ಸಾರಾಂಶ
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ1860ರಲ್ಲಿ ಅಂದರೆ 164 ವರ್ಷಗಳ ಹಿಂದೆ ಆರಂಭಗೊಂಡು 8 ವರ್ಷಗಳ ಹಿಂದಷ್ಟೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಶಾಲೆಯಲ್ಲಿ ಇದೀಗ ಅನೇಕ ಸಮಸ್ಯೆಗಳು ಉದ್ಭವಿಸಿದ್ದು, ಇದರಿಂದ ಅಲ್ಲಿಯ ವಿದ್ಯಾರ್ಥಿಗಳು ಪರದಾಟ ಅನುಭವಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅದರಲ್ಲೂ ಶೌಚಾಲಯ ಇದ್ದರೂ ಬಯಲೇ ಗತಿಯಾಗಿದೆ.
ಪಟ್ಟಣದ ಬೇವಿನಕಟ್ಟಿ ಓಣಿಯಲ್ಲಿ ಬ್ರಿಟಿಷರ ಕಾಲದಲ್ಲಿ 164 ವರ್ಷಗಳ ಹಿಂದೆಯೇ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿದೆ. ಕಾಲಾಂತರದಲ್ಲಿ ಶಾಲೆ ಶಿಥಿಲಗೊಂಡಿದ್ದರಿಂದ ನಂತರ ಅಂಬೇಡ್ಕರ್ ವೃತ್ತದ ಹತ್ತಿರ 2016ರಲ್ಲಿ 01ರಿಂದ 07ನೇ ತರಗತಿಯವರೆಗೆ ಸ್ಥಳಾಂತರಗೊಂಡಿತು. ಆಗ ಶಾಸಕರ ಮಾದರಿ ಶಾಲೆಯಲ್ಲಿ ಸುಮಾರು 560 ಜನ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಬೇಕಾದ ಸುಮಾರು 15 ಕೊಠಡಿಗಳ ನಿರ್ಮಾಣ ಮಾಡಲಾಗಿತ್ತು. ಅಂದು ಸುಮಾರು 16 ಜನ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತಿದ್ದರು. ಇಂದು ಅದೇ ಶಾಲೆಯಲ್ಲಿ ಸುಮಾರು 210 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸುಮಾರು 8 ಕೊಠಡಿಗಳು ಪ್ರಾಥಮಿಕ ಶಾಲೆಗೆ ಬಳಕೆ ಮಾಡಿಕೊಂಡು ಉಳಿದ 6 ಕೊಠಡಿಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಪಯೋಗ ಮಾಡುತ್ತಿದ್ದಾರೆ.ಶೌಚಾಲಯದ್ದೇ ಪರದಾಟ:
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 210 ಮಕ್ಕಳಿಗೆ ಇರುವುದು ಒಂದೇ ಶೌಚಾಲಯವಿದೆ. ಅದು ನೀರು ಹಾಗೂ ನಿರ್ವಹಣೆಯ ಸಮಸ್ಯೆಯಿಂದ ಯಾವಾಗಲೂ ಬೀಗ ಹಾಕಲಾಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಬಯಲೇ ಗತಿ ಎನ್ನುವ ಹಾಗಾಗಿದೆ. ಇದೇ ಶಾಲಾ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತಿರದು. ರಾ.ಹೇ ದಾಟಿ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿ ಶೌಚಕ್ಕೆ ತೆರಳಬೇಕಾದ ಪರಿಸ್ಥಿತಿ ಇದರಿಂದ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.ಮಳೆ ಬಂದರೆ ಪರದಾಟ:
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸೇರಿ ಹಲವು ಸಮಸ್ಯೆಗಳಿದ್ದರೂ ಶಿಕ್ಷಣ ಇಲಾಖೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಸಮಸ್ಯೆಗಳ ನಡುವೆ ಕಲಿಕೆಯಲ್ಲಿ ತೊಡಗಬೇಕಿರುವ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ. ಶಾಲೆಯಲ್ಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಘಟಕಗಳಿರಬೇಕು ಎಂಬ ಮಾನದಂಡವಿದ್ದರು ಪ್ರಯೋಜನವಿಲ್ಲ. ಪಟ್ಟಣದ ಹೃದಯ ಭಾಗದಲ್ಲಿರುವ ಶತಮಾನದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಲವು ಕೊಠಡಿಗಳು ಶಿಥಿಲಗೊಂಡಿದ್ದು ಮಳೆ ಬಂದರೆ ಮಕ್ಕಳು ಪರದಾಡುವಂತಾಗಿದೆ.ಪಟ್ಟಣದ ಈ ಶಾಲೆ ಬಗ್ಗೆ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಗಮನ ಹರಿಸಿ, ಶಾಸಕರ ಅನುದಾನ ಅಥವಾ ಯಾವುದಾದರೂ ರೂಪದಲ್ಲಿ ನೆರವು ನೀಡಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಬೇಕೆಂಬುದು ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.
