೆಳಕಿಗೆ ಬಂದಿದ್ದು ಯಾವಾಗ?:

ವಾಟ್ಸಾಪ್ ಗ್ರೂಪ್ ರಚನೆಯಾದ ಬಳಿಕ 2024 ಜು.11ರಿಂದ ಜು.22ರ ಒಳಗೆ ಅಂದರೆ ಕೇವಲ 11ದಿನದಲ್ಲಿ ಈತನಿಂದ ಬರೋಬ್ಬರಿ ₹16,16,666 ಹಣ ವಂಚಿಸಲಾಗಿದೆ. ಆನ್‌ಲೈನ್ ಮೂಲಕ ಮೋಸ ವಂಚನೆ ಮಾಡುವ ದುರುದ್ದೇಶದಿಂದ Bitcoin Trading ನಲ್ಲಿ ಹಣ ಇನ್ವೆಸ್ಟ್‌ ಮಾಡುವಂತೆ ಸುಳ್ಳು ಹೇಳಿ ನಂಬಿಸಿ ವಂಚಿಸಿದ್ದಾರೆ. ವಂಚಿತ ಇಂಜಿನಿಯರ್ ತನ್ನ ಖಾತೆಯಿಂದ ₹15,89,666 ಹಣ ಹಾಗೂ ತನ್ನ ಪತ್ನಿಯ ಖಾತೆಯಿಂದ ₹27000 ಹಣ ಹೀಗೆ ಎರಡು ಖಾತೆಗಳಿಂದ ಒಟ್ಟು ₹16,16,666 ಹಣವನ್ನು ಆನ್‌ಲೈನ್ ಮೂಲಕ ಹಾಕಿಸಿಕೊಂಡು ವಂಚಿಸಿದ್ದಾರೆ.ನನ್ನ ಹಣ ಕೊಡಿ ಎಂದಾಗ ಬಣ್ಣ ಬಯಲು:

ನಿಮ್ಮ ಯಾವ ಬಿಟ್ ಕಾಯಿನ್ ಟ್ರೇಡಿಂಗ್ ಬೇಡವೇ ಬೇಡ. ದಯಮಾಡಿ ನಾನು ಕೊಟ್ಟ ಹಣವನ್ನು ವಾಪಸ್‌ ಕೊಡಿ ಎಂದು ಇಂಜಿನಿಯರ್ ಕೇಳಿದಾಗ ಇವರ ಮೋಸದ ಜಾಲ ಬಯಲಾಗಿದೆ. ಏಕೆಂದರೇ ನಿನಗೆ ಈಗಾಗಲೇ ಬಂದಿರುವ ಲಾಭದ ಹಣ ಕೊಡಬೇಕಾದರೇ ಇನ್ನೂ ನೀನು ₹3,50,000 ಟ್ಯಾಕ್ಸ್ ಹಣ ಕಟ್ಟಬೇಕು ಎಂದಿದ್ದಾರೆ. ಆಗ ಈತನಿಗೆ ಗೊತ್ತಾಗಿದ್ದು, ಇವರು ಹಣವನ್ನು ಮರಳಿ ಕೊಡದೆ ಆನ್‌ಲೈನ್‌ ಮೂಲಕ ಮೋಸ, ವಂಚನೆ ಮಾಡಿದ್ದಾರೆ ಎಂಬುವುದು. ಆಗ ಮೋಸಕ್ಕೊಳಗಾದ ಇಂಜಿನಿಯರ್ ವಿಜಯಪುರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಹೇಗೆಲ್ಲ ನಡೆಯುತ್ತೆ ವಂಚನೆ?:

