ಪ್ರಮೋದ ಗಡಕರಕನ್ನಡಪ್ರಭ ವಾರ್ತೆ ಬೆಳಗಾವಿ

ನಗರ ಸೇರಿದಂತೆ ಜಿಲ್ಲೆಯಲ್ಲಿ ಇತ್ತೀಚೆಗೆ ಅನೇಕ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿವೆ. ಹಳ್ಳಿ ಹಳ್ಳಿಯಲ್ಲೂ ಹಾಳಾದ ರಸ್ತೆಗಳಿಗೆ ದುರಸ್ತಿ ಭಾಗ್ಯ ಒದಗಿದೆ. ಆದರೆ, ನಗರದ ಪ್ರಮುಖ ರಸ್ತೆಯಾಗಿರುವ ರಕ್ಕಸಕೊಪ್ಪ ಮಾರ್ಗದ ಮಧ್ಯದಲ್ಲಿ ಕೇವಲ ಇನ್ನೂರು ಮೀಟರ್‌ಷ್ಟು ಉದ್ದದ ರಸ್ತೆ ಸಂಪೂರ್ಣ ಗುಂಡಿಗಳಿಂದಲೇ ತುಂಬಿ ಹೋಗಿದೆ. ಗುಂಡಿಗಳಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಮುಖ್ಯ ಮಾರ್ಗ ಬಿಟ್ಟು, ಒಂದು ಕಿಮೀ ಸುತ್ತುವರಿದು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ-ರಕ್ಕಸಕೊಪ್ಪ ಮಾರ್ಗದಲ್ಲಿ ನಿತ್ಯ ಸಾರಿಗೆ ಬಸ್‌, ಲಾರಿಗಳು, ಗೂಡ್ಸ್‌ ವಾಹನಗಳು ಸೇರಿದಂತೆ ತೆ ಬೈಕ್‌ ಕಾರುಗಳು ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳ ಸವಾರರು ಗುಂಡಿಗಳಿಂದ ಹೈರಾಣಾಗಿ ಹೋಗಿದ್ದಾರೆ. ರಸ್ತೆಯ ಆರಂಭದಲ್ಲೇ ಜಿಮಖಾನಾ ಬಸ್ ನಿಲ್ದಾಣದಿಂದ ಶೌರ್ಯ ವೃತ್ತದ ಮಧ್ಯೆ ಇನ್ನೂರು ಮೀಟರ್ ಉದ್ದದ ರಸ್ತೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗುಂಡಿಗಳಿವೆ. ಇಲ್ಲೊಂದು ಡಾಂಬರ್ ರಸ್ತೆ ಇತ್ತು ಎನ್ನುವ ಸ್ವರೂಪವೇ ಇಲ್ಲದಂತೆ ರಸ್ತೆ ಹಾಳಾಗಿದೆ. ಗುಂಡಿ ತಪ್ಪಿಸಲು ಹೋಗಿ, ಮತ್ತೊಂದು ಗುಂಡಿಯಲ್ಲಿ ಬೈಕ್ ಹಾಕಿ ನಿತ್ಯವೂ ಐದಾರು ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಡಾ.ರಾಜೇಂದ್ರ ಪ್ರಸಾದ ವೃತ್ತದಿಂದ ಜಿಮಾಖಾನ್ ಬಸ್ ನಿಲ್ದಾಣವರೆಗೆ ಹಾಗೂ ಶೌರ್ಯ ವೃತ್ತದಿಂದ ಮುಂದೆ ಉತ್ತಮ ರಸ್ತೆ ಮಾಡಲಾಗಿದೆ. ಆದರೆ, ಮಧ್ಯದಲ್ಲಿ ಮಾತ್ರ ಜಿಮಖಾನಾ ಬಸ್ ನಿಲ್ದಾಣದಿಂದ ಶೌರ್ಯ ವೃತ್ತದವರೆಗೆ ರಸ್ತೆಯನ್ನು ದುರಸ್ತಿ ಮಾಡದೇ ಹಾಗೆ ಬಿಡಲಾಗಿದೆ. ಇದು ಈ ರಸ್ತೆ ಸಂಚಾರವನ್ನೇ ಹೈರಾಣಾಗಿಸಿದೆ.ಇಲ್ಲಿನ ಗುಂಡಿಗಳನ್ನು ತಪ್ಪಿಸಿಕೊಳ್ಳಲು ಅನೇಕರು ಈ ಮುಖ್ಯ ರಸ್ತೆಯ ಸಂಚಾರವನ್ನೇ ಬಿಟ್ಟಿದ್ದಾರೆ. ಜಿಮಖಾನಾ ಬಸ್ ನಿಲ್ದಾಣ ವೃತ್ತದಲ್ಲಿ ಎಡ ತಿರುವು ಪಡೆದು ಕ್ಯಾಂಪ್‌ದಲ್ಲಿನ ಹ್ಯಾವಲಾಕ್ ರಸ್ತೆ ಸೇರಿ, ಇಂಡಿಪೆಂಡೆನ್ಸ್ ರಸ್ತೆ, ತಿಮ್ಮಯ್ಯ ರಸ್ತೆ ಮೂಲಕ ಇಲ್ಲವೇ ಬಲ ತಿರುವು ಪಡೆದು ಕ್ಯಾಟಲ್ ರಸ್ತೆ, ಗಾಂಧಿ ಸರ್ಕಲ್ ಮೂಲಕ ಸುತ್ತುವರಿದು ಶೌರ್ಯ ಸರ್ಕಲ್ ಸೇರುತ್ತಿದ್ದಾರೆ. ನಗರದತ್ತ ಬರುವ ವೇಳೆಯೂ ಶೌರ್ಯ ಸರ್ಕಲ್‌ದಿಂದ ಎಡ ಇಲ್ಲವೇ ಬಲ ತಿರುವು ಪಡೆದು ಸುತ್ತುವರಿದು ನಗರಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ, ಸಾರಿಗೆ ಬಸ್‌ಗಳು ಸೇರಿದಂತೆ ಬಹುತೇಕ ವಾಹನಗಳ ಸವಾರರು ರಸ್ತೆ ಹದಗೆಟ್ಟಿದ್ದರೂ ಇದೇ ರಸ್ತೆಯನ್ನೇ ಅವಲಂಬಿಸಿದ್ದಾರೆ.ಓಡಾಟ ಅನಿವಾರ್ಯ:

