ಸಾರಾಂಶ
ನೋಡು ನೋಡುತ್ತಿದ್ದಂತೆ 2024 ಮುಗಿಯುತ್ತಾ ಬಂದಿದೆ. ಹೀಗೆ ಅವಸರದಲ್ಲಿಯೇ ಮುಗಿದಂತೆ ಕಾಣುವ 2024 ಮಾತ್ರ ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಏರುಪೇರಾಗಲು ಕಾರಣವಾಗಿದೆ.
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಚುನಾವಣೆಗೂ ಮುನ್ನ ನಡೆದ ರಾಜಕೀಯ ಹೈಡ್ರಾಮಾ ನಾನಾ ಮಜಲುಗಳಿಗೆ ಸಾಕ್ಷಿಯಾಯಿತು. ಇದು, 2024ರಲ್ಲಿ ನಡೆದ ರಾಜಕೀಯದ ಭಾರಿ ಮಹತ್ವದ ಬೆಳವಣಿಗೆಗೂ ನಾಂದಿಯಾಯಿತು.ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸುತ್ತಿದ್ದ ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿ ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿಗೆ ಗುಡ್ ಬೈ ಹೇಳಿ, ಕಾಂಗ್ರೆಸ್ ಸೇರ್ಪಡೆಯಾದರು. ಇದರಿಂದ ಹ್ಯಾಟ್ರಿಕ್ ಬಾರಿಸಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಗುತ್ತಿದ್ದ ಬಿಜೆಪಿ ಪರಾಭವಗೊಂಡು ಕಾಂಗ್ರೆಸ್ ಗೆಲುವು ದಾಖಲಿಸಿತು.
ಬಿಜೆಪಿ ಸತತ ಹದಿನೈದು ವರ್ಷಗಳಿಂದ ಕಾಂಗ್ರೆಸ್‌ನ್ನು ಸೋಲಿಸುತ್ತಾ ಬಂದಿತ್ತು ಮತ್ತು ಒಂದು ಕಾಲಕ್ಕೆ ಕಾಂಗ್ರೆಸ್ ಕೋಟೆಯಾಗಿದ್ದ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಕೋಟೆ ಛಿದ್ರವಾಗಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಿತು.ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿತು. ಕೊನೆಯವರೆಗೂ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಸಂಗಣ್ಣ ಕರಡಿ ಟಿಕೆಟ್ ತಪ್ಪಿದ ಮೇಲೆಯೂ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ಬಸವರಾಜ ಕ್ಯಾವಟರ್ ಅವರ ಪರವಾಗಿ ಪ್ರಚಾರ ನಡೆಸಿದರು. ಅಚ್ಚರಿ ಎಂದರೆ ನನ್ನ ಹಿರಿತನಕ್ಕೆ ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲ, ನನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶಗೊಂಡು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾದರು.
ಇದರಿಂದ ಜಿಲ್ಲೆಯ ರಾಜಕೀಯದಲ್ಲಿ ಭಾರಿ ಸಂಚಲನ ಶುರುವಾಯಿತು. ಬಿಜೆಪಿ ನಾಯಕರಿಂದ ಸಂಸದ ಸಂಗಣ್ಣ ಕರಡಿ ಅವರನ್ನು ಮನವೊಲಿಸುವ ಪ್ರಯತ್ನ ಕೈಗೂಡಲೇ ಇಲ್ಲ.ಸತತ ಪ್ರಯತ್ನಿಸಿ ವಿಫಲವಾಗಿದ್ದ ಹಿಟ್ನಾಳ ಕುಟುಂಬಕ್ಕೆ ಗೆಲುವು ಸುಲಭವಾಯಿತು. ಸ್ಪರ್ಧಿಸಿದ್ದ ರಾಜಶೇಖರ ಹಿಟ್ನಾಳ ಗೆಲುವು ದಾಖಲಿಸುವ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಡಗಿ ಹೋಗಿದ್ದ ಕಾಂಗ್ರೆಸ್ ಪ್ರಭಾವವನ್ನು ಮತ್ತೆ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾದರು. ಜೊತೆಗೆ ತಾವೂ ಸಹ ಸತತ ಸೋಲಿನ ಸುಳಿಯಿಂದ ಪಾರಾದರು.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಥಾಪಿಸಿ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಗಾಲಿ ಜನಾರ್ದನರೆಡ್ಡಿ ಶಾಸಕರಾದರು. ಲೋಕಸಭಾ ಚುನಾವಣೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿ, ಬಿಜೆಪಿ ಸೇರ್ಪಡೆಯಾದರು.ಅಲ್ಲಿಯವರೆಗೂ ಬಿಜೆಪಿಯೊಂದಿಗೆ ಬದ್ಧ ವೈರಿಯಂತೆ ಇದ್ದ ಗಾಲಿ ಜನಾರ್ದನರೆಡ್ಡಿ ಅವರು ಮತ್ತೆ ಬಿಜೆಪಿ ಸೇರುವ ಮೂಲಕ ಬಿಜೆಪಿ ನಾಯಕರೊಂದಿಗೆ ಇದ್ದ ಮುನಿಸು ಶಮನ ಮಾಡಿಕೊಂಡರು.
ಇದೆಲ್ಲ ಬೆಳವಣಿಗೆ ನಡುವೆ ಡಾ. ಬಸವರಾಜ ಕ್ಯಾವಟರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಪರಾಭವಗೊಂಡರು.ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ:
ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆದಿದ್ದರೂ ಸಹ ಮೀಸಲಾತಿ ಗೊಂದಲದಿಂದ ಯಾವುದೇ ಆಡಳಿತ ಇರಲಿಲ್ಲ. ಅಧಿಕಾರಿ ಉಸ್ತುವಾರಿಗಳಲ್ಲಿಯೇ ನಡೆಯುತ್ತಿದ್ದ ಸ್ಥಳೀಯ ಸಂಸ್ಥೆಯಲ್ಲಿ ಮೀಸಲು ಸಮಸ್ಯೆ ಇತ್ಯರ್ಥವಾಗಿ, ಭಾಗ್ಯನಗರ, ಕೊಪ್ಪಳ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯಲ್ಲಿ ಹಲವು ವರ್ಷಗಳ ಸಮಸ್ಯೆ ಇತ್ಯರ್ಥವಾಗಿ ಅಧಿಕಾರ ಚುಕ್ಕಾಣಿಯನ್ನು 2024ರಲ್ಲಿ ಹಿಡಿಯಲಾಯಿತು.ಜಿಲ್ಲಾಧ್ಯಕ್ಷರ ನೇಮಕ:ಕಾಂಗ್ರೆಸ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರು ಬದಲಾಗಿದ್ದು 2024ರಲ್ಲಿಯೇ. ಇದು ಜಿಲ್ಲೆಯ ರಾಜಕೀಯದಲ್ಲಿ ಬಹುದೊಡ್ಡ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ನೇಮಕವಾದರೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನವೀನ ಗುಳಗಣ್ಣವರ ನೇಮಕವಾದರು. ಕಾಂಗ್ರೆಸ್‌ನಲ್ಲಿ ಅಷ್ಟಾಗಿ ಪೈಪೋಟಿ ಇರಲಿಲ್ಲವಾದರೂ ಬಿಜೆಪಿಯಲ್ಲಿ ಮಾತ್ರ ಭಾರಿ ಪೈಪೋಟಿಯಾಗಿ ಕೊನೆಗೆ ಹೈಕಮಾಂಡ್ ತೀರ್ಮಾನದಂತೆ ನೇಮಕ ಮಾಡಲಾಯಿತು.