, ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ-2024 ರ ಪ್ರಶಸ್ತಿ ಪುರಸ್ಕೃತ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಮಠದ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ಅನ್ನದಾನೇಶ್ವರ ಶ್ರೀ (76) ಗುರುವಾರ ರಾತ್ರಿ ಬೆಳಗಾವಿಯ ಖಾಸಗಿ ಆಸ್ಪತ್ರೆಯ್ಲಿ ಲಿಂಗೈಕ್ಯರಾದರು.

 ರಬಕವಿ-ಬನಹಟ್ಟಿ : ತ್ರಿವಿಧ ದಾಸೋಹಿ, ದಾಸೋಹ ಚಕ್ರವರ್ತಿ, ಅನ್ನದಾನೇಶ್ವರ ಎಂದೇ ನಾಮಾಂಕಿತರಾಗಿದ್ದ, ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ- 2024 ರ ಪ್ರಶಸ್ತಿ ಪುರಸ್ಕೃತ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಮಠದ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ಅನ್ನದಾನೇಶ್ವರ ಶ್ರೀ (76) ಗುರುವಾರ ರಾತ್ರಿ ಬೆಳಗಾವಿಯ ಖಾಸಗಿ ಆಸ್ಪತ್ರೆಯ್ಲಿ ಲಿಂಗೈಕ್ಯರಾದರು.

ನೂರಾರು ಸಾಮೂಹಿಕ ವಿವಾಹ

ಪ್ರತಿ ವರ್ಷ ನೂರಾರು ಸಾಮೂಹಿಕ ವಿವಾಹ, ಜೋಗಮ್ಮಗಳಿಗೆ ಅಡಗಲಿ ತುಂಬುವುದು, ಬಾಣಂತಿಯವರಿಗೆ ಸೀಮಂತ ಕಾರ್ಯ, ಪಾರಾಯಣ ಮತ್ತು ವಸ್ತ್ರದಾನ ಶಿಬಿರ, ತ್ರಿವಿಧ ದಾಸೋಹಿ, ರಾಜ್ಯಾದ್ಯಂತ ಸುಕ್ಷೇತ್ರಗಳು, ಆಂಧ್ರಪ್ರದೇಶದ ಶ್ರೀಶೈಲಂ, ಮಹಾರಾಷ್ಟ್ರದ ಪಂಡರಪೂರ ಸೇರಿದಂತೆ ವರ್ಷದಲ್ಲಿ ವಿವಿಧೆಡೆ ೧೮೭ ಅನ್ನದಾಸೋಹ ಆಯೋಜಿಸುತ್ತಿದ್ದರು.

 ಯಕೃತ್‌ ಸಮಸ್ಯೆಯಿಂದ ಬಳಲುತ್ತಿದ್ದ ದಾನೇಶ್ವರ ಶ್ರೀ

ಹಲವು ದಿನಗಳಿಂದ (ಜಲೋದರ ರೋಗ) ಯಕೃತ್‌ ಸಮಸ್ಯೆಯಿಂದ ಬಳಲುತ್ತಿದ್ದ ದಾನೇಶ್ವರ ಶ್ರೀಗಳಿಗೆ ಹುಬ್ಬಳ್ಳಿ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗಳಲ್ಲಿ ೧೫ ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಸಮಸ್ಯೆ ಉಲ್ಬಣಗೊಂಡಿದ್ದರಿಂದ ಬೆಳಗಾವಿ ಕೆಎಲ್‌ಇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಾಲ್ಕು ದಿನಗಳಿಂದ ದಾಖಲಾಗಿದ್ದ ಶ್ರೀಗಳು ಗುರುವಾರ ರಾತ್ರಿ 11.30ಕ್ಕೆ ವಿಧಿವಶರಾದರು.

 ಬೆಳಗಾವಿಯಿಂದ ಶ್ರೀಗಳ ಪಾರ್ಥಿವ ಶರೀರವನ್ನು ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಭಕ್ತರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಶುಕ್ರವಾರ ರಾತ್ರಿ 10ಕ್ಕೆ ಬಂಡಿಗಣಿ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಶನಿವಾರ ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಶ್ರೀಗಳು ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ.

ಶ್ರೀಗಳ ಅಂತ್ಯಕ್ರಿಯೆಗೆ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ದರ್ಶನಕ್ಕೆ ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದೆ ಶ್ರೀ ಮಠ ತಿಳಿಸಿದೆ.