ಕೆಲಗೇರಿ ಕೆರೆ ತ್ಯಾಜ್ಯಮುಕ್ತಗೆ 20 ದಿನ ಗಡುವು

| Published : Nov 22 2024, 01:18 AM IST

ಸಾರಾಂಶ

ಕೆರೆ ನಿರ್ವಹಣೆ ಹಾಗೂ ಕೆರೆ ಮಾಲಿಕತ್ವ ಸೇರಿದಂತೆ ಎಲ್ಲರನ್ನು ಈ ಪ್ರಕರಣದಲ್ಲಿ ಪಕ್ಷಗಾರರನ್ನಾಗಿ ಮಾಡಲಾಗುತ್ತದೆ. ಕೆರೆಗೆ ಸಂಬಂಧಿಸಿದ ಎಲ್ಲ ದಾಖಲೆ ಮತ್ತು ತಾಂತ್ರಿಕ ವರದಿ ಸಲ್ಲಿಸಬೇಕು. ಪಾಲಿಕೆಯವರು ಈಗಾಗಲೇ ₹ 150 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ಧಗೊಳಿಸಿರುವುದಾಗಿ ತಿಳಿಸಿದ್ದಾರೆ. ಇದನ್ನು ಸಹ ಪಡೆದುಕೊಂಡು ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ, ಕೆರೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇನೆ.

ಧಾರವಾಡ:

ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ 1911ರಲ್ಲಿ ನಿರ್ಮಿಸಿರುವ ಇಲ್ಲಿಯ ಕೆಲಗೇರಿ ಕೆರೆಯು ಚರಂಡಿ ನೀರು, ಅಂತರಗಂಗೆ, ಕಳೆ, ಕಸದಿಂದ ತುಂಬಿದ್ದು, ಕಸಮುಕ್ತಗೊಳಿಸಲು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರು 20 ದಿನದ ಗಡುವು ನೀಡಿದ್ದಾರೆ. ಇಲ್ಲದೇ ಹೋದಲ್ಲಿ ಈ ವರೆಗೆ ಆಗಿರುವ ಕರ್ತವ್ಯಲೋಪ ಗುರುತಿಸಿ, ಸೂಕ್ತ ತನಿಖೆ ಕೈಗೊಳ್ಳಲು ಸ್ವಯಂ ದೂರು ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಬೆಳಗ್ಗೆ ಕೆಲಗೇರಿ ಕೆರೆಗೆ ಭೇಟಿ ನೀಡಿ ಕೆರೆ ಮಾಲೀಕತ್ವ ಹೊಂದಿರುವ ಕೃಷಿ ವಿಶ್ವವಿದ್ಯಾಲಯ ಹಾಗೂ ಹು-ಧಾ ಮಹಾನಗರ ಪಾಲಿಕೆಗೆ ನ್ಯಾಯಮೂರ್ತಿಗಳು ಈ ಎಚ್ಚರಿಕೆ ನೀಡಿದರು. ಇದಕ್ಕೂ ಮುಂಚೆ ಅವರು ಸಾರ್ವಜನಿಕರೊಂದಿಗೆ ಸ್ವತಃ ಎರಡು ಕಿಲೋ ಮೀಟರ್‌ ದೂರ ಕೆರೆ ದಂಡೆಯ ಮೇಲೆ ನಡೆಯುವ ಮೂಲಕ ಕೆರೆಯ ಅವ್ಯವಸ್ಥೆ ಪರಿಶೀಲಿಸಿದರು. ಕೆರೆ ನಿರ್ವಹಣೆ ಹಾಗೂ ಕೆರೆ ಮಾಲಿಕತ್ವ ಸೇರಿದಂತೆ ಎಲ್ಲರನ್ನು ಈ ಪ್ರಕರಣದಲ್ಲಿ ಪಕ್ಷಗಾರರನ್ನಾಗಿ ಮಾಡಲಾಗುತ್ತದೆ. ಕೆರೆಗೆ ಸಂಬಂಧಿಸಿದ ಎಲ್ಲ ದಾಖಲೆ ಮತ್ತು ತಾಂತ್ರಿಕ ವರದಿ ಸಲ್ಲಿಸಬೇಕು. ಪಾಲಿಕೆಯವರು ಈಗಾಗಲೇ ₹ 150 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ಧಗೊಳಿಸಿರುವುದಾಗಿ ತಿಳಿಸಿದ್ದಾರೆ. ಇದನ್ನು ಸಹ ಪಡೆದುಕೊಂಡು ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ, ಕೆರೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಉಪ ಲೋಕಾಯುಕ್ತರು ತಿಳಿಸಿದರು.

ಬೊಟ್ಟು ತೋರಿಸಬೇಡಿ:

ಕೆಲಗೇರಿ ಕೆರೆ ನಿರ್ವಹಣೆ ಮತ್ತು ಮಾಲಿಕತ್ವದ ವಿಚಾರದಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಮಹಾನಗರಪಾಲಿಕೆಗಳು ಪರಸ್ಪರ ಬೊಟ್ಟು ತೋರಿಸಿ, ಕೆರೆ ಸ್ವಚ್ಛತೆ, ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದ್ದಾರೆ. ಕೆರೆಯಲ್ಲಿ ಸಾಕಷ್ಟು ಅಂತರಗಂಗೆ ಬೆಳೆದಿದೆ. ಕೆರೆ ವಾಕಿಂಗ್ ಪಾಥ್‌ನಲ್ಲಿ ಗಿಡಗಂಟಿ ಬೆಳೆದಿದೆ. ಚರಂಡಿ ನೀರು ಕೆರೆ ಸೇರುತ್ತಿದೆ. ಕೆರೆಯ ಸುತ್ತಲಿನ ಜನ ಮನೆಯ ದಿನಬಳಕೆ ತ್ಯಾಜ್ಯ, ಕಸಕಡ್ಡಿ ತಂದು ಕೆರೆಯಲ್ಲಿ ಹಾಕುತ್ತಿದ್ದಾರೆ. ಇದರ ಬಗ್ಗೆ ಯಾರು ಗಮನ ಹರಿಸಿಲ್ಲ ಎಂದು ತಮ್ಮ ಅಸಮಾದಾನ ವ್ಯಕ್ತಪಡಿಸಿದರು.