-----ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿ
ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕಿಗೆ ಮಾದರಿ ಶಾಲೆಯಾಗಿ, ಮೂಲಭೂತ ಸೌಕರ್ಯಗಳ ಲಭ್ಯತೆಯ ಬಗ್ಗೆ ಸರ್ಕಾರಿ ಶಾಲಾ ಮಕ್ಕಳಿಗೆ ಮನವರಿಕೆ ಮಾಡಿಕೊಡುವಂತೆ ಇರಬೇಕಿತ್ತು. ಆದರೆ, ಮಾದರಿ ಶಾಲೆಯಲ್ಲಿ ಕನಿಷ್ಠ ಶೌಚಾಲಯವೇ ಸರಿ ಯಾಗಿಲ್ಲದಿರುವುದು ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿ ಎನ್ನಬಹುದಾಗಿದೆ.---
ಪಟ್ಟಣ ಮಕ್ಕಳ ಸ್ಥಿತಿ ಶೋಚನೀಯಹಳ್ಳಿಗಳ ಶಾಲೆಗಳಲ್ಲಿ ಶೌಚಾಲಯವಿಲ್ಲ ಎಂದರೆ ಬಯಲನ್ನಾದರೂ ಉಪಯೋಗಿಸುತ್ತಾರೆ. ಪಟ್ಟಣದ ಶಾಲೆಗಳಲ್ಲಿ ಶೌಚಾಲಯದ ಸೌಲಭ್ಯ ಸರಿಯಿಲ್ಲದಿದ್ದರೆ ಮಕ್ಕಳ ಸ್ಥಿತಿ ಏನಾಗಬೇಕು. ಶೌಚಾಲಯದ ಬಾಗಿಲು ಮುರಿದು, ಪೈಪುಗಳು ಕಿತ್ತು ಹೋಗಿರುವ ಶೌಚಾಲಯದ ಒಳಗೆ ಮಕ್ಕಳು ಹೋಗುವುದಾದರೂ ಹೇಗೆ? ಅದನ್ನು ಬಳಕೆ ಮಾಡುವುದಾದರೂ ಹೇಗೆ? ಇಂತಹ ಪರಿಸ್ಥಿತಿ ಪಟ್ಟಣದ ಸರ್ಕಾರಿ ಶಾಲೆಯಲ್ಲಿದೆ ಎಂದರೆ ಸರ್ಕಾರಕ್ಕೆ ಇದಕ್ಕಿಂತ ಅವಮಾನದ ಸಂಗತಿ ಬೇರೊಂದಿಲ್ಲ.
---ಕೋಟ್
ಪಟ್ಟಣದ ಶಾಲೆಗಳ ಶೌಚಾಲಯದ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪ್ರೊಪೋಸಲ್ ಕಳಿಸಲಾಗಿತ್ತು. ಮಹತ್ವಾಕಾಂಕ್ಷಿ ಯೋಜನೆ ಅಡಿಯಲ್ಲಿ ಮಾದರಿ ಶಾಲೆಗೆ ಸುಮಾರು ₹5.20 ಲಕ್ಷ ಅನುದಾನ ಬಿಡುಗಡೆ ಆಗಿದೆ. ಶೀಘ್ರದಲ್ಲಿ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಶಾಸಕರಿಗೆ ತಿಳಿಸಲಾಗುವುದು. ಪಟ್ಟಣದ ಹಳೆಯ ಶಾಲೆಯನ್ನು ಗ್ರಂಥಾಲಯದ ಬಳಕೆಗಾಗಿ ಇಲಾಖೆಯಿಂದ ಬಿಟ್ಟುಕೊಡಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.-ಆರೀಫ್ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂದಗಿ.
--------ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಶಾಲೆ ಪಾಳು ಬಿದ್ದಿರುವುದು ವಿಪರ್ಯಾಸ. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅದರ ಬಳಕೆಗೆ ಒತ್ತಾಯಿಸಿದ್ದೆವು. ಅಧಿಕಾರಿಗಳು ಸ್ಪಂದಿಸದಿರುವುದಕ್ಕೆ ಈ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ರಾಜ್ಯ ಅಂತರ್ ರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಶಾಲೆ ಸ್ವಚ್ಛತೆಗಾಗಿ ನಮ್ಮ ಗೆಳೆಯರ ಬಳಗ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಸೋಮನಾಥ ದೇವೂರ, ಯುವ ಮುಖಂಡರು ದೇವರಹಿಪ್ಪರಗಿ.