ಸಾರಾಂಶ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲವಿಗೆ ಇನ್ನಿಲ್ಲದ ಕಸರತ್ತು ನಡೆಸಿರುವ ಬಿಜೆಪಿ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆಸಿ ರೋಡ್ ಶೋ ನಡೆಸಲು ತೀರ್ಮಾನಿಸಿದ್ದು, ಇದಕ್ಕಾಗಿ ಏ.24ರಂದು ನಿಗದಿಯಾಗಿದೆ. ಮಾದಿಗರ ಮತ ಸೆಳೆಯಲು ಮಂದಕೃಷ್ಣ ಮಾದಿಗ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ನಡೆಸಿರುವುದರ ನಡುವೆಯೇ ಹಿಂದುಳಿದ ಮತ್ತು ಶೋಷಿತ ವರ್ಗಗಳ ಮಠಾಧೀಶರ ನೆಲೆವೀಡಾದ ಕೋಟೆನಾಡಿಗೆ ಯೋಗಿ ಆದಿತ್ಯನಾಥ್ ಎಂಟ್ರಿ ಕೊಡುತ್ತಿರುವುದು ಕುತೂಹಲ ಮೂಡಿಸಿದೆ.
ಯೋಗಿತ್ಯನಾಥ್ ರೋಡ್ ಶೋ ಸಂಬಂಧಿಸಿದಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಪ ಸದಸ್ಯ ರವಿಕುಮಾರ್, ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳನ್ನು ಒಳಗೊಂಡ ರೋಡ್ ಶೋ ಇದಾಗಿದ್ದು, ಚಿತ್ರದುರ್ಗದ ಪ್ರಮುಖ ಬೀದಿಯಲ್ಲಿ ಆಯೋಜಿಸಲಾಗಿದೆ. ಎರಡು ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಮಣಿಸುವುದು ರೋಡ್ ಶೋ ಉದ್ದೇಶವೆಂದರು.ಏ.19, 20, 21ರಂದು ಚಿತ್ರದುರ್ಗದ 35 ವಾರ್ಡ್‍ಗಳಲ್ಲಿಯೂ ಮನೆಮನೆಗೆ ಅಭಿಯಾನ ಹಮ್ಮಿಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮತಯಾಚಿಸಲಾಗುವುದು. 2167 ಬೂತ್‍ಗಳಿಗೂ ಅಭಿಯಾನ ಸಂಪರ್ಕಿಸಲಿದ್ದು, 21ರಂದು ರಾತ್ರಿ 8 ಗಂಟೆಯೊಳಗಾಗಿ ಶೇ.96ರಷ್ಟು ಮತದಾರರನ್ನು ತಲುಪುವ ಗುರಿಯಿಟ್ಟುಕೊಂಡಿದ್ದೇವೆಂದು ಹೇಳಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರ ಹಾಗೂ ನಗರದ 35 ವಾರ್ಡ್‍ಗಳಲ್ಲಿ ಅಭಿಯಾನ ಸಂಚರಿಸಲು ತಯಾರಿ ನಡೆಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ 40 ಸೀಟ್‌ಗಳನ್ನು ಗೆಲ್ಲುವುದು ಕಷ್ಟ. ದೇಶದೆಲ್ಲೆಡೆ ಮೋದಿ ಅಲೆ ಇರುವುದರಿಂದ ಚುನಾವಣೆಯಲ್ಲಿ ಗೆಲ್ಲುವ ಗೋವಿಂದ ಕಾರಜೋಳ ಕೇಂದ್ರ ಮಂತ್ರಿಯಾಗುವುದು ಖಚಿತ. ಕಾಂಗ್ರೆಸ್‍ಗೆ ಪಾರ್ಲಿಮೆಂಟ್‍ನಲ್ಲಿ ವಿರೋಧ ಪಕ್ಷದ ಸ್ಥಾನಮಾನ ಸಿಗುವುದು ಕಷ್ಟ ಎಂದರು.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮತಯಾಚಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಹಿರಿಯೂರು ಹಾಗೂ ಪರಶುರಾಂಪುರಕ್ಕೆ ಆಗಮಿಸಲಿದ್ದಾರೆ. ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಗೋವಿಂದ ಕಾರಜೋಳ ಗೆಲುವು ಸುಲಭವಾಗಲಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಯಾವುದೇ ಗೊಂದಲಗಳಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರಿಗೆ ಸ್ಪಷ್ಟ ನಿರ್ದೇಶನ ನೀಡಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಜೆಡಿಎಸ್ ಕಾರ್ಯಕರ್ತರು ಗೋವಿಂದ ಕಾರಜೋಳ ಗೆಲವಿಗೆ ಹಗಲಿರುಳು ಶ್ರಮಿಸಲಿದ್ದಾರೆ ಎಂದರು.ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಸಭೆ ಸದಸ್ಯರುಗಳಾದ ಶಶಿಧರ್, ಹರೀಶ್, ಭಾಸ್ಕರ್, ತಾರಕೇಶ್ವರಿ, ಮಂಜುಳ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ತಿಪ್ಪಮ್ಮ ವೆಂಕಟೇಶ್, ಅಭ್ಯರ್ಥಿ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿಯಲ್ಲಿದ್ದರು.