ಬೈಕ್, ಕಾರುಗಳಂತಹ ಖಾಸಗಿ ವಾಹನಗಳು ಹೇಗಾದರೂ ಸುತ್ತಿ ಬಳಸಿ ಓಡಾಡುತ್ತಿದ್ದಾರೆ. ಆದರೆ, ಸಾರಿಗೆ ಸಂಸ್ಥೆಯ ಬಸ್ ಹಾಗೂ ಆಟೋಗಳಿಗೆ ಈ ರಸ್ತೆಯೇ ಅನಿರ್ವಾಯವಾಗಿದೆ. ಬೆನಕನಹಳ್ಳಿ, ಗಣೇಶಪುರ, ಬೆಳಗುಂದಿ, ರಕ್ಕಸಕೊಪ್ಪ, ಕವಳೇವಾಡಿ, ಬಡಸ, ಬಾಕನೂರ ಸೇರಿದಂತೆ ಹತ್ತಾರು ಹಳ್ಳಿಗಳ ಬಯ್‌ಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಇದರಿಂದಾಗಿ ಜನರ ತಾಪತ್ರಯಕ್ಕೆ ಮುಕ್ತಿ ಇಲ್ಲದಂತಾಗಿದೆ.-------

ಕೋಟ್:ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಓಡಾಡಲು ತುಂಬಾ ತೊಂದರೆ ಯಾಗುತ್ತಿದೆ. ಈ ರಸ್ತೆಯಲ್ಲಿ ಓಡಾಡಲು ಭಯವಾಗುತ್ತದೆ. ಆದ್ಧರಿಂದ ಕೂಡಲೇ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಈ ಬಗ್ಗೆ ಕ್ರಮ ವಹಿಹಿಸಿ ರಸ್ತೆ ದುರಸ್ತಿ ಮಾಡಿಸಬೇಕು.- ಪ್ರದೀಪ ಪಾಟೀಲ, ಸ್ಥಳೀಯ ನಿವಾಸಿ