ಸಾರಾಂಶ
ಕನಕಗಿರಿ:
ಕೆಜಿಗೆ ₹200ವರೆಗೂ ಮಾರಾಟವಾಗಿದ್ದ ಟೊಮ್ಯಾಟೊ ಹಣ್ಣಿಗೆ ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಾಗಿದೆ. ರೈತರು ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾರೆ.ಎರಡು ತಿಂಗಳಿಂದ ಟೊಮ್ಯಾಟೊ ಕೆಜೆಗೆ ₹200ವರೆಗೂ ದರ ಏರಿಕೆಯಾಗಿತ್ತು. ಈ ನಡುವೆ ರಾಜ್ಯದಲ್ಲಿಯೇ ಮೊದಲ ಬಾರಿ ಎಂಬಂತೆ ದಾಖಲೆ ಪ್ರಮಾಣದಲ್ಲಿ ಟೊಮ್ಯಾಟೊಕ್ಕೆ ಭಾರಿ ಬೇಡಿಕೆ ಬಂದಿತ್ತು. ನೆರೆಯ ರಾಜ್ಯಗಳಿಂದಲೂ ಬೆಂಗಳೂರು ಮಾರುಕಟ್ಟೆಗೆ ಟೊಮ್ಯಾಟೊ ತಂದು ಮಾರಾಟ ಮಾಡಿ ಅತ್ಯಧಿಕ ಲಾಭ ಪಡೆದವರಲ್ಲಿ ರೈತರಿಗಿಂತ ಕಮಿಷನ್ ಏಜೆಂಟ್‌ಗಳೇ ಹೆಚ್ಚು. ಆದರೆ, ರೈತ ಮಾತ್ರ ತಾನು ಬೆಳೆದ ಫಸಲಿನೊಂದಿಗೆ ಮಾರುಕಟ್ಟೆಗೆ ಬಂದು ಒಳ್ಳೆಯ ಲಾಭ ಪಡೆದುಕೊಂಡಿದ್ದ. ಟೊಮ್ಯಾಟೊ ದರ ಕೇಳಿದ ಗೃಹಣಿಯರು ಕೂಡ ತಲ್ಲಣಗೊಂಡಿದ್ದರು. ಆದರೆ ಈಗ ₹5ಗೆ ಕುಸಿದಿದೆ.ಜಿಲ್ಲೆಯ ನೂರಾರು ರೈತರು ಟೊಮ್ಯಾಟೊ ಬೆಳೆದಿದ್ದು, ದರ ಸಿಗದೇ ಕಂಗಲಾಗಿದ್ದಾರೆ. ಇದ್ದ ಅಲ್ಪ-ಸ್ವಲ್ಪ ನೀರಿನಿಂದ ಹೊಟ್ಟೆಪಾಡು ನಡೆಯಲು ಟೊಮ್ಯಾಟೊ ಬೆಳೆ ಬೆಳೆದ ರೈತರಿಗೆ ದರ ಸಿಗದೇ ಆತಂಕಗೊಂಡಿದ್ದಾರೆ.ತಾಲೂಕಿನ ಬಸರಿಹಾಳದ ಯಮನಪ್ಪ ಚಿಂಚಲಿ ಎಂಬ ರೈತ 3.24 ಎಕರೆ ಜಮೀನಿನ ಪೈಕಿ ಎರಡಯ ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾನೆ. ಪ್ರತಿ ಎಕರೆಗೆ ₹40,000-50,000 ಖರ್ಚು ಮಾಡಿ ಬೆಳೆದಿರುವ ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಬಾಕ್ಸ್‌ವೊಂದಕ್ಕೆ ₹50-60ವರೆಗೆ ಹರಾಜಾಗುತ್ತಿದೆ. ರೈತ ಕೂಲಿ ಕಾರ್ಮಿಕರಿಗೆ ಕೂಲಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ.ಎರಡು ಎಕರೆಯಲ್ಲಿ ಬೆಳೆದ ಟೊಮ್ಯಾಟೊ ಉತ್ತಮ ಇಳುವರಿ ಬಂದಿದೆಯಾದರೂ ದರ ಸಿಗದೇ ರೈತರು ಜೀವನ ನಡೆಸಲು ಸಮಸ್ಯೆಯಾಗಿದೆ. ಈ ಬಾರಿ ರೈತರಿಗೆ ಬರಗಾಲದ ಜತೆಗೆ ಬೆಳೆದ ಬೆಳೆಗೂ ದರ ಸಿಗದಂತಾಗಿ ಆರ್ಥಿಕ ಹೊಡೆತ ಕೊಟ್ಟಿದೆ. ಕಳೆದ ವರ್ಷದಂತೆ ಈ ವರ್ಷವೂ ಮಳೆಯಾಗಲೆಂದು ಪ್ರಾರ್ಥಿಸಿದ ರೈತರು ಉತ್ತಮ ಬೆಳೆ ಬೆಳೆಯುವ ನೀರಿಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಬಾರಿ ಮುಂಗಾರು, ಹಿಂಗಾರು ಮಳೆಗಳು ಸಂಪೂರ್ಣ ಕೈಕೊಟ್ಟಿವೆ. ಮಳೆಯಾಶ್ರಿತ ಪ್ರದೇಶದ ರೈತರ ಪರಿಸ್ಥಿತಿ ಹೇಳತೀರದು. ಸಾಲದ ಸುಳಿಗೆ ಸಿಲುಕಿದ ರೈತರು ಜೀವನ ನಿರ್ವಹಣೆ ಹೇಗಪ್ಪಾ? ಎನ್ನುವ ಚಿಂತೆ ಕಾಡತೊಡಗಿದೆ.ಗಿಡದಲ್ಲೇ ಕೊಳೆಯುತ್ತಿವೆ ಟೊಮ್ಯಾಟೊ: ಮಾರುಕಟ್ಟೆಯಲ್ಲಿ ತೀರಾ ಕುಸಿತ ಕಂಡಿರುವ ಟೊಮ್ಯಾಟೊವನ್ನು ಯಾರೂ ಕೇಳುವವರಿಲ್ಲ. ತೋಟದಲ್ಲಿ ಸಂಗ್ರಹಿಸಿದ ಕಾರ್ಮಿಕರಿಗೆ ಹಣ ಸಿಗದಿದ್ದಕ್ಕೆ ರೈತ ಯಮನಪ್ಪ ಟೊಮ್ಯಾಟೊ ಹರಿಯುವುದನ್ನೇ ಬಿಟ್ಟಿದ್ದು, ಗಿಡದಲ್ಲಿಯೇ ಟೊಮ್ಯಾಟೊ ಕೊಳೆಯುತ್ತಿವೆ.ಬೋರ್‌ವೆಲ್ ನೀರಿನಿಂದ ಎರಡು ಎಕರೆ ಟೊಮ್ಯಾಟೊ ಬೆಳೆದಿದ್ದೇನೆ. ಉತ್ತಮ ಇಳುವರಿ ಬಂದಿದೆ. ಆದರೆ ಬೆಳೆಗೆ ತಕ್ಕಂತೆ ದರ ಸಿಗುತ್ತಿಲ್ಲ. ಕಾರ್ಮಿಕರಿಗೆ ಕೂಲಿ ಕೊಡಲೂ ಹಣ ಇಲ್ಲವಾಗಿದೆ. ಹೀಗಾಗಿ ಟೊಮ್ಯಾಟೊವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದನ್ನೇ ಬಿಟ್ಟಿದ್ದೇನೆ. -ಯಮನಪ್ಪ ಚಿಂಚಲಿ, ರೈತ