ಸಾಮಾನ್ಯವಾಗಿ ಬ್ಯಾಂಕ್‌ಗಳಿಂದ ಲೋನ್ ಪಡೆಯಲು ಅರ್ಜಿ ಹಾಕುವಾಗ, ಕ್ರೆಡಿಟ್‌ ಕಾರ್ಡ್‌ಗಾಗಿ ಅಪ್ಲಿಕೇಷನ್ ಹಾಕುವಾಗ, ಯಾವುದಾದರೂ ಹಬ್ಬ ಹರಿದಿನಗಳಲ್ಲಿ ಆಫರ್ ಇದೆ ಎಂದು ಆಧಾರ್‌ ಕಾರ್ಡ್, ಫೋನ್ ನಂಬರ್ ಪಡೆಯುವವರಿಂದ ಈ ವಂಚಕರು ಫೋನ್ ನಂಬರ್‌ ಖರೀದಿಸುತ್ತಾರೆ. ಬಳಿಕ ಒಂದಿಷ್ಟು ಜನರನ್ನು ಅದಕ್ಕೆ ಸೇರಿಸಿ, ತಮ್ಮದೇ ಒಂದಿಷ್ಟು ಜನರು ಅದರಲ್ಲಿ ಲಾಭ ಬಂದಿರುವ ಬಗ್ಗೆ ಮೆಸೇಜ್‌ಗಳನ್ನು ಹಾಗೂ ದಾಖಲೆಗಳನ್ನು ಹಾಕಿ ನಂಬಿಸುತ್ತಾರೆ. ಬಿಟ್ ಕಾಯಿನ್ ಟ್ರೇಡಿಂಗ್ ಎಂದು ವಾಟ್ಸಾಪ್ ಗ್ರೂಪ್ ಮಾಡಿ ಬೇರೆಯವರು ಹಣ ಬಂದಿದೆ ಎಂದು ನಂಬಿಸುತ್ತಾರೆ. ಅದರಲ್ಲಿ ಕಸ್ಟಮರ್ ಸರ್ವಿಸ್ ಎಂಬ ಹೆಸರಿನ ವ್ಯಕ್ತಿ ಇದ್ದು, ಆತ ನೈಸ್‌ ಆಗಿ ಅಮಾಯಕರನ್ನು ನಂಬಿಸಿ ಬೇರೆ ಬೇರೆ ಖಾತೆಗಳಿಗೆ ಲಕ್ಷಾಂತರ ಹಣ ಹಾಕಿಸಿಕೊಂಡು ಮಕ್ಮಲ್ ಟೋಪಿ ಹಾಕುತ್ತಾರೆ. ಅತೀ ಬೇಗ ಶ್ರೀಮಂತರಾಗಬೇಕು ಎಂದು ಹಣದ ಆಸೆಗಾಗಿ ಈ ರೀತಿ ಮಾಡಿ ಜನ ಮೋಸಕ್ಕೆ ಒಳಗಾಗುತ್ತಾರೆ.

ಬೆಂಗಳೂರಿನಲ್ಲಿ ನಾನು ದುಡಿದಿದ್ದ ಹಣ ಹಾಗೂ ನನ್ನ ತಂದೆಯ ನಿವೃತ್ತಿ ಹಣ ಹಾಕಿ ಮೋಸ ಹೋಗಿದ್ದೇನೆ. ಸುಮಾರು ಎರಡೂವರೆ ಸಾವಿರ ಜನ ಇದ್ದ ಆ ವಾಟ್ಸಾಪ್ ಗ್ರೂಪ್‌ನಲ್ಲಿ ಕೆಲವರು ನನಗೆ ಹಣ ಬಂದಿದೆ ಎಂದು ನಂಬಿಸಿದರು. ಅದನ್ನು ಕಂಡು ನಾನು ಅತಿಯಾಸೆಗೆ ಬಿದ್ದು ಹಣ ಹಾಕಿ ಮೋಸ ಹೋದೆ. ದಯಮಾಡಿ ಯಾರೂ ಇಂತಹ ವಂಚನೆಗಳಿಗೆ ಬಲಿಯಾಗಬೇಡಿ.

-ವಂಚನೆಗೊಳಗಾದ ಇಂಜಿನಿಯರ್.ಬಿಟ್ ಕ್ವಾಯಿನ್ ಟ್ರೇಡಿಂಗ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಲಾಗಿದೆ. ಆತ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಮ್ಮ ಅಧಿಕಾರಿಗಳು ವಂಚಕರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ, ವಂಚಿತರಿಂದ ಮೊತ್ತವನ್ನು ಜಪ್ತು ಮಾಡಲಾಗುವುದು.

-ಋಷಿಕೇಶ ಸೋನಾವಣೆ,

ವಿಜಯಪುರ ಎಸ್ಪಿ.