ಕಳೆದ ಹತ್ತು ವರ್ಷಗಳಲ್ಲಿ 213 ದೌರ್ಜನ್ಯ ಪ್ರಕರಣಗಳು ದಾಖಲು: ಡಿಸಿ ದಿವ್ಯಪ್ರಭು

| Published : Oct 01 2024, 01:41 AM IST

ಕಳೆದ ಹತ್ತು ವರ್ಷಗಳಲ್ಲಿ 213 ದೌರ್ಜನ್ಯ ಪ್ರಕರಣಗಳು ದಾಖಲು: ಡಿಸಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಜೂನ್ ತಿಂಗಳಲ್ಲಿ ಎಂಟು, ಜುಲೈನಲ್ಲಿ 12 ಮತ್ತು ಆಗಸ್ಟ್ ತಿಂಗಳಲ್ಲಿ ಐದು ಪ್ರಕರಣಗಳು ಸೇರಿ 2014 ರಿಂದ ಇಲ್ಲಿವರೆಗೆ ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಒಟ್ಟು 213 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಧಾರವಾಡ: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನ್ಯಾಯಾಲಯಗಳಲ್ಲಿ ಕಾಲಮಿತಿಯಲ್ಲಿ ಪ್ರಕರಣಗಳು ಇತ್ಯರ್ಥವಾಗುವಂತೆ ಕ್ರಮವಹಿಸಿ, ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆ ಆಗುವಂತೆ ಸಮರ್ಥ ಪುರಾವೆಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಸಿ., ಎಸ್.ಟಿ., ದೌರ್ಜನ್ಯ ತಡೆ ಕಾಯ್ದೆ ಪ್ರಗತಿ ಪರಿಶೀಲನೆ ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆ ಜರುಗಿಸಿದ ಅವರು, ಕಳೆದ ಜೂನ್ ತಿಂಗಳಲ್ಲಿ ಎಂಟು, ಜುಲೈನಲ್ಲಿ 12 ಮತ್ತು ಆಗಸ್ಟ್ ತಿಂಗಳಲ್ಲಿ ಐದು ಪ್ರಕರಣಗಳು ಸೇರಿ 2014 ರಿಂದ ಇಲ್ಲಿವರೆಗೆ ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಒಟ್ಟು 213 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಐದು ಪ್ರಕರಣಗಳು ಇತ್ಯರ್ಥವಾಗಿದ್ದು, 208 ಪ್ರಕರಣಗಳು ಬಾಕಿ ಇವೆ. ಬಾಕಿ ಪ್ರಕರಣಗಳ ಪೈಕಿ 18 ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯದಲ್ಲಿ ತಡೆ ಆಜ್ಞೆ ಇದೆ. ಪ್ರತಿ ಪ್ರಕರಣವನ್ನು ಸೂಕ್ತವಾಗಿ ಪರಿಶೀಲಿಸಿ, ಆದಷ್ಟು ಬೇಗ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು ಎಂದರು.

ದೌರ್ಜನ್ಯ ಪ್ರಕರಣಗಳಿಗೆ ಮಂಜೂರಿಯಾದ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಎಸ್.ಸಿ., ಎಸ್.ಟಿ ಜನರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಿ, ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಅಧಿಕಾರಿಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಅನುಕಂಪ ಆಧಾರಿತ ಉದ್ಯೋಗ ನೀಡಲು ವಿಳಂಬ ಮಾಡಬಾರದು. ಅರ್ಹರು ಇದ್ದಲ್ಲಿ ನಿಯಮಾವಳಿ ಪ್ರಕಾರ ತಕ್ಷಣ ಉದ್ಯೋಗ ನೀಡಲು ಕ್ರಮವಹಿಸಬೇಕು. ಭೂ ಒಡೆತನ ಯೋಜನೆ ಅನುಷ್ಠಾನಕ್ಕೆ ಅಗತ್ಯ ಭೂಮಿ ಗುರುತಿಸಿ, ಖರೀದಿಗೆ ಅಗತ್ಯ ಕ್ರಮವಹಿಸಬೇಕು. ವಸತಿ ನಿಲಯಪಾಲಕರು ಸ್ಥಾನಿಕವಾಗಿದ್ದು, ಗ್ರಾಮೀಣ ಭಾಗದ ವಿವಿಧ ವಸತಿ ನಿಲಯಗಳಲ್ಲಿ ನೇಮಕವಾಗಿರುವ ವಸತಿ ನಿಲಯ ಪಾಲಕರು ಕಡ್ಡಾಯವಾಗಿ ತಾವು ಕರ್ತವ್ಯ ನಿರ್ವಹಿಸುವ ಹಾಸ್ಟೆಲ್‌ಗಳಲ್ಲಿ ಇರಬೇಕು.

ಕೆಲವು ವಾರ್ಡನ್‌ಗಳು, ಹಾಸ್ಟೆಲ್‌ಗಳಲ್ಲಿ ರಾತ್ರಿವೇಳೆ ಮತ್ತು ಬಹುತೇಕ ಸಂದರ್ಭದಲ್ಲಿ ಇರುವುದಿಲ್ಲ ಎಂಬ ದೂರು ಬಂದಿವೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ವಾರ್ಡನ್ ಹಾಸ್ಟೆಲ್‌ನಲ್ಲಿ ಇರದಿದ್ದರೆ, ವಾರ್ಡನ್ ಜೊತೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಮೇಲೆ ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭಾ, ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ಡಿವೈಎಸ್‌ಪಿ ಎಸ್.ಎಂ. ನಾಗರಾಜ, ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ಟಿ. ಮತ್ತಿತರರು ಇದ್ದರು.