ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅವಕಾಶ ಸಿಗದವರು, ಹಿರಿತನ, ಹಲವು ಬಾರಿ ಶಾಸಕರಾಗಿ ಆಯ್ಕೆ, ಜಿಲ್ಲೆ, ಸಮುದಾಯವಾರು ಪ್ರಾತಿನಿಧ್ಯದಡಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನೇಕ ಶಾಸಕರಿಗೆ ಸೋಮವಾರ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದೆ ನಿರಾಸೆಯಾಗಿದೆ.

ಈ ಸಂಬಂಧ ಹಲವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪಕ್ಷದ ನಿರ್ಧಾರಕ್ಕೆ ತಲೆಬಾಗುವುದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ 30 ಮಂದಿಯಲ್ಲಿ 18 ಜನರಿಗೆ ಮತ್ತೆ ಅವಕಾಶ ದೊರಕಿದ್ದು ಉಳಿದ 12 ಮಂದಿ ಪ್ರಬಲ ಆಕಾಂಕ್ಷಿಗಳಾಗಿದ್ದರೂ ಮಂತ್ರಿ ಭಾಗ್ಯ ದೊರಕಿಲ್ಲ. ಇದು ಒಂದೆಡೆಯಾದರೆ, ಸಿದ್ದರಾಮಯ್ಯ ಅವರ 2ನೇ ಅವಧಿಯ ಸರ್ಕಾರದ ಸಂಪುಟದಲ್ಲಿ ಅವಕಾಶ ಸಿಗದ ಪ್ರಬಲ ಆಕಾಂಕ್ಷಿಗಳಾಗಿದ್ದ ಆರ್‌.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಬೇಳೂರು ಗೋಪಾಲಕೃಷ್ಣ, ತನ್ವೀರ್‌ ಸೇಠ್‌, ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ, ಉಮಾಶ್ರೀ ಅವರಿಗೂ ಮಂತ್ರಿ ಸ್ಥಾನ ಲಭಿಸಿಲ್ಲ.

ಜೊತೆಗೆ ಹಲವು ಬಾರಿ ಆಯ್ಕೆ, ಸುದೀರ್ಘ ಪಕ್ಷ ಸೇವೆ, ಹಿರಿತನ, ಪ್ರಾದೇಶಿಕ ಸಮುದಾಯವಾರು ಪ್ರಾತಿನಿಧ್ಯದ ಲೆಕ್ಕಾಚಾರದಲ್ಲಿ ಮೊದಲ ಬಾರಿಗೆ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಆರತಿ ಕೃಷ್ಣ, ಸಲೀಂ ಅಹಮದ್‌, ತರೀಕೆರೆ ಶ್ರೀನಿವಾಸ್‌, ಅಶೋಕ್‌ ಪಟ್ಟಣ್‌, ಶರತ್‌ ಬಚ್ಚೇಗೌಡ, ಜಿ.ಸಿ.ಪಾಟೀಲ್‌, ಎನ್‌.ಎ. ಹ್ಯಾರಿಸ್‌, ಕೋನರೆಡ್ಡಿ, ಬಂಗಾರಪೇಟೆ ನಾರಾಯಣಸ್ವಾಮಿ, ಬಿ.ಕೆ.ಸಂಗಮೇಶ್‌, ಯಶವಂತ ರಾಯ ಪಾಟೀಲ್‌, ಖನೀಜ್‌ ಫಾತಿಮಾ, ಎ.ಎಸ್‌.ಪೊನ್ನಣ್ಣ, ಸುಬ್ಬಾರೆಡ್ಡಿ, ಆನೇಕಲ್‌ ಶಿವಣ್ಣ, ಬಿ.ಆರ್‌.ಪಾಟೀಲ್‌, ನಯನ ಮೋಟಮ್ಮ, ಅಪ್ಪಾಜಿ ನಾಡಗೌಡ, ಶ್ರೀನಿವಾಸ ಮಾನೆ ಅವರೂ ಮಂತ್ರಿ ಸ್ಥಾನ ವಂಚಿತರಾಗಿದ್ದಾರೆ.


ಈ ಪೈಕಿ ಜಿ.ಸಿ.ಪಾಟೀಲ್‌ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ, ಎ.ಎಸ್‌.ಪೊನ್ನಣ್ಣ ಅವರನ್ನು ಉಪಸಭಾಧ್ಯಕ್ಷ ಸ್ಥಾನಕ್ಕೆ, ಸಲೀಂ ಅಹಮದ್‌ ಅವರನ್ನು ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ, ಉಮಾಶ್ರೀ ಅವರನ್ನು ಉಪಸಭಾತಿ ಸ್ಥಾನಕ್ಕೆ ಹೆಸರಿಸಿ ಸಮಾಧಾನ ಪಡಿಸುವ ಕೆಲಸ ಮಾಡಲಾಗಿದೆ.