ಸ್ವಯಂ ಪ್ರಕರಣ:

ಹಿರಿಯ ನಾಗರಿಕರ ಮತ್ತು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕೆರೆ ನಿರ್ವಹಣೆ ಮತ್ತು ಸಾರ್ವಜನಿಕರ ಆರೋಗ್ಯ, ಹಿತಾಸಕ್ತಿ ಕುರಿತು ನಿರ್ಲಕ್ಷ್ಯವಹಿಸಿ, ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ. ಕೆಲಗೇರಿ ಕೆರೆ ನಿರ್ವಹಣೆ ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲು ಸ್ವಯಂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕೆಲಗೇರಿ ಕೆರೆ ಸುತ್ತಲಿನ ಜನರಲ್ಲಿ ಸ್ವಚ್ಛತೆ, ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪಾಲಿಕೆಯಿಂದ ಕೆರೆಯ ಸುತ್ತ ತಂತಿ ಬೇಲಿ ಅಳವಡಿಸಬೇಕು. ಸಾಧ್ಯವಾದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸಲಹೆ ನೀಡಿದರು.

ಪೊಲೀಸ್ ಬಿಟ್ ಹೆಚ್ಚಿಸಿ:

ಕೆರೆಯ ಸುತ್ತ ಕುಡುಕರ, ಪುಂಡರ ಕಾಟ ಹೆಚ್ಚಾಗಿದೆ. ರಾತ್ರಿ ಕೆರೆಯ ದಂಡೆಯ ಪುಟ್‌ಪಾತ್‌ ಮೇಲೆ ಎಣ್ಣಿ ಪಾರ್ಟಿ ಮಾಡುತ್ತಾರೆ. ಕೇಳಿದರೆ ಹಲ್ಲೆಗೆ ಮುಂದಾಗುತ್ತಾರೆ. ವೃದ್ಧರು, ಹೆಣ್ಣುಮಕ್ಕಳು, ಸಣ್ಣ ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಇದಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್‌ ನೀಡಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ಪೊಲೀಸ್ ಬಿಟ್ ಹೆಚ್ಚಿಸುವಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ, ದುರ್ವತನೆ ತೋರುವ ಹಾಗೂ ಸಾರ್ವಜನಿಕ ಶಾಂತಿ ಭಂಗ ಮಾಡುವವರ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿ, ಕಠಿಣ ಕ್ರಮ ಜರುಗಿಸಿವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಪಂನ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ನಿಬಂಧಕ ಪಿ. ಶ್ರೀನಿವಾಸ, ಹಿರಿಯ ಸಿವಿಲ್ ನ್ಯಾಯಾಧೀಶ, ನ್ಯಾಯಾಧೀಶರಾದ ಪರಶುರಾಮ ದೊಡ್ಡಮನಿ, ಕಿರಣ ಪಿ.ಎಂ.ಪಾಟೀಲ್ ಇದ್ದರು. ಬೆಚ್ಚಗೆ ಮಲಗಿದ್ದಾರೆಯೇ ಕೃಷಿ ವಿವಿ ಕುಲಪತಿ...

ಕೆಲಗೇರಿ ಕೆರೆಯ ಮಾಲೀಕತ್ವ ಕೃಷಿ ವಿವಿಯದ್ದು. ಆದರೆ, ಕುಲಪತಿ ಡಾ. ಪಿ.ಎಲ್‌. ಪಾಟೀಲ ಬದಲು ವಿವಿ ಎಂಜಿನಿಯರ್‌ ಒಬ್ಬರನ್ನು ತಮ್ಮ ಪರವಾಗಿ ಕಳುಹಿಸಿದ್ದರು. ಇದಕ್ಕೆ ಕೋಪಗೊಂಡ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು, ನಿಮ್ಮ ಕುಲಪತಿ ಚಳಿಯಲ್ಲಿ ಇನ್ನೂ ಮಲಗಿದ್ದಾರೆಯೇ? ಕೆರೆಯ ನೀರು ಪಡೆಯುವ ವಿವಿ ಸ್ವಚ್ಛತಾ ವಿಷಯದಲ್ಲಿ ಏನು ಕ್ರಮಕೈಗೊಂಡಿದೆ. ನಾವು ಬರುವುದಾಗಿ ಮೊದಲೇ ಮಾಹಿತಿ ನೀಡಿದ್ದರೂ ಬರದೇ ಬೇಜವಾಬ್ದಾರಿ ಏಕೆ? ಅವರ ಈ ವರ್ತನೆಯನ್ನು ರಾಜ್ಯಪಾಲರ ಗಮನಕ್ಕೆ ತರುವುದಾಗಿ ನ್ಯಾಯಮೂರ್ತಿಗಳು ಎಚ್ಚರಿಸಿದರು.