ಕನ್ನಡ ಕುಲಕ್ಕೆ ಪೌರೋಹಿತ್ಯ ಒದಗಿಸಿದ್ದು ಆಲೂರು ವೆಂಕಟರಾಯರು

| Published : Jul 23 2024, 12:39 AM IST

ಕನ್ನಡ ಕುಲಕ್ಕೆ ಪೌರೋಹಿತ್ಯ ಒದಗಿಸಿದ್ದು ಆಲೂರು ವೆಂಕಟರಾಯರು
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿ ಬಿಟ್ಟು ಅವರ ಕನಸಿನ ಕೂಸಾದ ಕರ್ನಾಟಕ ನೂತನ ವಿದ್ಯಾಲಯ ರಾಷ್ಟ್ರೀಯ ಶಾಲೆ ಪ್ರಾರಂಭಿಸಿದರು

ಗದಗ: ಕನ್ನಡ ಹಾಗೂ ಕರ್ನಾಟಕತ್ವದ ಕಲ್ಪನೆ ಇಲ್ಲದಿದ್ದಾಗ ಕನ್ನಡ ಕಂಪನ್ನು ಕರ್ನಾಟಕದ ಅಸ್ತಿತ್ವವನ್ನು ಜಗಕೆ ಸಾರಲು ಹರಸಾಹಸ ಮಾಡಿದವರು ಕನ್ನಡಕುಲಪುರೋಹಿತರೆಂದು ಖ್ಯಾತರಾಗಿದ್ದ ಆಲೂರ ವೆಂಕಟರಾಯರು ಎಂದು ಬರಹಗಾರ ಬಿ.ಎಲ್. ಪತ್ತಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೋಂಟದ ಶ್ರೀಗಳ ಕನ್ನಡ ಭವನದಲ್ಲಿ ಸಾಹಿತ್ಯ ಸಿಂಚನ ಮಾಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿ ಬಿಟ್ಟು ಅವರ ಕನಸಿನ ಕೂಸಾದ ಕರ್ನಾಟಕ ನೂತನ ವಿದ್ಯಾಲಯ ರಾಷ್ಟ್ರೀಯ ಶಾಲೆ ಪ್ರಾರಂಭಿಸಿದರು.

ಸ್ವಾವಲಂಬಿ ಜೀವನ ನಡೆಸಲು ನೆರವಾದರು. ಇತಿಹಾಸದಲ್ಲಿ ಆಸಕ್ತಿಯಿದ್ದ ಆಲೂರರು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿ ಸ್ಥಾಪಿಸಿದರು. ಕರ್ನಾಟಕ ವಿದ್ಯಾವರ್ಧದಕ ಸಂಘದ ಮುಖವಾಣಿಯಾಗಿದ್ದ ವಾಗ್ಭೂಷಣ ಪತ್ರಿಕೆಯ ಸಂಪಾದಕರಾಗಿ ಕರ್ನಾಟಕ ಏಕೀಕರಣದ ಅವಶ್ಯಕತೆ ತಿಳಿಸಿ ಅದಕ್ಕಾಗಿ ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸುವಂತಹ ಲೇಖನ ಬರೆದು ಪ್ರಕಟಿಸಿದರು.

1915 ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಲು ಕಾರಣೀಭೂತರಾದರು. ಶಿಕ್ಷಣ ಮಿಮಾಂಸೆ, ಕರ್ನಾಟಕ ಗತವೈಭವ, ಗೀತಾರಹಸ್ಯ, ರಾಷ್ಟ್ರೀಯತೆಯ ಮಿಮಾಂಸೆ, ನನ್ನ ಜೀವನ ಸ್ಮತಿಗಳು ಇವರ ಕೃತಿಗಳಾಗಿವೆ. ಕನ್ನಡ ನಾಡು-ನುಡಿಗೆ ಆಲೂರರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗದಗ ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ. ಮಹಾನ್ ಕವಿ ಕುಮಾರವ್ಯಾಸ, ನಯಸೇನ, ಚಾಮರಸ ಕವಿ, ದುರ್ಗಸಿಂಹರಂತಹ ಮಹಾನ್ ಕವಿಗಳನ್ನು ಹೊಂದಿರುವ ಗದಗ ಜಿಲ್ಲೆಯಲ್ಲಿ ಇವರ ಕುರಿತು ಸಾಹಿತ್ಯಾಭಾಸಿಗರಿಗೆ ಮಾಹಿತಿಯ ಕೊರತೆಯಿದೆ. ಈ ಕವಿಗಳ ಪ್ರತಿಷ್ಠಾನ ಗದುಗಿನಲ್ಲಿ ಆಗಬೇಕೆಂಬ ಹಂಬಲ ಬಹಳ ದಿನಗಳಿಂದ ಇದೆಯೆಂದು ಮಾತನಾಡುತ್ತ ಆಗಸ್ಟ ತಿಂಗಳಿನ ಕೊನೆಯ ವಾರದಲ್ಲಿ ಗಜೇಂದ್ರಗಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ತಯಾರಿ ನಡೆದಿದ್ದು ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಾಸಕರ ಉಪಸ್ಥಿತಿಯಲ್ಲಿ ಲಾಂಛನ ಬಿಡುಗಡೆ ಮಾಡಿ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದರು.

ಅತಿಥಿ ಎಚ್.ಟಿ. ಸಂಜೀವಸ್ವಾಮಿ ಮುಂತಾದವರು ಮಾತನಾಡಿದರು. ವೇದಿಕೆ ಮೇಲೆ ಜಿಲ್ಲಾಧ್ಯಕ್ಷ ವಿವೇಕಾನಂದಗೌಡಪಾಟೀಲ, ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಎಚ್.ಟಿ. ಸಂಜೀವಸ್ವಾಮಿ ಶ್ರೀಕಾಂತ ಬಡ್ಡೂರ ಉಪಸ್ಥಿತರಿದ್ದರು. ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಸಿ.ಎಂ. ಮಾರನಬಸರಿ, ಪ್ರ.ತೋ, ನಾರಾಯಣಪೂರ, ಎಸ್.ಎಸ್. ಕಳಸಾಪುರಶೆಟ್ರು, ಎಸ್.ಯು. ಸಜ್ಜನಶೆಟ್ಟರ್, ಎಸ್ ಎಸ್ ಸೂಳಿಕೇರಿ, ಶಶಿಕಾಂತ ಕೊರ್ಲಹಳ್ಳಿ, ರತ್ನಕ್ಕ ಪಾಟೀಲ, ಪದ್ಮಾ ಕಬಾಡಿ, ಮಂಜುಳಾ ವೆಂಕಟೇಶಯ್ಯ, ರಕ್ಷಿತಾ ಗಿಡ್ನಂದಿ, ರತ್ನಾ ಪುರಂತರ, ಸುಧಾ ಬಳ್ಳಿ, ಶೈಲಜಾ ಗಿಡ್ನಂದಿ, ಬಸವರಾಜ ಗಣಪ್ಪನವರ, ಜೆ.ಎ.ಪಾಟೀಲ, ಅಮರೇಶ ರಾಂಪೂರ ಮುಂತಾದವರು ಉಪಸ್ಥಿತರಿದ್ದರು.