1999-2002 ಬ್ಯಾಚ್‌ ಕಾಮರ್ಸ್‌ ಹಳೆ ವಿದ್ಯಾರ್ಥಿಗಳ ಪುನರ್‌ಮಿಲನ

| Published : Jun 17 2024, 01:37 AM IST

1999-2002 ಬ್ಯಾಚ್‌ ಕಾಮರ್ಸ್‌ ಹಳೆ ವಿದ್ಯಾರ್ಥಿಗಳ ಪುನರ್‌ಮಿಲನ
Share this Article
  • FB
  • TW
  • Linkdin
  • Email

ಸಾರಾಂಶ

ತಮಗೆ ವಿದ್ಯೆ ಕಲಿಸಿದ ಉಪನ್ಯಾಸಕ ವೃಂದದವರಿಗೆ ವಂದಿಸಿದ ಹಳೆ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ಕಾಲೇಜು ಪ್ರಾಂಶುಪಾಲ ಮೇಜರ್‌ ಪ್ರೊ. ಬಿ. ಡಾ. ಬಿ. ರಾಘವ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ 1999-2002ರ ವಾಣಿಜ್ಯ ಬ್ಯಾಚ್‌ನ ಹಳೇ ವಿದ್ಯಾರ್ಥಿಗಳ ಭಾವನಾತ್ಮಕ ಪುನರ್ಮಿಲನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ತಮಗೆ ವಿದ್ಯೆ ಕಲಿಸಿದ ಉಪನ್ಯಾಸಕ ವೃಂದದವರಿಗೆ ವಂದಿಸಿದ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು.

ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ.ಡಾ.ಬಿ.ರಾಘವ, ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿ, ಕಳಚಿಹೋದ ಸಂಬಂಧವನ್ನು ಬೆಸೆಯುವತ್ತ ಐತಿಹಾಸಿಕ ಹೆಜ್ಜೆ ಇರಿಸಿದ 1999-2002ನೇ ವಾಣಿಜ್ಯ ಬ್ಯಾಚ್‌ನ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಇದು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಆದರ್ಶವಾಗಲಿದೆ ಎಂದು ಬಣ್ಣಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಗಾಯತ್ರಿ ದೇವಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳದ ಇಂದಿನ ದಿನಗಳಲ್ಲಿ, ಒಂದು ನಿರ್ದಿಷ್ಟ ಬ್ಯಾಚ್‌ನ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರನ್ನು ಕೃತಜ್ಞತಾಪೂರ್ವಕವಾಗಿ ವಂದಿಸಿರುವ ಕಾರ್ಯ ಕಾಲೇಜಿನ ಇತಿಹಾಸದ ಪುಟಗಳಲ್ಲಿ ದಾಖಲಿಸುವಂತದ್ದು ಎಂದು ತಿಳಿಸಿದರು.

2002ನೇ ಇಸವಿಯಲ್ಲಿ ಉತ್ತೀರ್ಣರಾಗಿ ಅಮೆರಿಕ, ಯು.ಎ.ಇ, ಬೆಂಗಳೂರು ಸೇರಿದಂತೆ ವಿವಿಧ ದೇಶ, ರಾಜ್ಯ ಮತ್ತು ನಗರಗಳಲ್ಲಿ ನೆಲೆಸಿರುವ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಉಪನ್ಯಾಸಕರ ಮಾರ್ಗದರ್ಶನದ ಫಲಶೃತಿಯಾಗಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, 1949ರಿಂದ ಇದೇ ಮೊದಲ ಬಾರಿಗೆ ನಡೆದ ಒಂದು ನಿರ್ದಿಷ್ಟ ಬ್ಯಾಚ್‌ನ ವಿದ್ಯಾರ್ಥಿಗಳ ಭೇಟಿ ಅವಿಸ್ಮರಣೀಯವಾಗಿತ್ತು ಎಂದರು.

1949ರಲ್ಲಿ ಸ್ಥಾಪನೆಗೊಂಡ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡು ದಶಕಗಳ ಹಳೆಯ ನೆನಪುಗಳನ್ನು ವಿವರಿಸಿ, ಉಪನ್ಯಾಸಕ ವೃಂದದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕರುಣಾಕರ್, ಆಂಗ್ಲ ವಿಭಾಗದ ಪೂಣಚ್ಚ, ಹಿಂದಿ ವಿಭಾಗದ ಡಾ.ಶ್ರೀಧರ್ ಹೆಗಡೆ, ಅರ್ಥಶಾಸ್ತ್ರ ವಿಭಾಗದ ತಿಪ್ಪೇಸ್ವಾಮಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.