ದೇಶಾದ್ಯಂತ ರಸ್ತೆ ಅಪಘಾತದಲ್ಲಿ ವಾರ್ಷಿಕ ೧೮ ಲಕ್ಷ ಮಂದಿ ಸಾವು: ಪ್ರಸಾದ್

| Published : Nov 12 2025, 01:30 AM IST

ದೇಶಾದ್ಯಂತ ರಸ್ತೆ ಅಪಘಾತದಲ್ಲಿ ವಾರ್ಷಿಕ ೧೮ ಲಕ್ಷ ಮಂದಿ ಸಾವು: ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನರು ರಸ್ತೆ ಅಪಘಾತವನ್ನು ತಡೆಗಟ್ಟಲು ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಪಘಾತ ನಡೆದ ಒಂದು ಗಂಟೆಯ ಒಳಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಜೀವ ರಕ್ಷಕರಿಗೆ ಜಿಲ್ಲಾಡಳಿತವು ೨೫ ಸಾವಿರ ರು. ನಗದು ಪುರಸ್ಕಾರದೊಡನೆ ರಹವೀರ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಸ್ತೆ ಅಪಘಾತದಲ್ಲಿ ದೇಶಾದ್ಯಂತ ಪ್ರತಿ ವರ್ಷ ೧೮ ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದು, ಶೇ.೮೦ರಷ್ಟು ಯುವಜನರೇ ದುರಂತಕ್ಕೊಳಗಾಗುತ್ತಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ವಿಶ್ರಾಂತ ಅಧೀಕ್ಷಕ ಎಂ.ಜಿ.ಎನ್.ಪ್ರಸಾದ್ ಕಳವಳ ವ್ಯಕ್ತಪಡಿಸಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಮಮತೆಯ ಮಡಿಲು ನಿತ್ಯ ಅನ್ನದಾಸೋಹದ ಅಂಗಳದಲ್ಲಿ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಅಪಘಾತ ನಡೆದ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸದೆ ಅನಿರೀಕ್ಷಿತವಾಗಿ ಸಂಭವಿಸುವ ಘಟನೆಗಳನ್ನು ಅರ್ಥೈಸಿಕೊಂಡು ಸಹಾಯಕ್ಕೆ ಧಾವಿಸಿದರೆ ಜೀವವನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಯುವಜನರು ನಿರ್ಲಕ್ಷ್ಯ ಮಾಡದೆ ಜೀವ ಉಳಿಸಲು ಮುಂದಾಗಬೇಕು ಎಂದರು.

ಯುವಜನರು ರಸ್ತೆ ಅಪಘಾತವನ್ನು ತಡೆಗಟ್ಟಲು ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಪಘಾತ ನಡೆದ ಒಂದು ಗಂಟೆಯ ಒಳಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಜೀವ ರಕ್ಷಕರಿಗೆ ಜಿಲ್ಲಾಡಳಿತವು ೨೫ ಸಾವಿರ ರು. ನಗದು ಪುರಸ್ಕಾರದೊಡನೆ ರಹವೀರ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಪ್ರತಿ ವರ್ಷ ಹತ್ತು ಮಂದಿಗೆ ೧ ಲಕ್ಷ ರು. ನಗದು ಪ್ರಶಸ್ತಿಯೊಂದಿಗೆ ರಹವೀರ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಇದು ಜೀವ ರಕ್ಷಕರಿಗೆ ನೀಡುವ ಉತ್ತೇಜನವಾಗಿದೆ ಎಂದರು.

ಅಪಘಾತ ನಡೆದ ಒಂದು ಗಂಟೆಯನ್ನು ಸುವರ್ಣ ಸಮಯ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯನ್ನು ಪ್ರಥಮ ಚಿಕಿತ್ಸೆ ಅಥವಾ ಸಂಬಂಧಿಸಿದ ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ದು ಜೀವ ರಕ್ಷಕ ಕಾಯಕದಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳಲ್ಲಿ ೨.೫೦ ರು. ವೆಚ್ಚದಲ್ಲಿ ಏಳು ದಿನಗಳ ಕಾಲ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಭರಿಸುತ್ತದೆ. ಇದರ ಅರಿವನ್ನು ಪ್ರತಿಯೊಬ್ಬ ನಾಗರೀಕನೂ ಹೊಂದಬೇಕಾಗಿದೆ ಎಂದು ಹೇಳಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಮಂಗಲ ಎಂ. ಯೋಗೀಶ್ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿಗಾಗಿ ರಸ್ತೆ ಸುರಕ್ಷತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಈ ಕಾರ‌್ಯಕ್ರಮವನ್ನು ಸಂಘಟಿಸಲಾಗಿದೆ. ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಚಿಹ್ನೆಯ ಮಹತ್ವವನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಾಗಿದೆ. ಈ ದಿಸೆಯಲ್ಲಿ ಮಮತೆಯ ಮಡಿಲು ಅಂಗಳಕ್ಕೆ ಬರುವ ಮಹಿಳೆಯರು ವಿಶೇಷವಾಗಿ ರಸ್ತೆ ಸುರಕ್ಷತೆಯ ಸಾಕ್ಷರತೆಯನ್ನು ಪಡೆಯಬೇಕು ಎಂದು ತಿಳಿಸಿದರು.